ಮತ್ತೊಂದು ಸಿನಿಮಾ ಸೋಲು: ರಶ್ಮಿಕಾಗಿರುವ ಅದೃಷ್ಟ ಶ್ರೀಲೀಲಾಗಿಲ್ಲ!
ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾಗಳಲ್ಲಿ ಹೆಚ್ಚು ಮಿಂಚಲು ಆರಂಭಿಸಿದ್ದಾರೆ. ಆದರೆ ಯಾಕೋ ರಶ್ಮಿಕಾಗೆ ಇರುವ ಅದೃಷ್ಟ ಈ ಬೆಂಗಳೂರು ಬೆಡಗಿಗೆ ಇಲ್ಲ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ಒಂದೇ ಒಂದು ಬ್ರೇಕ್ ಮಾತ್ರ ಸಿಗುತ್ತಿಲ್ಲ. ಮತ್ತೊಂದು ಸಿನಿಮಾ ಹೀನಾಯವಾಗಿ ಸೋಲುಂಡಿದೆ.
ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ಒಪ್ಪಿಕೊಂಡು ರಶ್ಮಿಕಾ ಸಂಚಲನ ಸೃಷ್ಟಿಸಿದ್ದರು. ಬಾಲಕೃಷ್ಣ, ಪವನ್ ಕಲ್ಯಾಣ್, ಮಹೇಶ್ ಬಾಬು ಹೀಗೆ ಸಿನಿಮಾಗಳ ಲಿಸ್ಟ್ ಬೆಳೆಯುತ್ತಾ ಹೋಗಿತ್ತು. ಆದರೆ ಯಾವುದೇ ಸಿನಿಮಾ ಆಕೆಯ ಕೈ ಹಿಡಿಯುತ್ತಿಲ್ಲ. ಸದ್ಯ ಮಹೇಶ್ ಬಾಬು ಜೊತೆ 'ಗುಂಟೂರು ಖಾರಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹಾಡೊಂದು ಇತ್ತೀಚೆಗೆ ರಿಲೀಸ್ ಆಗಿತ್ತು. ಅದು ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ.

ಕನ್ನಡದ 'ಕಿಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀಲೀಲಾ ಬಳಿಕ ಟಾಲಿವುಡ್ ಪ್ರವೇಶಿಸಿದ್ದರು. 'ಪೆಳ್ಳಿಸಂದಡಿ' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ಧಮಕಾ' ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ಮಿಂಚಿದ್ದರು. ಈ ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. ಬಳಿಕ ಒಂದರ ಹಿಂದೊಂದರಂತೆ ಸಿನಿಮಾಗಳಿಗೆ ಸಹಿ ಮಾಡಿದರು. ಸ್ಟಾರ್ ನಟರು ತೆರೆಮೇಲೆ ಶ್ರೀ ಜೊತೆ ರೊಮ್ಯಾನ್ಸ್ ಮಾಡಲು ಹಠ ಹಿಡಿದರು.
ಈ ವರ್ಷ ಶ್ರೀಲೀಲಾ ನಟಿಸಿದ 4 ತೆಲುಗು ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಎಲ್ಲವೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಮೊದಲಿಗೆ ರಾಮ್ ಪೋತಿನೇನಿ ಜೊತೆಗೆ 'ಸ್ಕಂದ' ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಸದ್ದು ಮಾಡಲಿಲ್ಲ. ಬಳಿಕ ಬಾಲಕೃಷ್ಣ ಮಗಳ ಪಾತ್ರದಲ್ಲಿ 'ಭಗವಂತ್ ಕೇಸರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದು ಕೂಡ ಅಷ್ಟಾಗಿ ಪ್ರೇಕ್ಷಕರ ನಿರೀಕ್ಷೆ ತಲುಪಲಿಲ್ಲ. ಆದರೆ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಬಹಳ ಹಿಂದೆ ಶುರುವಾಗಿದ್ದ 'ಆದಿಕೇಶವ' ಸಿನಿಮಾ ಅಂತೂ ಇಂತೂ ಇತ್ತೀಚೆಗೆ ತೆರೆಕಂಡಿತ್ತು. ಆ ಚಿತ್ರಕ್ಕೂ ಸೋಲೇ ಸೋಪಾನವಾಯಿತು. ಇನ್ನು ಕಳೆದ ವಾರದ ಬಂದ 'ಎಕ್ಸ್‌ಟ್ರಾಡಿನರಿಮ್ಯಾನ್' ಸಿನಿಮಾ ಕೂಡ ಸೋಲುಂಡಿದೆ. ಈ ಚಿತ್ರದಲ್ಲಿ ನಿತಿನ್ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದರು. ಚಿತ್ರದ ಸಾಕಷ್ಟು ನಷ್ಟ ಅನುಭವಿಸಿದ್ದು ಹೀರೊ ನಿತಿನ್ ವಿತರಕರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ನಿತಿನ್ ಹಾಗೂ ಶ್ರೀಲೀಲಾ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ವೆಂಕಿ ಕುಡುಮುಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೊದಲಿಗೆ ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಆಕೆ ಹೊರಬಂದ ಕಾರಣ ಅವಕಾಶ ಕಿಸ್ ಬೆಡಗಿ ಪಾಲಾಗಿದೆ.
ಮಹೇಶ್ ಬಾಬು ಜೊತೆ 'ಗುಂಟೂರು ಖಾರಂ' ಚಿತ್ರದಲ್ಲಿ ಶ್ರೀಲೀಲಾ 2ನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳ್ತಿದ್ದು ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ. ಇನ್ನು ಪವನ್ ಕಲ್ಯಾಣ್ ಜೋಡಿಯಾಗಿ 'ಉಸ್ತಾದ್ ಭಗತ್‌ಸಿಂಗ್' ಚಿತ್ರಕ್ಕೂ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್ ಸ್ಟಾರ್ ಸದ್ಯ ಮುಂದಿನ ಆಂಧ್ರ ಚುನಾವಣೆ ಕಡೆ ಗಮನ ಹರಿಸಿದ್ದು ಸಿನಿಮಾ ನಿರ್ಮಾಣವಾಗುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾಗಿ ಶ್ರೀಲೀಲಾ ಟಾಲಿವುಡ್ ಭವಿಷ್ಯ 'ಗುಂಟೂರು ಖಾರಂ' ಸಿನಿಮಾ ಫಲಿತಾಂಶವನ್ನು ಆಧರಿಸಿದೆ.
ಶ್ರೀಲೀಲಾ ಇತ್ತೀಚೆಗೆ ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮಾಜಿ ಸಚಿವ ಜನಾರ್ಧನ ರೆಡ್ಡಿ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಯಾಕೋ ಆ ಸಿನಿಮಾ ಸುದ್ದಿನೇ ಇಲ್ಲ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬರಬೇಕಿದೆ.


Click it and Unblock the Notifications











