'ಬಾಹುಬಲಿ' ಕ್ಯಾಮರಾಮ್ಯಾನ್ ಸೆಂಥಿಲ್ ಕುಮಾರ್ ಪತ್ನಿ ನಿಧನ; ಟಾಲಿವುಡ್‌ಗೆ ಆಘಾತ
ದಕ್ಷಿಣ ಭಾರತದ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಕೆ ಕೆ ಸೆಂಥಿಲ್ ಕುಮಾರ್. ರಾಜಮೌಳಿ ನಿರ್ದೇಶಿಸಿದ ಬಹುತೇಕ ಸಿನಿಮಾಗಳಿಗೆ ಕ್ಯಾಮರಾಮ್ಯಾನ್ ಆಗಿ ಸೆಂಥಿಲ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ 'ಬಾಹುಬಲಿ' ಸೀರಿಸ್ ಹಾಗೂ RRR ಅಂತಹ ಸಿನಿಮಾಳಿಗೆ ಛಾಯಾಗ್ರಹಣ ಮಾಡುವ ಮೂಲಕ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇವರ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸೆಂಥಿಲ್ ಕುಮಾರ್ ಪತ್ನಿ ರೂಹಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಇತ್ತೀಚೆಗೆ ಸಿಖಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ, ಇಂದು (ಫೆಬ್ರವರಿ 15) ನಿಧನರಾಗಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ಟಾಲಿವುಡ್ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.

2009ರಲ್ಲಿ ಸೆಂಥಿಲ್ ಕುಮಾರ್ ಹಾಗೂ ರೂಹಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸೆಂಥಿಲ್ ಕುಮಾರ್ ಟಾಲಿವುಡ್‌ನಲ್ಲಿ ಜನಪ್ರಿಯ ಕ್ಯಾಮರಾಮ್ಯಾನ್ ಆಗಿದ್ದರೆ, ಪತ್ನಿ ರೂಹಿ ಯೋಗ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದರು. ಟಾಲಿವುಡ್‌ನಲ್ಲಿ ರೂಹಿ ಸಕ್ರಿಯರಾಗಿದ್ದರು. ಕೆಲವು ಟಾಲಿವುಡ್ ನಟಿಯರಿಗೆ ರೂಹಿ ಯೋಗವನ್ನು ಹೇಳಿಕೊಡುತ್ತಿದ್ದರು.
ಟಾಲಿವುಡ್‌ನ ಸ್ವೀಟಿ ಕರಾವಳಿಯ ಅನುಷ್ಕಾ ಶೆಟ್ಟಿ ಜೊತೆ ಯೋಗ ಶಿಕ್ಷಕಿಯಾಗಿ ಹಲವು ವರ್ಷ ರೂಹಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ. ಪತಿಯಂತಯೇ ರೂಹಿ ಕೂಡ ತಮ್ಮ ಕ್ಷೇತ್ರದಲ್ಲಿ ಹೆಸರನ್ನು ಮಾಡಿದ್ದರು. ಆದರೆ, ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಕೆಲವು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಲೇ ಇದ್ದರು.
2019ರಲ್ಲಿ ರೂಹಿಗೆ ಕೋವಿಡ್ ಸೋಂಕು ತಗುಲಿತ್ತು. ಅಲ್ಲಿಂದ ರೂಹಿ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು. ಆಗಾಗ ಆರೋಗ್ಯ ಕೆಡುತ್ತಲೇ ಇತ್ತು. ಇತ್ತೀಚೆಗೆ ರೂಹಿ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಸಿಖಂದರಬಾದ್‌ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಈ ಬಾರಿ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ.
ಸೆಂಥಿಲ್ ಕುಮಾರ್ ಕ್ಯಾಮರಾ ವರ್ಕ್ ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಛಾಯಾಗ್ರಾಹಕರಿಗೆ ಮಾದರಿ. ರಾಜಮೌಳಿ ಜೊತೆ ಕೆಲಸ ಮಾಡಿದ ಸೆಂಥಿಲ್ ಕುಮಾರ್ ಬಹುಬೇಗನೇ ಚಿತ್ರರಂಗದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡರು.
ಸೆಂಥಿಲ್ ಕುಮಾರ್ 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಇವರು ಕ್ಯಾಮರಾಮ್ಯಾನ್ ಆಗಿದ್ದ ಮೊದಲ ಸಿನಿಮಾ 'ಐತೆ'. ಆ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸಿದ ಬಹುತೇಕ ಸಿನಿಮಾಗಳಿಗೆ ಪರ್ಮನೆಂಟ್ ಕ್ಯಾಮರಾಮ್ಯಾನ್ ಆಗಿದ್ದಾರೆ. ರಾಜಮೌಳಿಯ ಹಿಂದಿನ ಸಿನಿಮಾ RRR ವರೆಗೂ ಸೆಂಥಿಲ್ ಕುಮಾರ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಸೆಂಥಿಲ್ ಕುಮಾರ್ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದಾರೆ.


Click it and Unblock the Notifications











