Baby Movie: ತೆಲುಗು ಯೂತ್ ಬ್ಲಾಕ್‌ಬಸ್ಟರ್ ಬೇಬಿ ಸಕ್ಸಸ್ ಮೀಟ್‌ಗೆ ಅಲ್ಲು ಅರ್ಜುನ್ ಚೀಫ್ ಗೆಸ್ಟ್
ಕಳೆದ ಶುಕ್ರವಾರ ಜುಲೈ 14ರಂದು ಬಿಡುಗಡೆಯಾದ ಯುವ ನಟ - ನಟಿಯರ ತೆಲುಗು ಚಿತ್ರ ಬೇಬಿ ಸದ್ಯ ಟಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವರ್ಷ ಟಾಲಿವುಡ್ ಅಂಗಳದಲ್ಲಿ ತೆರೆಗೆ ಬಂದ ಸ್ಟಾರ್ ನಟ ಹಾಗೂ ಖ್ಯಾತ ನಟಿಯರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ದೊಡ್ಡ ಬಜೆಟ್‌ನ ಚಿತ್ರಗಳೇ ಗಳಿಕೆ ಮಾಡಲಾಗದೇ ಮಕಾಡೆ ಮಲಗಿದ್ದು, ಬೇಬಿ ಚಿತ್ರ ಮಾತ್ರ ಯಾವುದೇ ಸ್ಟಾರ್ ನಟ - ನಟಿಯೂ ಸಹ ತಾರಾಗಣದಲ್ಲಿ ಇಲ್ಲದೇ ಇದ್ದರೂ ಸಹ ಗೆದ್ದು ಬೀಗಿದೆ.
ಹೌದು, ಬೇಬಿ ಚಿತ್ರ ಮಾಡುತ್ತಿರುವ ಗಳಿಕೆ ಸ್ಟಾರ್ ನಟ - ನಟಿಯರ ಚಿತ್ರದ ರೇಂಜಿಗಿದೆ. ಸುಮಾರು 8 ಕೋಟಿ ವೆಚ್ಚದಲ್ಲಿ ತಯಾರಾದ ಬೇಬಿ ಚಿತ್ರ ಎರಡೇ ದಿನಗಳಲ್ಲಿ ಲಾಭದ ಗುರಿಯನ್ನು ಮುಟ್ಟಿ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು. ಸದ್ಯ 4 ದಿನಗಳಲ್ಲಿ 31 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಚಿತ್ರ ಮಾಡಿದ್ದು, ತೆಲುಗು ಬಾಕ್ಸ್ ಆಫೀಸ್‌ನಲ್ಲಿ ಅಗ್ರಸ್ಥಾನದಲ್ಲಿ ಟ್ರೆಂಡ್ ಆಗ್ತಿದೆ.

ಇಷ್ಟರ ಮಟ್ಟಿಗೆ ಗಳಿಕೆ ಮಾಡಿ ಬ್ಲಾಕ್‌ಬಸ್ಟರ್ ಆಗಿರುವ ಬೇಬಿ ಚಿತ್ರವನ್ನು ಸಂಭ್ರಮಿಸಲು ಇದೀಗ ಚಿತ್ರತಂಡ ನಿರ್ಧರಿಸಿದ್ದು, ಅಭಿನಂದನಾ ಕಾರ್ಯಕ್ರಮ ( Appreciation Meet ) ಹಮ್ಮಿಕೊಂಡಿದೆ. ಇಂದು ( ಜುಲೈ 20 ) ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಯಾಗಿ ಸ್ಟೈಲಿಶ್ ಐಕಾನ್ ಅಲ್ಲು ಅರ್ಜುನ್ ಆಗಮಿಸಲಿದ್ದಾರೆ.
ಬೇಬಿ ಚಿತ್ರದ ಕಥೆ?
ಶಾಲಾ ದಿನಗಳಿಂದ ಓರ್ವನನ್ನು ಪ್ರೀತಿಸುವ ಸ್ಲಂನಲ್ಲಿ ಬೆಳೆದ ಹುಡುಗಿ ಕಾಲೇಜು, ಶ್ರೀಮಂತ ಸ್ನೇಹಿತರು ಸಿಕ್ಕಾಗ ಕಾಲಕ್ಕೆ ತಕ್ಕ ಹಾಗೆ ಹೇಗೆ ಬದಲಾಗ್ತಾಳೆ ಎಂಬ ಒಂದು ಸರಳ ಎಳೆಯ ಮೇಲೆ ರಚಿಸಲಾಗಿರುವ ಚಿತ್ರ ಇದಾಗಿದ್ದು, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ನಾಯಕಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದರೆ, ವಿರಾಜ್ ಅಶ್ವಿನ್ ಸಹ ಮತ್ತೋರ್ವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಈ ರೀತಿಯ ಕಥೆಯನ್ನು ಆಧರಿಸಿ ಈಗಾಗಲೇ ತುಂಬಾ ಸಿನಿಮಾಗಳು ಬಂದಿವೆಯಾದರೂ ಅವೆಲ್ಲವನ್ನೂ ಹಿಂದಿಕ್ಕಿ ಬೇಬಿ ಸ್ಪೆಷಲ್ ಎನಿಸುವುದಕ್ಕೆ ಕಾರಣ ಚಿತ್ರದಲ್ಲಿರುವ ಮಾಡರ್ನ್ ಯುಗದ ಸ್ಕ್ರೀನ್‌ಪ್ಲೇ. ಹೌದು, ಈಗಿನ ಐ ಫೋನ್ ಯುಗದಲ್ಲಿ ಹುಡುಗಿಯರ ಚಂಚಲ ಮನಸ್ಸು ಯಾರ ಮಾತಿನಿಂದ ಏನೆಲ್ಲಾ ಸ್ಪೂರ್ತಿಗೊಳ್ಳುತ್ತೆ, ಮೂರ್ಖತನವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಹಾಗೂ ಇದರಿಂದ ಏನೆಲ್ಲಾ ಕಷ್ಟಗಳನ್ನು ಅನುಭವಿಸ್ತಾರೆ ಎಂಬುದನ್ನು ನಿರ್ದೇಶಕ ಶ್ರೀ ರಾಜೇಶ್ ನೀಲಮ್ ತುಂಬಾ ಅರ್ಥಗರ್ಭಿತವಾಗಿ ಬರೆದು ನಿರ್ದೇಶಿಸಿದ್ದಾರೆ.
ಮೊದಲಿಗೆ ಬೇಬಿ ಚಿತ್ರ ಬಿಡುಗಡೆಗೊಳ್ಳುವ ಮುನ್ನ ರಿಲೀಸ್ ಮಾಡಲಾಗಿದ್ದ ವಿಭಿನ್ನವಾದ ಪೋಸ್ಟರ್‌ಗಳ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿತ್ತು. ಹೌದು, ಮಧ್ಯದ ಬೆರಳಿನ ಮೇಲೆ ನಾಯಕಿಯ ಚಿತ್ರವನ್ನು ಹಾಕಿ ಮಾಡಲಾಗಿದ್ದ ಪೋಸ್ಟರ್ ವಿವಾದವನ್ನು ಎಬ್ಬಿಸಿತ್ತು. ಹೀಗೆ ಬಿಡುಗಡೆಯ ಸನಿಹದಲ್ಲಿ ಮಾಡಿಕೊಂಡಿದ್ದ ವಿವಾದ ಚಿತ್ರದ ಮೇಲೆ ಯಾವುದೇ ಪರಿಣಾಮ ಬೀರದೇ ಇದ್ದು, ತೆಲುಗು ಸಿನಿ ರಸಿಕರು ಚಿತ್ರ ಕಥೆಯನ್ನು ಮೆಚ್ಚಿಕೊಂಡು ವಿಜಯದ ಮಾಲೆ ತೊಡಿಸಿದ್ದಾರೆ.


Click it and Unblock the Notifications











