ಒಂದೇ ಸಿನಿಮಾಗೆ 2 ಟೈಟಲ್; ಗೊಂದಲಕ್ಕೊಳಗಾದ ಪ್ರೇಕ್ಷಕರು!
ಅಲ್ಲು ಅರ್ಜುನ್ ಒಂದೆಡೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ದಕ್ಷಿಣ ಭಾರತದ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದರೆ, ಅತ್ತ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್ ಹಲವಾರು ಬಾರಿ ಪ್ರಯತ್ನಿಸಿದರೂ ಸಹ ಅಲ್ಲು ಅರ್ಜುನ್ ರೀತಿಯ ಯಶಸ್ಸು ಮತ್ತು ಹೆಸರನ್ನು ಸಂಪಾದಿಸುವಲ್ಲಿ ಇನ್ನೂ ಸಫಲರಾಗಿಲ್ಲ.
ಬಾಲನಟನಾಗಿ 2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಸಿರೀಶ್ ಗೌರವಂ ಸಿನಿಮಾದ ಮೂಲಕ ನಟನಾಗಿ ಚಿತ್ರರಂಗದಲ್ಲಿ ತಮ್ಮ ಎರಡನೆ ಇನ್ನಿಂಗ್ಸ್ ಆರಂಭಿಸಿದರು. ನಂತರ ಕೊತ್ತ ಜಂಟ, ಶ್ರೀರಸ್ತು ಶುಭಮಸ್ತು, 1971: ಬಿಯಾಂಡ್ ಬಾರ್ಡರ್ಸ್, ಒಕ ಕ್ಷಣಂ ಹಾಗೂ ಎಬಿಸಿಡಿ: ಅಮೆರಿಕನ್ ಬಾರ್ನ್ ಕನ್ಫ್ಯೂಸ್ಡ್ ದೇಸಿ ಚಿತ್ರಗಳಲ್ಲಿ ನಟಿಸಿದರು. ಹೀಗೆ ಬೆರಳೆಣಿಕೆ ಚಿತ್ರಗಳಲ್ಲಿ ಅಭಿನಯಿಸಿರುವ ಅಲ್ಲು ಸಿರೀಶ್ ಎಬಿಸಿಡಿ ನಂತರ 3 ವರ್ಷಗಳ ಬಳಿಕ ಮತ್ತೆ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಈ ಚಿತ್ರದ ಟೀಸರ್ ಅನ್ನು ಇದೇ ಗುರುವಾರ ( ಸೆಪ್ಟೆಂಬರ್ 29 ) ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದೆ. ಆದರೆ ಈ ಚಿತ್ರದ ಪೋಸ್ಟರ್ ನೋಡಿದ ಸಿನಿಪ್ರೇಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಹೌದು, ಈ ಹಿಂದೆ 'ಪ್ರೇಮ ಕಾದಂಟ' ಎಂಬ ಶೀರ್ಷಿಕೆಯನ್ನು ಚಿತ್ರಕ್ಕೆ ಇಟ್ಟಿದ್ದ ಚಿತ್ರತಂಡ ಇದೀಗ ಹೊಸ ಪೋಸ್ಟರ್‌ನಲ್ಲಿ 'ಊರ್ವಶಿವೋ ರಾಕ್ಷಸಿವೋ' ಎಂಬ ಶೀರ್ಷಿಕೆಯನ್ನು ಬಳಸಿದೆ.

ಮೊದಲು ಘೋಷಿಸಲಾಗಿದ್ದ ಚಿತ್ರಕ್ಕೆ ಇದೀಗ ಹೆಸರು ಬದಲಾವಣೆ ಮಾಡಲಾಗಿದೆಯಾ ಅಥವಾ ಆ ಚಿತ್ರವನ್ನು ನಿಲ್ಲಿಸಿ ಇದೀಗ ಬೇರೆಯದೇ ಚಿತ್ರವನ್ನು ಚಿತ್ರತಂಡ ಮಾಡಿದೆಯಾ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ ಪ್ರೇಕ್ಷಕರು. ಈ ಚಿತ್ರದಲ್ಲಿ ಅಲ್ಲು ಸಿರೀಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದರೆ ಅನು ಇಮ್ಯಾನ್ಯುಯೆಲ್ ನಾಯಕಿಯಾಗಿ ಅಭಿನಯಿಸಿದ್ದಾರೆ.


Click it and Unblock the Notifications











