Baby Movie: 4 ಗಂಟೆ ಅವಧಿಯ ಬೇಬಿ ಚಿತ್ರ ಬಿಡುಗಡೆ? ವೈಷ್ಣವಿ ಚೈತನ್ಯ ಮತ್ತಷ್ಟು ಬೋಲ್ಡ್ ದೃಶ್ಯಗಳು ರಿಲೀಸ್?
ಜುಲೈ 14ರ ಶುಕ್ರವಾರದಂದು ಬಿಡುಗಡೆಯಾದ ಯುವ ನಟ - ನಟಿಯರ ತೆಲುಗು ಚಿತ್ರ ಬೇಬಿ ಸದ್ಯ ಟಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವರ್ಷ ಟಾಲಿವುಡ್ ಅಂಗಳದಲ್ಲಿ ತೆರೆಗೆ ಬಂದ ಸ್ಟಾರ್ ನಟ ಹಾಗೂ ಖ್ಯಾತ ನಟಿಯರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ದೊಡ್ಡ ಬಜೆಟ್‌ನ ಚಿತ್ರಗಳೇ ಗಳಿಕೆ ಮಾಡಲಾಗದೇ ಮಕಾಡೆ ಮಲಗಿದ್ದು, ಬೇಬಿ ಚಿತ್ರ ಮಾತ್ರ ಯಾವುದೇ ಸ್ಟಾರ್ ನಟ - ನಟಿಯೂ ಸಹ ತಾರಾಗಣದಲ್ಲಿ ಇಲ್ಲದೇ ಇದ್ದರೂ ಸಹ ಗೆದ್ದು ಬೀಗಿದೆ.
ಹೌದು, ಬೇಬಿ ಚಿತ್ರ ಮಾಡುತ್ತಿರುವ ಗಳಿಕೆ ಸ್ಟಾರ್ ನಟ - ನಟಿಯರ ಚಿತ್ರದ ರೇಂಜಿಗಿದೆ. ಸುಮಾರು 8 ಕೋಟಿ ವೆಚ್ಚದಲ್ಲಿ ತಯಾರಾದ ಬೇಬಿ ಚಿತ್ರ ಎರಡೇ ದಿನಗಳಲ್ಲಿ ಲಾಭದ ಗುರಿಯನ್ನು ಮುಟ್ಟಿ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು. ಸ್ಲಂನಲ್ಲಿ ಬೆಳೆದ ನಾಯಕಿ ಶಾಲಾ ದಿನಗಳಿಂದಲೂ ಅದೇ ಸ್ಲಂನಲ್ಲಿ ಇದ್ದ ನಾಯಕನನ್ನು ಪ್ರೀತಿಸಿ ಬಳಿಕ ಕಾಲೇಜು ಸೇರಿದ ಬಳಿಕ ಏನೆಲ್ಲಾ ಬದಲಾವಣೆಯಾಗ್ತಾಳೆ ಹಾಗೂ ಇದು ಆಕೆಯ ಜೀವನದಲ್ಲಿ ಏನೆಲ್ಲಾ ಅವಾಂತರ ಸೃಷ್ಟಿಸುತ್ತೆ ಎನ್ನುವುದೇ ಬೇಬಿ ಚಿತ್ರದ ಒನ್‌ಲೈನ್ ಕಥೆ.

ಈ ರೀತಿಯ ಕಥೆಯನ್ನು ಆಧರಿಸಿ ಈಗಾಗಲೇ ತುಂಬಾ ಸಿನಿಮಾಗಳು ಬಂದಿವೆಯಾದರೂ ಅವೆಲ್ಲವನ್ನೂ ಹಿಂದಿಕ್ಕಿ ಬೇಬಿ ಸ್ಪೆಷಲ್ ಎನಿಸುವುದಕ್ಕೆ ಕಾರಣ ಚಿತ್ರದಲ್ಲಿರುವ ಮಾಡರ್ನ್ ಯುಗದ ಸ್ಕ್ರೀನ್‌ಪ್ಲೇ. ಹೌದು, ಈಗಿನ ಐ ಫೋನ್ ಯುಗದಲ್ಲಿ ಹುಡುಗಿಯರ ಚಂಚಲ ಮನಸ್ಸು ಯಾರ ಮಾತಿನಿಂದ ಏನೆಲ್ಲಾ ಸ್ಪೂರ್ತಿಗೊಳ್ಳುತ್ತೆ, ಮೂರ್ಖತನವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಹಾಗೂ ಇದರಿಂದ ಏನೆಲ್ಲಾ ಕಷ್ಟಗಳನ್ನು ಅನುಭವಿಸ್ತಾರೆ ಎಂಬುದನ್ನು ನಿರ್ದೇಶಕ ಶ್ರೀ ರಾಜೇಶ್ ನೀಲಮ್ ತುಂಬಾ ಅರ್ಥಗರ್ಭಿತವಾಗಿ ಬರೆದು ನಿರ್ದೇಶಿಸಿದ್ದಾರೆ. ನಾಯಕನಾಗಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ನಾಯಕಿಯಾಗಿ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ.
ಹೀಗೆ ಭರ್ಜರಿ ಗೆಲುವು ಸಾಧಿಸಿರುವ ತೆಲುಗು ಚಿತ್ರ ಓಟಿಟಿಯಲ್ಲಿ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು, ಸದ್ಯ ಓಟಿಟಿಯಲ್ಲಿ ಬರುವ ಚಿತ್ರದ ಬಗ್ಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಹೌದು, ಓಟಿಟಿಯಲ್ಲಿ ಬೇಬಿ ಚಿತ್ರದ ಫುಲ್ ವರ್ಷನ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ ಎಂಬ ಸುದ್ದಿಯನ್ನು ತೆಲುಗಿನ ಪ್ರಸಿದ್ಧ ಸಿನಿಮಾ ಸುದ್ದಿಗಳ ವೆಬ್‌ಸೈಟ್ ಒಂದು ತಿಳಿಸಿದೆ.
ಈ ಸುದ್ದಿಯ ಪ್ರಕಾರ ಬೇಬಿ ಚಿತ್ರದ 4 ಗಂಟೆಯ ಅವಧಿಯ ವರ್ಷನ್ ಅನ್ನು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದು, ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರದಲ್ಲಿ ಇಲ್ಲದಿರುವ ಅನೇಕ ದೃಶ್ಯಗಳು ಈ ವರ್ಷನ್‌ನಲ್ಲಿ ಇರಲಿವೆ. ಚಿತ್ರದಲ್ಲಿ ಇಲ್ಲದ ಒಂದಿಷ್ಟು ಹಾಡುಗಳು, ವೈಷ್ಣವಿ ಚೈತನ್ಯ ಹಾಗೂ ವಿರಾಜ್ ಅಶ್ವಿನ್ ನಡುವಿನ ಬೋಲ್ಡ್ ದೃಶ್ಯಗಳು, ನಾಯಕ ಆನಂದ್ ದೇವರಕೊಂಡ ಹಾಗೂ ಆತನ ತಾಯಿಯ ನಡುವಿನ ಮತ್ತಷ್ಟು ಮನ ಕಲಕುವ ದೃಶ್ಯಗಳು ಸಹ ಬಿಡುಗಡೆಯಾಗಲಿವೆ ಎಂದು ಈ ವರದಿ ತಿಳಿಸಿದೆ.


Click it and Unblock the Notifications











