ಶ್ರೀಲಂಕಾದಲ್ಲಿ ಕೊಡಗಿನ ಕಿನ್ನರಿ, ಮದುವೆ ಮುನ್ನ ಗೆಳತಿಯರ ಜೊತೆ ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿ?
ಚಿತ್ರರಂಗದಲ್ಲಿ ಸದ್ಯ ಮದುವೆಯ ಸೀಸನ್ ಶುರುವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಹಲವರು ತಮ್ಮ ಸಿಂಗಲ್ ಸ್ಟೇಟಸ್‌ಗೆ ಗುಡ್ ಬೈ ಹೇಳಿ ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಕೆಲವರು ಸರಳವಾಗಿ ಹಸೆಮಣೆ ಏರಿದರೆ ಇನ್ನೂ ಕೆಲವರು ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಇನ್ನೂ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು...
ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ಪರಿಣಿತಿ ಚೋಪ್ರಾವರೆಗೆ.. ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ಈ ಸಾಲಿನಲ್ಲಿ ಸೇರಿಕೊಳ್ಳುವ ತವಕದಲ್ಲಿಯೂ ಕೂಡ ಹಲವರು ಇದ್ದು, ತಮ್ಮ ಇಷ್ಟದ ಸೆಲೆಬ್ರಿಟಿ ಎಲ್ಲಿ ಮದುವೆಯಾಗಬಹುದು ಎಂದು ಅಭಿಮಾನಿಗಳು ಕೂಡ ತಲೆ ಕೆಡಿಸಿಕೊಂಡಿದ್ದಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುತ್ತ ಮುತ್ತ ನಡೆಯುತ್ತಿರುವ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮುಂಬರುವ ಫೆಬ್ರವರಿ 26ಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇವರ ಇಬ್ಬರ ಮದುವೆಗೆ ಯಾವ ಊರು ..? ಯಾವ ರಾಜ್ಯ ..? ಯಾವ ದೇಶ..? ಸಾಕ್ಷಿಯಾಗಲಿದೆ ಎನ್ನುವುದು ಸದ್ಯ ಗೊತ್ತಿಲ್ಲವಾದರು ಹಲವರ ಪ್ರಕಾರ ರಾಜಸ್ಥಾನದ ಉದಯಪುರದಲ್ಲಿ ವೈಭವೋಪೇತವಾಗಿ ಇಬ್ಬರ ಮದುವೆ ನಡೆಯಲಿದೆ.
ತಮ್ಮ ಮದುವೆಯ ಕುರಿತ ಈ ಸುದ್ದಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿಲ್ಲ. ಮದುವೆಯ ಸುದ್ದಿ ನಿಜಾ ಎಂದು ಒಪ್ಪಿಕೊಂಡಿಲ್ಲ. ಹಾಗಂಥ ಸುದ್ದಿಯನ್ನು ತಳ್ಳಿಯೂ ಹಾಕಿಲ್ಲ. ಸುಳ್ಳು ಎಂದು ಕೂಡ ಹೇಳಿಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
''ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ''ಗೆ ಕೆಲ ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ ನಾನು ಮದುವೆಯ ಸುದ್ದಿಯನ್ನು ಒಪ್ಪುವುದು ಇಲ್ಲ. ಹಾಗಂಥ ತಳ್ಳಿಯೂ ಹಾಕಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಎಲ್ಲದಕ್ಕೂ ಸಮಯ ಸಂದರ್ಭ ಎನ್ನುವುದು ಇರುತ್ತೆ. ಆ ಸಮಯ ಬಂದಾಗ ನಾವೇ ಎಲ್ಲರಿಗೆ ಖಂಡಿತಾ ಹೇಳಿಯೇ ಹೇಳುತ್ತೇವೆ ಎಂದು ಹೇಳಿದ್ದಾರೆ.
ಹೀಗಾಗಿ ಫೆಬ್ರವರಿ 26ರಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹೊಸ ಬದುಕಿಗೆ ಮುನ್ನುಡಿ ಬರೆಯುವುದು ಖಚಿತ, ನಿಶ್ಚಿತ ಎಂದೇ ಇವರ ಅಭಿಮಾನಿಗಳು ಅಂದುಕೊಂಡಿದ್ದಾರೆ.

ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರ ಜೊತೆ ಶ್ರೀಲಂಕಾದಲ್ಲಿ ಬಿಡಾರ ಹೂಡಿದ್ದಾರೆ. ತಮ್ಮ ಮೋಜು ಮಸ್ತಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಕಾಕ್‌ಟೈಲ್ ಗ್ಲಾಸ್ ಹಿಡಿದು ಸಂಭ್ರಮ ಪಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಈ ಸಂಭ್ರಮದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಕಣ್ತುಂಬಿಕೊಂಡ ಇವರ ಅಭಿಮಾನಿಗಳು, ರಶ್ಮಿಕಾ ಅವರ ಈ ಪ್ರವಾಸ ಸಾಮಾನ್ಯದಂತೆ ಕಂಡು ಬರುತ್ತಿಲ್ಲ. ಬದಲಿಗೆ ಬ್ಯಾಚುಲರ್ ಪಾರ್ಟಿ ಮಾಡಲು ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರ ಜೊತೆ ಹೋದಂತೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಮುನ್ನ ತಮ್ಮ ಅತ್ಯಾಪ್ತ ಸ್ನೇಹಿತೆಯರ ಜೊತೆಯ ಕೊನೆಯ ಬ್ಯಾಚುಲರ್ ಟ್ರಿಪ್ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಹಂಚಿಕೊಂಡ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೇವಲ 14 ಗಂಟೆಯಲ್ಲಿ 1,349,896 ಲೈಕ್‌ಗಳು ಈ ಫೋಟೊಗಳಿಗೆ ಸಿಕ್ಕಿವೆ. ಒಟ್ನಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ರಶ್ಮಿಕಾ ತಮ್ಮ ಸ್ನೇಹಿತೆಯರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಇಬ್ಬರು ತಮ್ಮ ಮದುವೆಯ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











