ನಟಿಯರನ್ನು ದೂಷಿಸಬೇಡಿ; 'ಪೆದ್ದಿ' ವಿವಾದದ ಬಗ್ಗೆ ನಟಿ ಆಶಿಕಾ ರಂಗನಾಥ್ ಪ್ರತಿಕ್ರಿಯೆ
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ವಿವಾದ ಕಾವೇರುತ್ತಲೇ ಇದೆ. ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ತೋರಿಸಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ಅಂತಹ ದೃಶ್ಯಗಳನ್ನು ತೆಗೆದು ಹಾಕುವುದಾಗಿಯೂ ಹೇಳಿದ್ದಾರೆ. ಇದೀಗ ವಿವಾದದ ಬಗ್ಗೆ ಕನ್ನಡ ನಟಿ ಆಶಿಕಾ ರಂಗನಾಥ್ ಪ್ರತಿಕ್ರಿಯಿಸಿದ್ದಾರೆ.
ಚಿತ್ರದಲ್ಲಿ ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸಿದ್ದಾರೆ. ಆದರೆ ಆಕೆಯ ಪಾತ್ರವನ್ನು ಚಿತ್ರಿಸಿರುವ ಪರಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ನಟಿಸುವಾಗ ಜಾನ್ವಿಗೆ ಇದೆಲ್ಲಾ ಗೊತ್ತಿರಲಿಲ್ಲವೇ? ಆಕೆ ಇದಕ್ಕಿಂತಲೂ ಅಸಭ್ಯವಾಗಿ ನಟಿಸಿಲ್ಲವೇ? ಬೇರೆ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳನ್ನು ಇದಕ್ಕಿಂತಲೂ ಅಸಭ್ಯವಾಗಿ ಚಿತ್ರಿಸಿದ್ದಾರೆ. ಆಗ ಯಾರು ಮಾತನಾಡಲಿಲ್ಲ. ಈಗ ಯಾಕೆ ಹೀಗೆ ಎಂದು ರಾಮ್‌ಚರಣ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಸದ್ಯ ಆಶಿಕಾ ಪೋಸ್ಟ್ ವೈರಲ್ ಆಗ್ತಿದೆ.

"ರಾಮ್ ಚರಣ್ ಅಥವಾ ಜ್ಯೂ . ಎನ್‌ಟಿಆರ್‌ನಂತಹ ನಾಯಕ ಚಿತ್ರಗಳಳ್ಲಿ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದಿದ್ದರೂ, ಕೇವಲ ಭಾರಿ ಸಂಭಾವನೆ ಅಥವಾ ಕ್ರೇಜ್‌ಗಾಗಿ ನಟಿಯರು ನಟಿಸುತ್ತಿದ್ದಾರೆ. ಅದಕ್ಕಾಗಿ ತಮ್ಮನ್ನು ತಾವು ಕೀಳಾಗಿಸಿಕೊಳ್ಳುತ್ತಿದ್ದಾರೆ ಎಂದು ಬರೆದ ಪೋಸ್ಟ್ ಸ್ಕ್ರೀನ್ ಶಾಟ್ ಅನ್ನು ಆಶಿಕಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯರು ಹಣಕ್ಕಾಗಿ ಇಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಮಾತನ್ನು ಆಶಿಕಾ ವಿರೋಧಿಸಿ ಕಾಮೆಂಟ್ ಮಾಡಿದ್ದಾರೆ.
"ನಟಿಯನ್ನು ದೂಷಿಸಬೇಡಿ. ಇವತ್ತಿಗೂ ಜನ ಇದನ್ನೇ ಕೇಳ್ತಾರೆ ಎಂದು ಭಾವಿಸಿರುವ ವ್ಯವಸ್ಥೆಯನ್ನು, ಫಿಲ್ಮ್ ಮೇಕರ್ಸ್ ಅನ್ನು ದೂಷಿಸಿ. ಕಲಾವಿದರು ಹೆಚ್ಚಾಗಿ ತಮಗೆ ಲಭ್ಯವಿರುವ ಅವಕಾಶಗಳೊಳಗೆ ಕೆಲಸ ಮಾಡುತ್ತಾರೆ. ದೊಡ್ಡ ಚಿತ್ರಗಳ ಭಾಗವಾಗಲು ಮತ್ತು ವಿಶಾಲ ಪ್ರೇಕ್ಷಕರನ್ನು ತಲುಪಲು ಆಶಿಸುತ್ತಾರೆ. ಮಹಿಳಾ ಪಾತ್ರಗಳನ್ನು ಸರಿಯಾಗಿ ಬರೆದಿಲ್ಲ ಎಂದು ಭಾವಿಸಿದರೆ, ಆ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗಿಂತ ಅದರ ಬರವಣಿಗೆ ಹಾಗೂ ಫಿಲ್ಮ್ ಮೇಕರ್ಸ್ ಆಯ್ಕೆಯೇ ಅದಕ್ಕೆಲ್ಲಾ ಕಾರಣ ಎಂದು ಆಶಿಕಾ ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ಜಾನ್ವಿ ಕಪೂರ್ ಅವರನ್ನು ದೂಷಿಸುವ ಬದಲು ಇಂತಹ ಪಾತ್ರ ಬರೆದವರನ್ನು ದೂಷಿಸಿ ಎಂದು ಆಶಿಕಾ ತಿಳಿಸಿದ್ದಾರೆ.

ಇತ್ತೀಚೆಗೆ ಆಶಿಕಾ ರಂಗನಾಥ್ ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. 'ಭರ್ತ ಮಹಾಶಯಲುಕು ವಿಜ್ಞಪ್ತಿ' ಚಿತ್ರದಲ್ಲಿ ರವಿತೇಜಾ ಜೊತೆ ನಾಯಕಿಯಾಗಿ ನಟಿಸಿದ್ದರು. ಬಿಂದಾಸ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಚಿರಂಜೀವಿ ನಟನೆಯ 'ವಿಶ್ವಂಭರ' ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.
ಈಗಾಗಲೇ 'ಪೆದ್ದಿ' ಚಿತ್ರದ ಮೇಲಿನ ಟೀಕೆಗಳ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ. ತೆರೆಮೇಲೆ ಹಾಗೂ ಹೊರಗೆ ಮಹಿಳೆಯರ ಬಗ್ಗೆ ನನಗೆ ಯಾವಾಗಲೂ ಅಪಾರ ಗೌರವವಿದೆ, ಯಾವುದೇ ಮಹಿಳಾ ಪಾತ್ರವನ್ನು ಅಸಭ್ಯವಾಗಿ ನೋಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಚಿತ್ರದ ಯಾವುದೇ ಭಾಗದಲ್ಲಿ ನಿಮಗೆ ಆ ರೀತಿ ಅನ್ನಿಸಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಟೀಕೆ ವ್ಯಕ್ತವಾಗುತ್ತಿರುವ ದೃಶ್ಯಗಳನ್ನು ಬದಲಿಸುವುದಾಗಿ ಕೂಡ ಬುಚ್ಚಿಬಾಬು ಹೇಳಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗಿದೆ. ತೆಲುಗಿನಲ್ಲಿ ಇದು ಜಾನ್ವಿ ನಟನೆಯ ಎರಡನೇ ಸಿನಿಮಾ. ಊರಿನ ದೊಡ್ಡ ರಾಜಕೀಯ ಮುಖಂಡನ ಮಗಳ ಪಾತ್ರದಲ್ಲಿ ಶ್ರೀದೇವಿ ಪುತ್ರಿ ನಟಿಸಿದ್ದಾರೆ. ಲಂಗಾ ದಾವಣಿಯಲ್ಲಿ ಇಡೀ ಸಿನಿಮಾ ಕಾಣಿಸಿಕೊಂಡಿದ್ದಾರೆ. ಆದರೆ ದಾವಣಿ ತೆಗೆದು ಸೊಂಟ ತಿರುಗಿಸುತ್ತಾ ಓಡಾಡುವಂತೆ, ಆಕೆಯ ಸೊಂಟದ ಸುತ್ತಾ ಕ್ಯಾಮರಾ ಫೋಕಸ್ ಮಾಡಿ ತೋರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications