ಬಹಳ ಭಯ ಆಗಿತ್ತು; ಆ ವಾಟ್ಸಪ್ ಗ್ರೂಪ್ ಕಹಿ ಅನುಭವ ಬಿಚ್ಚಿಟ್ಟ ನಿರ್ದೇಶಕ ರಾಜಮೌಳಿ
ಯಾವುದೇ ಸಿನಿಮಾ ಬಿಡುಗಡೆ ದಿನ ನಿರ್ದೇಕರ, ನಟ-ನಟಿಯರಿಗೆ ಢವಢವ ಶುರುವಾಗುತ್ತದೆ. ಅದರಲ್ಲೂ ನೂರಾರು ಕೋಟಿ ಬಂಡವಾಳ ಹೂಡಿ ನಿರ್ಮಿಸುವ ಸಿನಿಮಾಗಳನ್ನು ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಎನ್ನುವ ಗೊಂದಲ ಇರುತ್ತದೆ. 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ಬಿಡುಗಡೆ ದಿನದ ದುಸ್ವಪ್ನವನ್ನು ನಿರ್ದೇಶಕ ರಾಜಮೌಳಿ ನೆನಪಿಸಿಕೊಂಡಿದ್ದಾರೆ.
'ಬಾಹುಬಲಿ' ಸರಣಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ಅವತ್ತಿನ ಕಾಲಕ್ಕೆ ಭಾರೀ ಬಂಡವಾಳದಲ್ಲಿ ನಿರ್ಮಿಸಿದ್ದ ಸಿನಿಮಾ ಅದು. ಇಡೀ ಚಿತ್ರತಂಡ ಎರಡು ವರ್ಷ ಚಿತ್ರಕ್ಕಾಗಿ ಶ್ರಮಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ಬಿಡುಗಡೆ ಆಗಿತ್ತು. ಎಲ್ಲಾ ಭಾಷೆಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಆಂಧ್ರದಲ್ಲೇ ಮೊದಲ ದಿನ ನೆಗೆಟಿವ್ ಟಾಕ್ ಬಂದಿತ್ತು. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಆಘಾತ ತಂದಿತ್ತು.

ಮಾಹಿಷ್ಮತಿ ಸಾಮ್ರಾಜ್ಯ, ಬಾಹುಬಲಿಯಾಗಿ ಪ್ರಭಾಸ್, ಬಲ್ಲಾಳದೇವನಾಗಿ ರಾಣ, ಶಿವಗಾಮಿಯಾಗಿ ರಮ್ಯಾಕೃಷ್ಣ ಅದ್ಧುತವಾಗಿ ನಟಿಸಿದ್ದರು. ಭಾರೀ ಸೆಟ್‌ಗಳನ್ನು ನಿರ್ಮಿಸಿ ಅದ್ಧೂರಿ ಗ್ರಾಫಿಕ್ಸ್ ಬಳಸಿ ಬಹಳ ರೋಚಕವಾಗಿ ಈ ಕಾಸ್ಟ್ಯೂಮ್ ಡ್ರಾಮಾ ತೆರೆಗೆ ತಂದಿದ್ದರು. ಬೇರೆ ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಪಡೆದಿದ್ದ ಸಿನಿಮಾ ತೆಲುಗು ಪ್ರೇಕ್ಷಕರಿಂದಲೇ ತಿರಸ್ಕಾರಕ್ಕೆ ಗುರಿಯಾಗಿತ್ತು. ನೆಗೆಟಿವ್ ಟ್ರೋಲ್ ಎದುರಿಸಿತ್ತು. ಆದರೆ ನಿಧಾನವಾಗಿ ಸಿನಿಮಾ ಗೆಲುವಿನ ಕಡೆ ಮುಖ ಮಾಡಿತ್ತು.
ಸದ್ಯ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ ರೀ-ರಿಲೀಸ್ ಮಾಡ್ತಿದ್ದಾರೆ. ಅದರ ಬೆನ್ನಲ್ಲೇ ಪ್ರಭಾಸ್, ರಾಣಾ, ರಾಜಮೌಳಿ ವಿಶೇಷ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಮೊದಲ ದಿನ ಬಂದ ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಜಕ್ಕಣ್ಣ ಮಾತನಾಡಿದ್ದಾರೆ. ವಾಟ್ಸಪ್ ಗ್ರೂಪ್‌ವೊಂದರಲ್ಲಿ ಎದುರಾಗಿದ್ದ ಟ್ರೋಲ್, ನೆಗೆಟಿವ್ ಕಾಮೆಂಟ್ಸ್ ನೋಡಿ ಕಂಗೆಟ್ಟಿದ್ದಾಗಿ ವಿವರಿಸಿದ್ದಾರೆ.
ರಾಜಮೌಳಿ ಮಾತನಾಡಿ "ಆಗ ಮಾಧ್ಯಮದವ ಒಂದು ವಾಟ್ಸಪ್ ಗ್ರೂಪ್ ಇತ್ತು. ಅದರಲ್ಲಿ ಪಿಆರ್‌ಓಗಳು ಕೂಡ ಇದ್ದರು. ಅದೇ ಗ್ರೂಪ್‌ನಲ್ಲಿ ಅತ್ತಿಗೆ(ಶ್ರೀವಲ್ಲಿ) ಅವರನ್ನು ಸೇರಿಸಿಬಿಟ್ಟಿದ್ದರು. ಗ್ರೂಪ್‌ನಲ್ಲಿ ಇರುವವರಿಗೆ ಯಾರಿಗೂ ಗೊತ್ತಿರಲಿಲ್ಲ. 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ನೋಡಿ ಆ ಗ್ರೂಪ್‌ನಲ್ಲಿ ಚರ್ಚೆ ಶುರುವಾಗಿದೆ. ಸಿನಿಮಾ ಚೆನ್ನಾಗಿಲ್ಲ, ಇದು ಬಾಹುಬಲಿ ಅಲ್ಲು ಪ್ರೊಡ್ಯೂಸರ್ ಬಲಿ ಡಿಸ್ಟ್ರಿಬ್ಯೂಟರ್ ಬಲಿ ಅಂತೆಲ್ಲಾ ಮೆಸೇಜ್ ಮಾಡಲು ಆರಂಭಿಸಿದ್ದಾರೆ. ಶಿವುಡು ಶಿವಲಿಂಗ ಹಿಡಿದುಕೊಂಡಿರುವ ಜಾಗದಲ್ಲಿ ಎಡಿಟ್ ಮಾಡಿ ಜಂಡೂಬಾಮ್ ಚಿತ್ರ ಹಾಡಿ ಟ್ರೋಲ್ ಮಾಡಿದ್ದರು. ಇದನ್ನೆಲ್ಲಾ ನೋಡಿ ಅತ್ತಿಗೆ ಶಾಕ್ ಆಗಿದ್ದರು" ಎಂದು ರಾಜಮೌಳಿ ನೆನಪಿಸಿಕೊಂಡಿದ್ದಾರೆ.
ನಾವು ಅದ್ಭುತ ಸಿನಿಮಾ ಮಾಡಿದ್ದೀವಿ ಎಂದೇ ಅಂದುಕೊಂಡಿದ್ದೆವು. ಕೆಲ ಸನ್ನಿವೇಶಗಳು ಪ್ರೇಕ್ಷಕರಿಗೆ ಇಷ್ಟವಾಗದೇ ಇರಬಹುದು. ಆದರೂ ಇಡೀ ಸಿನಿಮಾ ಚೆನ್ನಾಗಿಲ್ಲ ಎಂದು ಯಾರೂ ಹೇಳಲ್ಲ ಎಂದು ನನ್ನ ಮನಸ್ಸಿನಲ್ಲಿ ಅನ್ನಿಸುತಿತ್ತು. ಆದರೆ ಆ ನೆಗೆಟಿವ್ ಟಾಕ್ ನೋಡಿ ಅಚ್ಚರಿ ಆಗಿತ್ತು. ಬಹಳ ಆತಂಕವಾಗಿತ್ತು. ಸಂಜೆ ವೇಳೆಗೆ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿ ಜನ ಸಿನಿಮಾ ನೋಡು ಮುಗಿಬಿದ್ದರು. ಆದರೂ ನಮಗೆ ಭಯ ಇತ್ತು. ಶನಿವಾರ ಜನ ಬರ್ತಾರೋ ಇಲ್ಲವೋ ಅನ್ನಿಸಿತ್ತು. ಅವತ್ತು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಭಾನುವಾರ ಜನ ಬರದೇ ಸಿನಿಮಾ ಸೋತುಬಿಟ್ಟರೆ ಎನ್ನುವ ಆತಂಕ ಇತ್ತು. ಆದರೆ ಅಲ್ಲಿಂದ ಮುಂದೆ ಸಿನಿಮಾ ಎಲ್ಲಿಗೋ ಹೋಗಿಬಿಡ್ತು. ಆ ವಾಟ್ಸಪ್ ನೆಗೆಟಿವ್ ಟಾಕ್ ಬಗ್ಗೆ ಅತ್ತಿಗೆ ಬಹಳ ತಡವಾಗಿ ಹೇಳಿದ್ದರು ಎಂದು ರಾಜಮೌಳಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











