7 ತೆಲುಗು ಚಿತ್ರಗಳಿಗೆ ಸಹಿ ಹಾಕಿದ ಕನ್ನಡತಿ ಶ್ರೀಲೀಲಾ; ರಶ್ಮಿಕಾ ಸೇರಿ ಇಬ್ಬರು ನಟಿಯರಿಗೆ ಕಡಿಮೆಯಾಯ್ತು ಆಫರ್ಸ್!

2019ರಲ್ಲಿ ಬಿಡುಗಡೆಗೊಂಡ ಕನ್ನಡದ 'ಕಿಸ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಶ್ರೀಲೀಲಾ ನಂತರ ಶ್ರೀ ಮುರಳಿ ಅಭಿನಯದ 'ಭರಾಟೆ' ಹಾಗೂ ಧನ್ವೀರ್ ಜತೆಗಿನ 'ಬೈ ಟು ಲವ್' ಎಂಬ ಚಿತ್ರಗಳಿಗೆ ಬಣ್ಣ ಹಚ್ಚಿದ್ದು ಬಿಟ್ಟರೆ ಉಳಿದ ಯಾವುದೇ ಕನ್ನಡ ಚಿತ್ರಗಳಲ್ಲಿಯೂ ನಟಿಸಿಲ್ಲ ಹಾಗೂ ನಟಿಸಲಿದ್ದಾರೆ ಎಂದು ಯಾವ ಕನ್ನಡ ಚಿತ್ರಗಳೂ ಸಹ ಘೋಷಣೆಗೊಂಡಿಲ್ಲ.
ಹೀಗೆ ಕನ್ನಡ ಚಿತ್ರಗಳ ನಟನೆಯಿಂದ ದೂರಾಗಿರುವ ನಟಿ ಶ್ರೀಲೀಲಾ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಕಿಸ್ ಹಾಗೂ ಭರಾಟೆ ಬಳಿಕ ತೆಲುಗಿನ 'ಪೆಳ್ಳಿ ಸಂದಡಿ' ಎಂಬ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿಯೇ ಬ್ಯುಸಿಯಾಗಿದ್ದಾರೆ. ಪೆಳ್ಳಿ ಸಂದಡಿ ಬಳಿಕ ಸದ್ಯ ರವಿತೇಜಾ ನಟನೆಯ ಧಮಾಕಾ ಚಿತ್ರದಲ್ಲಿ ನಟಿಯಾಗಿ ನಟಿಸುತ್ತಿರುವ ಶ್ರೀಲೀಲಾ ಈ ಚಿತ್ರವೂ ಸೇರಿದಂತೆ ಒಟ್ಟು ಏಳು ಚಿತ್ರಗಳಿಗೆ ಸಹಿ ಹಾಕಿದ್ದಾರೆ.
ಶ್ರೀಲೀಲಾ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದರೆ ಅತ್ತ ಟಾಲಿವುಡ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿ ಬ್ಯುಸಿ ಇರುತ್ತಿದ್ದ ಇಬ್ಬರು ನಟಿಯರು ಮಾತ್ರ ತಮ್ಮ ಕೈನಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸದ್ಯಕ್ಕೆ ಹೊಂದಿಲ್ಲ. ನಟಿಯರಾದ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ಆಗಮನದಿಂದ ಈ ಇಬ್ಬರು ಸ್ಟಾರ್ ನಟಿಯರಿಗೆ ಅವಕಾಶ ಕಡಿಮೆಯಾದವು ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.

ಏಳು ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ
ನಟಿ ಶ್ರೀಲೀಲಾ ಸದ್ಯ ಏಳು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದು ಟಾಲಿವುಡ್‌ನಲ್ಲಿಯೇ ಸುಮಾರು ಎರಡು - ಮೂರು ವರ್ಷಗಳು ಬ್ಯುಸಿಯಾಗುವುದು ಖಚಿತ ಎನ್ನಬಹುದು. ಶ್ರೀಲೀಲಾ ಸಹಿ ಹಾಕಿರುವ ತೆಲುಗು ಚಿತ್ರಗಳೆಂದರೆ: ಧಮಾಕಾ, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್‌ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರದಲ್ಲಿ ನಟಿ ಶ್ರೀಲೀಲಾ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ಕೈನಲ್ಲಿ ಕೇವಲ ಒಂದೊಂದು ಸಿನಿಮಾ
ಒಂದೆಡೆ ಶ್ರೀಲೀಲಾ ಸಾಲು ಸಾಲು ಆಫರ್ ಗಿಟ್ಟಿಸಿಕೊಳ್ಳುತ್ತಿದ್ದರೆ ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ಹೆಚ್ಚು ಚಿತ್ರಗಳನ್ನು ಘೋಷಿಸದಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ರಶ್ಮಿಕಾ ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಲ್ಲೇನೋ ಬ್ಯುಸಿಯಾಗಿದ್ದಾರೆ ನಿಜ. ಆದರೆ ತೆಲುಗಿನಲ್ಲಿ 'ಪುಷ್ಪ ದಿ ರೂಲ್' ಹೊರತುಪಡಿಸಿ ಇನ್ಯಾವುದೇ ಚಿತ್ರಗಳಲ್ಲಿಯೂ ಕೊಡಗಿನ ಬೆಡಗಿ ಸಹಿ ಹಾಕಿಲ್ಲ. ಅತ್ತ ಪೂಜಾ ಹೆಗ್ಡೆ ಕತೆಯೂ ಇಷ್ಟೇ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರದಲ್ಲಿ ಪ್ರಥಮ ನಾಯಕಿಯಾಗಿ ಅಭಿನಯಿಸುತ್ತಿರುವ ಪೂಜಾ ಹೆಗ್ಡೆ ಈ ಚಿತ್ರದ ಬಳಿಕ ಇನ್ಯಾವುದೇ ತೆಲುಗು ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಹೀಗಾಗಿ ಸದ್ಯ ತೆಲುಗು ಚಿತ್ರರಂಗದಲ್ಲಿ ಈ ಇಬ್ಬರು ನಟಿಯರ ನಾಗಲೋಟ ತಣ್ಣಗಾಯ್ತಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ತನಗೆ ಬೇಕಾದ ಚಿತ್ರಗಳನ್ನಷ್ಟೇ ಆಯ್ದುಕೊಳ್ತಿರೋ ಶ್ರೀಲೀಲಾ
ಇನ್ನು ನಟಿ ಶ್ರೀಲೀಲಾ ಅಭಿನಯದ ಪೆಳ್ಳಿ ಸಂದಡಿ ಹೊರತುಪಡಿಸಿ ಬೇರಾವುದೇ ತೆಲುಗು ಚಿತ್ರಗಳು ಬಿಡುಗಡೆಗೊಂಡಿಲ್ಲ. ಹೀಗೆ ಒಂದೇ ಚಿತ್ರದ ಮೂಲಕ ಹೈಪ್ ಗಿಟ್ಟಿಸಿಕೊಂಡಿರುವ ಕನ್ನಡದ ಚೆಲುವೆ ಚಿತ್ರದ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಾರೆ. ಇತ್ತೀಚೆಗಷ್ಟೆ ತಾನು ಒಪ್ಪಿಕೊಂಡಿದ್ದ 'ಡಿಜೆ ಟಿಲ್ಲು ಸ್ಕ್ವೇರ್' ಚಿತ್ರದಿಂದ ನಟಿ ಶ್ರೀಲೀಲಾ ಹೊರನಡೆದಿದ್ದರು. ಬೇಡಿಕೆ ಹೆಚ್ಚಿರುವ ಕಾರಣ ಶ್ರೀಲೀಲಾ ಸದ್ಯ ತನಗೆ ಇಷ್ಟವಾದ ಚಿತ್ರಗಳಲ್ಲೇ ಅಭಿನಯಿಸುವ ಅನುಕೂಲ ಹೊಂದಿದ್ದಾರೆ.


Click it and Unblock the Notifications











