Baahubali: The Epic: ಮತ್ತೆ ಬರ್ತಿದ್ದಾನೆ 'ಬಾಹುಬಲಿ'; ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ದಾಖಲೆ
ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳನ್ನು ಒಂದಾಗಿ ಎಡಿಟ್ ಮಾಡಿ ಬಿಡುಗಡೆ ಮಾಡಲಾಗ್ತಿದೆ. ಇದೇ ಶುಕ್ರವಾರ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಈಗಾಗಲೇ ಸಾಕಷ್ಟು ಬಾರಿ ನೋಡಿರುವ ಚಿತ್ರವನ್ನು ಮತ್ತೆ ತೆರೆಮೇಲೆ ನೋಡಲು ಸಿನಿರಸಿಕರು ಉತ್ಸುಕರಾಗಿದ್ದಾರೆ. ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 2015ರಲ್ಲಿ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ? ಎನ್ನುವ ಪ್ರಶ್ನೆ ಜೊತೆಗೆ 2017ರಲ್ಲಿ ಬಂದಿದ್ದ 'ಬಾಹುಬಲಿ ದಿ ಕನ್‌ಕ್ಲೂಷನ್' ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು.

ಎರಡೂ ಸಿನಿಮಾಗಳ ಒಟ್ಟಾರೆ ಕಾಲಾವಧಿ 5 ಗಂಟೆಗೂ ಹೆಚ್ಚಿದೆ. ಅದನ್ನು 3 ಗಂಟೆ 40 ನಿಮಿಷಕ್ಕೆ ಇಳಿಸಲಾಗಿದೆ. ಇಂಟ್ರೆಸ್ಟಿಂಗ್ ಎನಿಸುವ ಸನ್ನಿವೇಶಗಳು ಹಾಗೂ ಹಾಡುಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸದ್ಯ ಹಳೇ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಆದರೆ 'ಬಾಹುಬಲಿ' ಸಿನಿಮಾ ಎರಡು ಭಾಗಗಳಾಗಿ ಇರುವುದರಿಂದ ಯಾವುದನ್ನು ರೀ-ರಿಲೀಸ್ ಮಾಡುವುದು. ಎರಡನ್ನೂ ತೆರೆಗೆ ತಂದರೆ ಯಾರು ನೋಡ್ತಾರೆ? ಹಾಗಾಗಿ ಎರಡನ್ನು ಸೇರಿಸಿ ಚಿಕ್ಕದಾಗಿ ಚೊಕ್ಕದಾಗಿ ಮತ್ತೆ ತೆರೆಗೆ ತರ್ತಿದ್ದಾರೆ.
ಅಂದಹಾಗೆ 'ಬಾಹುಬಲಿ' ಸಿನಿಮಾ ಆರಂಭಿಸಿದ್ದಾಗ ಮೊದಲಿಗೆ ಒಂದು ಚಿತ್ರದಲ್ಲಿ ಎಲ್ಲಾ ಕಥೆಯನ್ನು ಹೇಳಲು ರಾಜಮೌಳಿ ಬಯಸಿದ್ದರು. ಆದರೆ ಸಿನಿಮಾ ಮಾಡ್ತಾ ಮಾಡ್ತಾ ಎಲ್ಲಾ ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಡುವ ಸಮಯದಲ್ಲಿ ಅನಿವಾರ್ಯವಾಗಿ ಎರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಆಗ ಹುಟ್ಟಿದ್ದೆ ಸೀಕ್ವೆಲ್ ಟ್ರೆಂಡ್. ಮುಂದೆ ಅದು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿ ಟ್ರೆಂಡ್ ಹುಟ್ಟು ಹಾಕಿತು.
ಎರಡೂವರೆ ಗಂಟೆಗಿಂತ ಜಾಸ್ತಿ ಆಗುತ್ತದೆ ಎಂದು ಅಂದು ಎರಡು ಭಾಗಗಳಾಗಿ ಕತ್ತರಿಸಿ ಸಿನಿಮಾ ಮಾಡಿದ್ದ ಜಕ್ಕಣ್ಣ ಈಗ ತಾವೇ ಮುಂದೆ ನಿಂತು ಎರಡನ್ನೂ ಒಟ್ಟಾಗಿಸಿ ಕಾಲಾವಧಿ ತಗ್ಗಿಸಿ ಸಿನಿಮಾ ತೆರೆಗೆ ತರ್ತಿದ್ದಾರೆ. ಇದೇ ಶುಕ್ರವಾರ(ಅಕ್ಟೋಬರ್ 31) ಸಿನಿಮಾ 'ಬಾಹುಬಲಿ ದಿ ಎಪಿಕ್' ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದೆ. ಬೆಂಗಳೂರಿನಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಅಭಿಮಾನಿಗಳು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಒಂದೆರಡು ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್ ಶುರವಾಗ 24 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ.
ಗಂಟೆಗೆ 5 ಸಾವಿರ ಟಿಕೆಟ್ ಬುಕ್ ಮೈ ಶೋನಲ್ಲಿ ಬುಕ್ ಆಗ್ತಿದೆ. ರಾಜಮೌಳಿ, ಪ್ರಭಾಸ್ ಕ್ರೇಜ್ ಎಂಥಾದ್ದು ಎನ್ನುವುದು ಮತ್ತೆ ಸಾಬೀತಾಗುತ್ತಿದೆ. ಸಾಕಷ್ಟು ದೃಶ್ಯಗಳನ್ನು ಕತ್ತರಿಸಿ ಹಾಕಿರುವ ಜಕ್ಕಣ್ಣ ಒಂದಷ್ಟು ಹೊಸ ದೃಶ್ಯಗಳನ್ನು ಚಿತ್ರದಲ್ಲಿ ಸೇರಿಸಿದ್ದಾರೆ. ಅದು ಕುತೂಹಲ ಮೂಡಿಸಿದೆ. ಈಗಾಗಲೇ 'ಬಾಹುಬಲಿ ದಿ ಎಪಿಕ್' ಚಿತ್ರದ ಪ್ರಚಾರ ಕೂಡ ಶುರುವಾಗಿದೆ. ರಾಜಮೌಳಿ, ಪ್ರಭಾಸ್, ರಾಣಾ ವಿಶೇಷ ಸಂದರ್ಶನ ಕೂಡ ಬರ್ತಿದೆ.
ಇತ್ತೀಚೆಗೆ ಪ್ರಭಾಸ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದರ ಬೆನ್ನಲ್ಲೇ 'ಬಾಹುಬಲಿ ದಿ ಎಪಿಕ್' ಸಿನಿಮಾ ತೆರೆಗಪ್ಪಳಿಸುತ್ತಿದೆ. ಮತ್ತೆ ಮಾಹಿಷ್ಮತಿ ಸಾಮ್ರಾಜ್ಯ, ಅಮೇರೇಂದ್ರ ಬಾಹುಬಲಿ(ಪ್ರಭಾಸ್), ಮಹೇಂದ್ರ ಬಾಹುಬಲಿ(ಪ್ರಭಾಸ್), ಬಲ್ಲಾಳ ದೇವ(ರಾಣಾ), ದೇವಸೇನಾ(ಅನುಷ್ಕಾ ಶೆಟ್ಟಿ), ಶಿವಗಾಮಿ(ರಮ್ಯಾಕೃಷ್ಣ) ಆರ್ಭಟವನ್ನು ಪ್ರೇಕ್ಷಕರು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು. ಈಗಾಗಲೇ ಸಾಕಷ್ಟು ಸಿನಿಮಾಗಳು ರೀ-ರಿಲೀಸ್ ಆಗಿ ಹಿಟ್ ಆಗಿದೆ. ಆ ಎಲ್ಲಾ ದಾಖಲೆಗಳನ್ನು ಈ ಸಿನಿಮಾ ಮುರಿಯುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











