ಸ್ವಂತ ಪಕ್ಷ ಕಟ್ಟಿ ಸಿಎಂ ಆಗ್ತಾರಾ ಅಲ್ಲು ಅರ್ಜುನ್? ಭವಿಷ್ಯ ನುಡಿದಿದ್ದು ಯಾರು?
ನಟ ಅಲ್ಲು ಅರ್ಜುನ್ ಬಂಧನ ವಿಚಾರ ಭಾರೀ ಸುದ್ದಿ ಆಗುತ್ತಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಅವರನ್ನು ಬಂಧಿಸಲಾಗಿತ್ತು. ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ಮಧ್ಯಂತರ ಜಾಮೀನು ಪಡೆದರು. ಆದರೂ ಬಿಡುಗಡೆ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ ಆಗಿತ್ತು. ಹಾಗಾಗಿ ಒಂದು ರಾತ್ರಿ ಚಂಚಲಗೂಡ್ ಜೈಲಿನಲ್ಲಿ ಕಳೆದರು.
ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ'-2 ಪ್ರೀಮಿಯರ್ ಶೋಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಪುತ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಅರ್ಜುನ್ ಜೈಲಿನಿಂದ ಬಿಡುಗಡೆ ಆಗಿ ಬಂದ ಬಳಿಕ ಸಾಕಷ್ಟು ಜನ ತಾರೆಯರು, ಹಿತೈಷಿಗಳು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ಅಲ್ಲು ಅರ್ಜುನ್ ಬಂಧನ ವಿಚಾರ ಟಾಲಿವುಡ್ ಅಂಗಳದಲ್ಲಿ ಬಹಳ ದೊಡ್ಡದಾಗಿ ಸದ್ದು ಮಾಡ್ತಿದೆ. ಇದಕ್ಕೆ ರಾಜಕೀಯ ಬಣ್ಣ ಕೂಡ ಹಚ್ಚಲಾಗಿದೆ. ತೆಲಂಗಾಣ ಸರ್ಕಾರ ಬೇಕಂತಲೇ ನಟನನ್ನು ಬಂಧಿಸಿದೆ ಎನ್ನುವ ಆರೋಪ ಕೇಳಿಬರ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲ ವಿರೋಧ ಪಕ್ಷದ ನಾಯಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಲ್ಲಗಳೆದಿದ್ದಾರೆ.
ಅಲ್ಲು ಅರ್ಜುನ್ ಚಿಕ್ಕಂದಿನಿಂದ ನನಗೆ ಗೊತ್ತು. ಅವರ ಮಾವ ಚಿರಂಜೀವಿ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು. ಹಾಗಾಗಿ ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಯಾವುದೇ ದ್ವೇಷ ರಾಜಕಾರಣ ಇಲ್ಲ. ಕಾನೂನು ಎಲ್ಲರಿಗೂ ಒಂದೇ? ಪೊಲೀಸರು ಅವರ ಕರ್ತವ್ಯ ನಿಭಾಯಿಸಿದ್ದಾರೆ ಎಂದಿದ್ದರು. ಇದೆಲ್ಲದರ ನಡುವೆ ನಟ ಅಲ್ಲು ಅರ್ಜುನ್ ಸ್ವಂತ ಪಕ್ಷ ಕಟ್ಟಿ ಸಿಎಂ ಆಗುತ್ತಾರೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಸೆಲೆಬ್ರೆಟಿಗಳ ವಿಚಾರದಲ್ಲಿ ಭವಿಷ್ಯ ಹೇಳುವ ಮೂಲಕ ವೇಣುಸ್ವಾಮಿ ಬಹಳ ಜನಪ್ರಿಯತೆ ಗಳಿಸಿದ್ದಾರೆ. ನಾಗಚೈತನ್ಯ- ಸಮಂತಾ ಡಿವೋರ್ಸ್ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಅದು ನಿಜವಾದ ಬಳಿಕ ಆತ ಭವಿಷ್ಯ ನುಡಿಯುವ ವಿಚಾರ ಬಹಳ ಸದ್ದು ಮಾಡುತ್ತದೆ. ಸಿನಿಮಾ ತಾರೆಯರು, ರಾಜಕೀಯ ನಾಯಕರ ಬಗ್ಗೆ ಪದೇ ಪದೆ ಭವಿಷ್ಯ ನುಡಿದು ಸದ್ದು ಮಾಡುತ್ತಾರೆ.

ಕೆಲವೊಮ್ಮೆ ವೇಣುಸ್ವಾಮಿ ಭವಿಷ್ಯ ನಿಜ ಆಗಿರುವುದು ಇದೆ. ಆದರೆ ಸಾಕಷ್ಟು ಭಾರೀ ಸುಳ್ಳಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಜೈಲಿಗೆ ಹೋಗಿ ಬಂದ ನಟ ಅಲ್ಲು ಅರ್ಜುನ್ ಬಗ್ಗೆ ವೇಣುಸ್ವಾಮಿ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದ ಸೆಲೆಬ್ರೆಟಿಗಳು ರಾಜಕೀಯಕ್ಕೆ ಬರ್ತಿದ್ದಾರೆ. ಅಲ್ಲು ಅರ್ಜುನ್ ಕೂಡ ಪಕ್ಷ ಸ್ಥಾಪಿಸಿ ಸಿಎಂ ಆಗುವ ಅವಕಾಶ ಇದೆ ಎಂದಿದ್ದಾರೆ.
ನಾನು ಯಾವುದೇ ಜಾತಕ ನೋಡಿ ಅಲ್ಲು ಅರ್ಜುನ್ ರಾಜಕೀಯ ಭವಿಷ್ಯ ಬಗ್ಗೆ ಹೇಳುತ್ತಿಲ್ಲ. ಆದರೆ ಸಹಜವಾಗಿಯೇ ಸೆಂಟಿಮೆಂಟ್ ಕಾರಣಕ್ಕೆ ಹೇಳುತ್ತಿದ್ದೇನೆ. ಅಲ್ಲು ಅರ್ಜುಜ್ ಕೂಡ ಪಕ್ಷ ಸ್ಥಾಪಿಸುವ ಅವಕಾಶ ಇದೆ. ಸಿಎಂ ಆದರೂ ಆಗಬಹುದು ಎಂದಿದ್ದಾರೆ. ಸದ್ಯ ವೇಣುಸ್ವಾಮಿ ಕಾಮೆಂಟ್ಸ್ ವೈರಲ್ ಆಗುತ್ತಿದೆ. ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ. 'ಪುಷ್ಪ'-2 ಚಿತ್ರದಲ್ಲಿ ಪುಷ್ಪರಾಜ್ ರಾಜ್ಯದ ಮುಖ್ಯಮಂತ್ರಿಯನ್ನೇ ಬದಲಿಸೋ ಸನ್ನಿವೇಶ ನೆನಪಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಆಂಧ್ರ ವಿಧಾನಸಭೆ ಚುನಾವಣೆ ವೇಳೆ ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು. ಟಿಡಿಪಿ ಪಕ್ಷ ಗೆಲ್ಲಲ್ಲ, ಪವನ್ ಕಲ್ಯಾಣ್ ಸಿಎಂ ಆಗಲ್ಲ ಎಂದು ಹೇಳಿದ್ದರು. ಆದರೆ ಅವರ ಭವಿಷ್ಯ ಸುಳ್ಳಾಗಿತ್ತು. ಪವನ್ ಡಿಸಿಎಂ ಆಗಿ ಆಯ್ಕೆ ಆಗಿದ್ದರು. ಅದರ ಬೆನ್ನಲ್ಲೇ ಇನ್ನು ಮುಂದೆ ನಾನು ಖ್ಯಾತನಾಮರ ಬಗ್ಗೆ ಭವಿಷ್ಯ ನುಡಿಯಲ್ಲ ಎಂದು ವೇಣುಸ್ವಾಮಿ ಹೇಳಿದ್ದರು. ಆದರೆ ಬಳಿಕ ಮತ್ತೆ ಅದನ್ನು ಮುಂದುವರೆಸಿದ್ದರು. ನಾಗಚೈತನ್ಯಾ- ಶೋಭಿತಾ ಮದುವೆ ಬಗ್ಗೆ ವೇಣುಸ್ವಾಮಿ ಭವಿಷ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು.


Click it and Unblock the Notifications











