10 Years Of Baahubali: ಮೌಳಿ 'ಬಾಹುಬಲಿ' ಚಿತ್ರಕ್ಕೆ ಕನ್ನಡಿಗರ ಕಥೆಗಳೇ ಸ್ಫೂರ್ತಿ?
ತೆಲುಗಿನ 'ಬಾಹುಬಲಿ' ಸಿನಿಮಾ 10 ವರ್ಷ ಪೂರೈಸಿದೆ. ಎರಡು ಭಾಗಗಳಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. 'ಬಾಹುಬಲಿ': ದಿ ಬಿಗಿನಿಂಗ್ ಸಿನಿಮಾ 2015, ಜುಲೈ 10ರಂದು ಬಿಡುಗಡೆಯಾಗಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ಹಾಗೂ ಸತ್ಯರಾಜ್ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಸದ್ಯ ಟ್ರೆಂಡ್ ಆಗಿರುವ ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್‌ಗೆ ಬುನಾದಿ ಹಾಕಿದ್ದೆ 'ಬಾಹುಬಲಿ' ಸಿನಿಮಾ. ಅಷ್ಟೇ ಅಲ್ಲ ಭಾರತೀಯ ಸಿನಿಮಾಗಳಲ್ಲಿ ಕೂಡ ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಪ್ರಯತ್ನಕ್ಕೂ ಈ ಚಿತ್ರ ನಾಂದಿ ಹಾಡಿತ್ತು. ಸಿನಿಮಾ 10 ವರ್ಷ ಪೂರೈಸಿದ ಸಂಭ್ರಮದಲ್ಲಿ ರೀ-ರಿಲೀಸ್ ಡೇಟ್ ಘೋಷಣೆಯಾಗಿದೆ.

ಅಕ್ಟೋಬರ್ 31ರಂದು ದೊಡ್ಡಮಟ್ಟದಲ್ಲಿ 'ಬಾಹುಬಲಿ' ಸಿನಿಮಾ ತೆರೆಗಪ್ಪಳಿಸಲಿದೆ. ಎರಡೂ ಚಿತ್ರಗಳನ್ನು ಸೇರಿಸಿ ಒಟ್ಟಿಗೆ ಎಡಿಟ್ ಮಾಡಿ ಒಂದೇ ಸಿನಿಮಾ ಆಗಿ ಮರು-ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇನ್ನು ರಾಜಮೌಳಿಯ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ಕನ್ನಡ ಕಥೆಗಳೇ ಪ್ರೇರಣೆ ಎಂದು ಕೆಲವರು ವಾದಿಸುತ್ತಾ ಬರುತ್ತಿದ್ದಾರೆ.
ಹೇಳಿಕೇಳಿ ರಾಜಮೌಳಿ ರಾಯಚೂರು ಮೂಲದವರು. ಅವರ ತಂದೆ ವಿಜಯೇಂದ್ರ ಪ್ರಸಾದ್ ಕೂಡ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು. ಕನ್ನಡ ಮಾತನಾಡಲು ಕೂಡ ಬರುತ್ತದೆ. ಅಣ್ಣಾವ್ರ ಸಿನಿಮಾಗಳನ್ನು ನೋಡಿ ಬೆಳೆದವರು ಎಂದು ಅವರು ಹೇಳುತ್ತಾರೆ. ಡಾ. ರಾಜ್‌ಕುಮಾರ್ ನಟನೆಯ 'ಮಯೂರ' ಹಾಗೂ 'ಇಮ್ಮಡಿ ಪುಲಿಕೇಶಿ' ಚಿತ್ರಗಳ ಪ್ರಭಾವ 'ಬಾಹುಬಲಿ' ಚಿತ್ರದಲ್ಲಿ ಕಾಣುತ್ತದೆ. ಆದರೆ ಇದನ್ನು ತೆಲುಗು ಪ್ರೇಕ್ಷಕರು ಒಪ್ಪಲು ಸಿದ್ಧರಿಲ್ಲ.

'ಮಯೂರ' ಚಿತ್ರಕ್ಕೂ 'ಬಾಹುಬಲಿ' ಚಿತ್ರಕ್ಕೂ ಎತ್ತಣಿಂದೆತ್ತ ಸಂಬಂಧ ಎನ್ನುತ್ತಾರೆ. ಸಿನಿಮಾಗಳಿಂದ ಸ್ಫೂರ್ತಿ ಪಡೆಯೋದು ಹೊಸದೇನು ಅಲ್ಲ. 'ಬಾಹುಬಲಿ' ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಅವ್ರು ಕೂಡ ಕನ್ನಡ ಸಿನಿಮಾಗಳನ್ನು ನೋಡಿ ಪ್ರೇರಣೆಗೊಂಡಿರುವ ಸಾಧ್ಯತೆಯಿದೆ. ಚಿತ್ರದಲ್ಲಿ ಬಲ್ಲಾಳ ದೇವನ ವಿಗ್ರಹ ಎತ್ತಿ ನಿಲ್ಲಿಸುವ ಸನ್ನಿವೇಶ ಕನ್ನಡ 'ಇಮ್ಮಡಿ ಪುಲಿಕೇಶಿ' ಚಿತ್ರದಿಂದ ಕಾಪಿ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ.
'ಬಾಹುಬಲಿ' ಚಿತ್ರದ ಸನ್ನಿವೇಶಗಳನ್ನು ಕನ್ನಡ ಸಿನಿಮಾ ಸನ್ನಿವೇಶಗಳ ಜೊತೆ ಹೋಲಿಕೆ ಮಾಡಿ ಕೆಲ ವೀಡಿಯೋಗಳನ್ನು ಎಡಿಟ್ ಮಾಡಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಸಿಂಗ್ ಬಾಬು ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದರು. "ರಾಜಮೌಳಿ ನಮ್ಮ 'ಮಯೂರ', 'ರಾಜಾ ನನ್ನ ರಾಜಾ' ಚಿತ್ರಗಳನ್ನು ಕದ್ದಿದ್ದಾರೆ. ಕನ್ನಡ ಪುಸ್ತಕಗಳಲ್ಲಿ ಇರುವುದನ್ನು ಕದ್ದುಬಿಟ್ಟಿದ್ದಾರೆ. 'ಮದಕರಿ ನಾಯಕ' ಚಿತ್ರದಲ್ಲಿ ಸನ್ನಿವೇಶಗಳನ್ನು ಚಿತ್ರೀಕರಿಸಲು ಹೋದಾಗ ಆ ಎಲ್ಲಾ ಸನ್ನಿವೇಶಗಳನ್ನು 'ಬಾಹುಬಲಿ' ಚಿತ್ರದಲ್ಲಿ ಹಾಕಿಬಿಟ್ಟಿದ್ದಾರೆ" ಎಂದು ಆರೋಪಿಸಿದ್ದರು.
ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ? ಎನ್ನುವ ಪ್ರಶ್ನೆಯನ್ನು ಉಳಿಸಿ 'ಬಾಹುಬಲಿ- 2' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದರು ರಾಜಮೌಳಿ. ಎರಡು ವರ್ಷಗಳ ಬಳಿಕ ಸೀಕ್ವೆಲ್ ಕೂಡ ತೆರೆಕಂಡು ಹಿಟ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರಾಜಮೌಳಿ ವಿಷನ್, ಟೇಕಿಂಗ್, ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ನಟನೆ ಮೋಡಿ ಮಾಡಿತ್ತು.
ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ಯುದ್ಧ ಸನ್ನಿವೇಶಗಳನ್ನು ರಾಜಮೌಳಿ ಸೆರೆಹಿಡಿದಿದ್ದು ಸ್ಪಷ್ಟವಾಗಿ ಗೊತ್ತಾಗಿತ್ತು. 'ಹರ್ಕ್ಯುಲಸ್', 'ದಿ ಲಾರ್ಡ್ ಆಫ್ ರಿಂಗ್ಸ್' ಹೀಗೆ ಹಲವು ಹಾಲಿವುಡ್ ಸಿನಿಮಾಗಳಲ್ಲಿರುವ ಸನ್ನಿವೇಶಗಳನ್ನು ನೋಡಿ ಪ್ರೇರಣೆಗೊಂಡು 'ಬಾಹುಬಲಿ' ಸಿನಿಮಾ ಮಾಡಿರುವುದು ಎದ್ದು ಕಾಣುತ್ತಿತ್ತು. ಏನೇ ಕಾಪಿ, ಪ್ರೇರಣೆ, ಸ್ಫೂರ್ತಿ ಅನ್ನಿಸಿದ್ರು 'ಬಾಹುಬಲಿ' ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಬಾಕ್ಸಾಫೀಸ್ ಕೊಳ್ಳೆ ಹೊಡೆದು ದಾಖಲೆ ಬರೆದಿತ್ತು.


Click it and Unblock the Notifications











