ರಸ್ತೆ ದುರಸ್ತಿ ಮಾಡೋಕೆ ಗುತ್ತಿಗೆದಾರನಿಗೆ ಹೇಳಿದ್ರೆ, ಹೈವೇ ಮಾಡ್ಬಿಟ್ರು- ಮೌಳಿ ಬಗ್ಗೆ ನೀಲ್ ಹೀಗಂದಿದ್ಯಾಕೆ?
ರಾಜಮೌಳಿ ತಮ್ಮ ವಿಷನ್, ಮೇಕಿಂಗ್, ಕಥೆ ಹೇಳುವ ಶೈಲಿಯಿಂದ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ದೊಡ್ಡ ಸಿನಿಮಾಗಳನ್ನು ಕಟ್ಟಿಕೊಡುತ್ತಾ ಬರ್ತಿದ್ದಾರೆ. ತಾವೇ ನಿರ್ಧರಿಸಿದ್ದ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ಇದೀಗ ಹೊಸ ಸಿನಿಮಾ ತೆರೆಗೆ ತಂದಿದ್ದಾರೆ.
ಸೋಲಿಲ್ಲದ ಸರದಾರ ಎಂದೇ ಜಕ್ಕಣ್ಣ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡ್ತಿದ್ದಾರೆ. ಅದರ ನಡುವೆ 'ಬಾಹುಬಲಿ: ದಿ ಎಪಿಕ್' ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ತಾವೇ ಮುಂದೆ ನಿಂತು ಚಿತ್ರವನನು ಎಡಿಟ್ ಮಾಡಿಸಿ ಪ್ರಚಾರ ಮಾಡಿದ್ದಾರೆ. ಪ್ರೇಕ್ಷಕರ ಜೊತೆ ಪ್ರೀಮಿಯರ್ ಶೋಗಳಲ್ಲಿ ಭಾಗಿ ಆಗುತ್ತಿದ್ದಾರೆ. 'ಬಾಹುಬಲಿ' ಸಿನಿಮಾ ಬಂದುಹೋಗಿ ದಶಕ ಕಳೆದರೂ ಅದನ್ನು ಮೌಳಿ ಮರೆತ್ತಿಲ್ಲ.

ಸದ್ಯ 'ಬಾಹುಬಲಿ: ದಿ ಎಪಿಕ್' ಸಿನಿಮಾ ನೋಡಿ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಿಂದ ಅವರು ದೂರ ಉಳಿದಿದ್ದಾರೆ. ಅವರ ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಅಂಕೌಂಡ್ ಎಲ್ಲವೂ ಡಿ-ಆಕ್ಟಿವೇಟ್ ಆಗಿದೆ. ತಮ್ಮ ಪತ್ನಿ ಲಿಖಿತಾ ರೆಡ್ಡಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜಮೌಳಿಯನ್ನು ಹಾಡಿ ಕೊಂಡಾಡಿದ್ದಾರೆ.
"ದುರಸ್ತಿ ಮಾಡಬೇಕಿತ್ತು. ಹಾಗಾಗಿ ಅದನ್ನು ಸರಿಪಡಿಸಲು ಗುತ್ತಿಗೆದಾರರನ್ನು ಕರೆಸಿದ್ದರು. ಗುತ್ತಿಗೆದಾರ ರಸ್ತೆಯನ್ನು ಸರಿಪಡಿಸಲಿಲ್ಲ, ಆತ ಅದನ್ನು 16 ಲೇನ್‌ಗಳ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನಾಗಿ ಪರಿವರ್ತಿಸಿದ್ದರು. ಆ ರಸ್ತೆಯನ್ನು ಪ್ಯಾನ್ ಇಂಡಿಯಾ ಎಂದು ಕರೆಯಲಾಗುತ್ತದೆ. ಆ ಗುತ್ತಿಗೆದಾರ ಮತ್ಯಾರೂ ಅಲ್ಲ ಎಸ್.ಎಸ್. ರಾಜಮೌಳಿ. 'ಬಾಹುಬಲಿ' ಎನ್ನುವ ಅದ್ಯ ಅದ್ಭುತ ಸಿನಿ ಆ ಕಟ್ಟಿಕೊಟ್ಟ ಇಡೀ ತಂಡಕ್ಕೆ ಅಭಿನಂದನೆಗಳು.. ಇಡೀ ಪೀಳಿಗೆಯ ಕನಸು ಕಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ದಶಕಗಳ ಹಿಂದೆಯೇ ಒಂದು ಚಿತ್ರವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದರು. ಒಂದೇ ಕಥೆಯನ್ನು ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿ ಸಿನಿಮಾ ತೆರೆಗೆ ತರುತ್ತಿದ್ದ ದಿನಗಳ ಇವೆ. ಆದರೆ ನಿಧಾನವಾಗಿ ಅದು ಕಮ್ಮಿ ಆಗಿತ್ತು. ಎಲ್ಲಾ ಫಿಲ್ಮ್ ಮೇಕರ್ಸ್ ತಮ್ಮ ತಮ್ಮ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕೆಲ ಸಿನಿಮಾಗಳನ್ನು ಮಾತ್ರ ಡಬ್ ಮಾಡಿ ನಿಧಾನವಾಗಿ ತೆರೆಗೆ ತರುತ್ತಿದ್ದರು.
ಪ್ರಭಾಸ್ ಜೊತೆ ನಿರ್ದೇಶಕ ರಾಜಮೌಳಿ 'ಬಾಹುಬಲಿ' ರೀತಿಯ ಸಿನಿಮಾ ಮುಂದಾದಾದ ಅದನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಕನಸು ಕಂಡರು. 4 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂದುಕೊಂಡರು. ಸಿನಿಮಾ ಮಾಡ್ತಾ ಮಾಡ್ತಾ ಕಥೆ ದೊಡ್ಡದಾಗಿಗುತ್ತಿದೆ. ಬಜೆಟ್ ಹೆಚ್ಚುತ್ತಿದೆ ಅಂದಾಗ 2 ಭಾಗಗಳಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಅದು ದೊಡ್ಡಮಟ್ಟದಲ್ಲಿ ಸಕ್ಸಸ್ ಆಗಿತ್ತು.
'ಬಾಹುಬಲಿ' ಸರಣಿ ಬಳಿಕ 'ಕೆಜಿಎಫ್', 'ರೋಬೊ', 'ಪುಷ್ಪ', 'ಕಾಂತಾರ' ರೀತಿಯ ಹಲವು ಅದ್ಭುತ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡೆರಡು ಭಾಗಗಳಾಗಿ ತೆರೆಗೆ ಬಂತು ಪ್ರೇಕ್ಷಕರನ್ನು ರಂಜಿಸಿತು. ಚಿತ್ರರಂಗವನ್ನು ಶ್ರೀಮಂತಗೊಳಿಸಿತು. 'ಬಾಹುಬಲಿ' ಸರಣಿ ಸಕ್ಸಸ್ 'ಕೆಜಿಫ್' ಕಥೆಯನ್ನು 2 ಭಾಗಗಳಾಗಿ ತೆರೆಗೆ ತರಲು ಯಶ್ ಹಾಗೂ ಪ್ರಶಾಂತ್ ನೀಲ್ ಅವರನ್ನು ಪ್ರೇರೇಪಿಸಿತ್ತು.
ಕನ್ನಡದಲ್ಲಿ ತಾವೇ ಮಾಡಿದ್ದ 'ಉಗ್ರಂ' ಚಿತ್ರವನ್ನು ತೆಲುಗಿನಲ್ಲಿ 'ಸಲಾರ್' ಆಗಿ ಎರಡು ಭಾಗಗಳಲ್ಲಿ ಪ್ರಶಾಂತ್ ನೀಲ್ ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ 'ಸಲಾರ್'-1 ಹಿಟ್ ಆಗಿದ್ದು ಪಾರ್ಟ್-2 ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಇನ್ನು 'ಕೆಜಿಫ್'- 3 ಮಾಡುವುದಾಗಿಯೂ ಘೋಷಣೆ ಮಾಡಿದ್ದಾರೆ.


Click it and Unblock the Notifications