''ನನ್ನ ಶಾಪದಿಂದನೇ ತೆಲುಗು ಚಿತ್ರರಂಗಕ್ಕೆ ಈ ದುರ್ಗತಿ ಬಂದಿದೆ''- ವೇಣು ಸ್ವಾಮಿ...!
ಸಂಧ್ಯಾ ಚಿತ್ರಮಂದಿರದ ಆವರಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣದಿಂದ ತೆಲುಗು ಚಿತ್ರರಂಗ ಬೆಚ್ಚಿ ಬಿದ್ದಿದೆ. ಅಲ್ಲು ಅರ್ಜುನ್ ನೆಮ್ಮದಿಗೆ ಕೊಳ್ಳೆ ಬಿದ್ದಿದೆ. ಅಲ್ಲು ಅರ್ಜುನ್ VS ರೇವಂತ್ ರೆಡ್ಡಿಯ ನಡುವೆ ಸಮರ ಶುರುವಾಗಿದೆ. ನಾನಾ-ನೀನಾ ಎನ್ನುವ ಈ ಜಿದ್ದಾಜಿದ್ದಿಯಲ್ಲಿ ಗೆಲ್ಲುವರು ಯಾರು ಎನ್ನುವ ಪ್ರಶ್ನೆ ಈಗ ಎದ್ದಿದೆ. ಸಂದರ್ಭ ಹೀಗಿರುವಾಗ ಆಂಧ್ರದ ಜಗದ್ವಿಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗ ಇವತ್ತು ನರಳುತ್ತಿರುವುದಕ್ಕೆ ನಾನೇ ಕಾರಣವೆಂದು ಹೇಳಿದ್ದಾರೆ.
ಹೌದು, ವೇಣು ಸ್ವಾಮಿ ಗೊತ್ತಲ್ಲವಾ..? ಪಕ್ಕದ ಮನೆ ಆಂಧ್ರದ ಸ್ಟಾರ್ ಜ್ಯೋತಿಷಿ. ಕಲಾವಿದರಿಂದ ಹಿಡಿದು ರಾಜಕಾರಣಿಗಳವರೆಗೆ ಮುಂದಿನ ಜೀವನ ಹೀಗೀಗೇ ಅಂತ ನಿಖರವಾಗಿ ನಾನು ಹೇಳಬಲ್ಲೆ ಎಂದು ಹೇಳಿಕೊಳ್ಳುವ ವೇಣು ಸ್ವಾಮಿ ಸದ್ಯ ತೆಲುಗು ಚಿತ್ರರಂಗ ನರಳುತ್ತಿರುವುದಕ್ಕೆ ನಾನೇ ಕಾರಣ ಎಂದಿದ್ದಾರೆ. ಈ ವರ್ಷ ತೆಲುಗು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣ ನಿರ್ಮಾಣವಾಗಲು ನನ್ನ ಶಾಪವೇ ಕಾರಣವೆಂದಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ವೇಣು ಸ್ವಾಮಿ ಈ ವರ್ಷ ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳ ಅಭಿಮಾನಿಗಳು ನನ್ನನ್ನೂ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದರು. ನನ್ನನ್ನೂ ಟ್ರೋಲ್ ಮಾಡಿದರು. ಹೀಯಾಳಿಸಿದರು. ನೋವು ನೀಡಿದರು. ಇವತ್ತು ತೆಲುಗು ಚಿತ್ರರಂಗದ ನರಳುತ್ತಿದೆ. ಇದಕ್ಕೆ ನನ್ನ ಶಾಪವೇ ಕಾರಣ ಎಂದು ಹೇಳಿದ್ದಾರೆ. ನನ್ನನ್ನೂ ಎದುರು ಹಾಕಿಕೊಳ್ಳದೇ ಇದ್ದಿದ್ದರೆ ಇವತ್ತು ತೆಲುಗು ಚಿತ್ರರಂಗದಲ್ಲಿ ಸುಖ ಮತ್ತು ಶಾಂತಿಯ ವಾತಾವರಣ ಇರುತ್ತಿತ್ತು ಎಂದು ಹೇಳಿದ್ದಾರೆ. ಕೇವಲ ಅಲ್ಲು ಅರ್ಜುನ್ ಪ್ರಕರಣ ಮಾತ್ರ ಅಲ್ಲ ಮೋಹನ್ ಬಾಬು ವಿವಾದ, ನಾಗಾರ್ಜುನ ಮಾಲೀಕತ್ವದ ಕಟ್ಟದ ನೆಲ ಸಮ ವಿಚಾರ ಇರಬಹುದು ಎಲ್ಲ ವಾದ ವಿವಾದಕ್ಕೆ ನಾನೇ ಕಾರಣ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಾಗ ಚೈತನ್ಯ ಮತ್ತು ಶೋಭಿತಾ ಸಂಬಂಧ ಹೆಚ್ಚು ದಿನ ಉಳಿಯಲ್ಲ ಎಂದು ವೇಣು ಸ್ವಾಮಿ ಜ್ಯೋತಿಷ್ಯವನ್ನು ಹೇಳಿದ್ದರು.ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಪತ್ರಕರ್ತರು ಸೇರಿ ಅನೇಕರು ಆ ನಂತರೆ ವೇಣು ಸ್ವಾಮಿ ವಿರುದ್ಧ ದೂರನ್ನು ದಾಖಲಿಸಿದ್ದರು. ವೇಣು ಸ್ವಾಮಿ ಅವರನ್ನು ಕಂಬಿ ಹಿಂದೆ ಕಳುಹಿಸುವ ಪ್ರಯತ್ನವನ್ನು ಕೂಡ ಮಾಡಿದ್ದರು. ಇನ್ನೂ ರಕ್ಷಿತ್ ಶೆಟ್ಟಿ ಅವರಿಂದ ದೂರವಾಗುವಂತೆ ರಶ್ಮಿಕಾಗೆ ಸಲಹೆಯನ್ನೂ ನೀಡಿ ರಶ್ಮಿಕಾ ಅವರ ಗಜಕೇಸರಿ ಯೋಗಕ್ಕೆ ಕಾರಣವಾದವರು ಕೂಡ ಇವರೇ.
ಇನ್ನೂ ಇವರ ಪ್ರಭಾವ ಆಂಧ್ರದಲ್ಲಿ ಹೇಗಿದೆ ಎಂದರೆ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಇದೇ ವೇಣು ಸ್ವಾಮಿ ಅವರ ಆಶೀರ್ವಾದ ಪಡೆದು ವಿಶೇಷ ಪೂಜೆಯನ್ನೂ ಮಾಡಿಸಿದ್ದರು. ಹಾಗಂಥ ಈ ವ್ಯಕ್ತಿ ಹೇಳಿದ್ದೆಲ್ಲವೂ ನಡೆದಿದೆ ಅಂತಲ್ಲ. ಯಾಕೆಂದರೆ ತಮ್ಮ ಭವಿಷ್ಯ ಯಾವತ್ತು ಸುಳ್ಳಾಗಲ್ಲ ಎಂದು ವೇಣು ಸ್ವಾಮಿ ಹೇಳಿಕೊಂಡರು, ಜಗನ್ ವಿಚಾರದಲ್ಲಿ ಈ ವ್ಯಕ್ತಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಗೆದ್ದೇ ಗೆಲ್ಲುತ್ತಾರೆ, ಮತ್ತೆ ಸಿಎಂ ಆಗುತ್ತಾರೆ ಎಂದು ಭಾರಿ ಭರವಸೆಯ ಮಾತುಗಳನ್ನಾಡಿದ್ದರು ವೇಣು. ಆದರೆ ಅದು ನಿಜವಾಗಲಿಲ್ಲ.
ಇಂಥಾ ವೇಣು ಸ್ವಾಮಿ ಮೊನ್ನೆ ಮೊನ್ನೆಯಷ್ಟೇ ಅಲ್ಲು ಅರ್ಜುನ್ ಚಿಕ್ಕಂದಿನಿಂದ ನನಗೆ ಗೊತ್ತು. ಅವರ ಮಾವ ಚಿರಂಜೀವಿ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು. ಹಾಗಾಗಿ ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಯಾವುದೇ ದ್ವೇಷ ರಾಜಕಾರಣ ಇಲ್ಲ. ಕಾನೂನು ಎಲ್ಲರಿಗೂ ಒಂದೇ? ಪೊಲೀಸರು ಅವರ ಕರ್ತವ್ಯ ನಿಭಾಯಿಸಿದ್ದಾರೆ ಎಂದಿದ್ದರು. ಇದೆಲ್ಲದರ ನಡುವೆ ನಟ ಅಲ್ಲು ಅರ್ಜುನ್ ಸ್ವಂತ ಪಕ್ಷ ಕಟ್ಟಿ ಸಿಎಂ ಆಗುತ್ತಾರೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಆದರೆ ಈಗ ಅಲ್ಲು ಅರ್ಜುನ್ ಸೇರಿ ತೆಲುಗು ಚಿತ್ರರಂಗ ಅನುಭವಿಸುತ್ತಿರುವ ನರಕಯಾತನೆಗೆ ನಾನೇ ಕಾರಣವೆನ್ನುತ್ತಿದ್ಧಾರೆ. ಈ ಕಾರಣಕ್ಕೆ ಅನೇಕರು ವೇಣು ಸ್ವಾಮಿಯ ಈ ಹೇಳಿಕೆಗಳಿಂದ ಗೊಂದಲಕ್ಕೀಡಾಗಿದ್ದಾರೆ.


Click it and Unblock the Notifications











