ಶ್ರೀಲೀಲಾ ನಟನೆಯ ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮಿಂಚು
ಕ್ರಿಕೆಟ್ ಮೈದಾನದಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಸದ್ದು ಮಾಡಿದವರು ಡೇವಿಡ್ ವಾರ್ನರ್. ಆಸ್ಟ್ರೇಲಿಯಾದ ಈ ಮಾಜಿ ಕ್ರಿಕೆಟಿಗ ಐಪಿಎಲ್ ಸರಣಿಯಲ್ಲಿ ಕೂಡ ಅಬ್ಬರಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ವಾರ್ನರ್ ಎಡಗೈ ಬ್ಯಾಟರ್ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನ ಸಿಡ್ನಿ ಥಂಡರ್ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಈಗ ಗುರ್ತಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಜೀವ ನಾಯಕತ್ವ ನಿಷೇಧ ಹೇರಲಾಗಿತ್ತು. ಕೆಲವೇ ತಿಂಗಳ ಹಿಂದೆ ಇದನ್ನು ಹಿಂತೆಗೆಯಲಾಗಿತ್ತು. ಬಳಿಕ ಬಿಗ್ ಬ್ಯಾಷ್ ಲೀಗ್‌ನ ಸಿಡ್ನಿ ಥಂಡರ್ ತಂಡದ ನಾಯಕನಾಗಿದ್ದರು.

ಸದ್ಯ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಾರ್ನರ್ ಡಬ್‌ಸ್ಮ್ಯಾಶ್ ವೀಡಿಯೋಗಳು, ಡ್ಯಾನ್ಸ್ ವೀಡಿಯೋಗಳು, ರೀಲ್ಸ್ ಸಖತ್ ವೈರಲ್ ಆಗುತ್ತಿರುತ್ತದೆ. ಕೆಲ ತೆಲುಗು, ಹಿಂದಿ ಸಿನಿಮಾ ಸಾಂಗ್ಸ್‌ಗೆ ಡ್ಯಾನ್ಸ್ ಮಾಡುವುದು ಮಾತ್ರವಲ್ಲ, ಡೈಲಾಗ್‌ಗಳನ್ನು ಡಬ್‌ಸ್ಮ್ಯಾಶ್ ಮಾಡಿ ಅವರನ್ನು ಗಮನ ಸೆಳೆದಿದ್ದರು.
ಈ ಹಿಂದೆ 'ಪುಷ್ಪ'-2 ಚಿತ್ರದಲ್ಲಿ ಡೇವಿಡ್ ವಾರ್ನರ್ ನಟಿಸಿದ್ದಾರೆ ಎಂದು ಗುಲ್ಲಾಗಿತ್ತು. ಆದರೆ ಅದು ಸುಳ್ಳಾಗಿತ್ತು. ಇದೀಗ ಅಧಿಕೃತವಾಗಿ ಅವರು ತೆಲುಗು ಚಿತ್ರರಂಗ ಪ್ರವೇಶಿಸಿರುವುದು ಖಚಿತವಾಗಿದೆ. ತೆಲುಗಿನ 'ರಾಬಿನ್ ಹುಡ್' ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಅತಿಥಿ ಪಾತ್ರದಲ್ಲಿ ನಟಿಸಿರುವ ಬಗ್ಗೆ ಸ್ವತಃ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
'ರಾಬಿನ್ ಹುಡ್' ಚಿತ್ರದಲ್ಲಿ ನಿತಿನ್ ಹಾಗೂ ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ವೆಂಕಿ ಕುಡುಮುಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 'ಕಿಂಗ್ಸ್‌ಟನ್' ಎಂಬ ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ 'ರಾಬಿನ್ ಹುಡ್' ಚಿತ್ರದ ನಿರ್ಮಾಪಕ ರವಿಶಂಕರ್ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಏರಿ ತಮ್ಮ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು.

'ರಾಬಿನ್ ಹುಡ್' ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ನಾನು ಸಿನಿಮಾ ನೋಡಿದ್ದೀನಿ. ನಿಮಗೆ ಒಂದು ಸರ್‌ಪ್ರೈಸ್ ಇದೆ. ಚಿತ್ರದಲ್ಲಿ ಕ್ರಿಕೆಟಿಗ ಡೇವಿಡ್ ವಾರ್ನರ್ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿಬಿಟ್ಟರು. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ನಿರ್ದೇಶಕ ವೆಂಕಿ ಮುಖ ಮುಚ್ಚಿಕೊಂಡು ಶಾಕ್ ಆಗಿದ್ದಾರೆ. ಈ ವಿಚಾರವನ್ನು ಬಹಳ ವಿಭಿನ್ನವಾಗಿ ರಿವೀಲ್ ಮಾಡಲು ಅವರು ಬಯಸಿದ್ದರು. ಹೀಗೆ ನಿರ್ಮಾಪಕರು ದಿಢೀರನೆ ಘೋಷಣೆ ಮಾಡಿದ್ದು ಅವರ ಅಚ್ಚರಿಗೆ ಕಾರಣವಾಗಿತ್ತು.
ನಿತಿನ್, ರಶ್ಮಿಕಾ ಮಂದಣ್ಣ ನಟನೆಯ 'ಭೀಷ್ಮ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಕಾಂಬಿನೇಷನ್‌ನಲ್ಲಿ 'ರಾಬಿನ್‌ಹುಡ್' ಸಿನಿಮಾ ಘೋಷಣೆ ಆಗಿತ್ತು. ಆದರೆ ಬಳಿಕ ದಿಢೀರನೆ ರಶ್ಮಿಕಾ ಜಾಗಕ್ಕೆ ಶ್ರೀಲೀಲಾ ಆಗಮನವಾಯಿತು. ಬಾಲಿವುಡ್ ಸಿನಿಮಾಗಳಲ್ಲಿ ಆಕೆ ಬ್ಯುಸಿ ಇದ್ದಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾಗಿ ನಿರ್ದೇಶಕರು ಸ್ಪಷ್ಟನೆ ನೀಡಿದ್ದರು. ನಿತಿನ್ ಹಾಗೂ ಶ್ರೀ ಕಾಂಬಿನೇಷನ್ ನಿರೀಕ್ಷೆ ಹುಟ್ಟಾಕ್ಕಿದೆ. ಡೇವಿಡ್ ವಾರ್ನರ್ ಗೆಸ್ಟ್ ಅಪಿಯರೆನ್ಸ್ ಕುತೂಹಲ ಹೆಚ್ಚಿಸಿದೆ.
ಚಿತ್ರದಲ್ಲಿ ನೀರಾ ವಾಸುದೇವ್ ಎಂಬ ಪಾತ್ರದಲ್ಲಿ ಶ್ರೀಲೀಲಾ ಮಿಂಚಿದ್ದಾರೆ. ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ತೆಲುಗಿನಲ್ಲಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಸಿನಿಮಾ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗ ಭಾರತೀಯ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದಂತಾಗಿದೆ. ಹಿಂದೆ ಜಾಹೀರಾತುವೊಂದರಲ್ಲಿ ನಿರ್ದೇಶಕ ರಾಜಮೌಳಿ ಜೊತೆ ವಾರ್ನರ್ ಮಿಂಚಿದ್ದರು.


Click it and Unblock the Notifications











