20 ವರ್ಷಗಳ ಬಳಿಕ ರೀ-ರಿಲೀಸ್- ದಾಖಲೆ ಸೃಷ್ಟಿಸಿದ ಚೆನ್ನಕೇಶವ ರೆಡ್ಡಿ
ರೀ-ರಿಲೀಸ್ ಎನ್ನುವುದು ಚಿತ್ರಂಗದ ಹೊಸ ಟ್ರೆಂಡ್. ಒಂದು ಜಮಾನದಲ್ಲಿ ಹಿಟ್ ಆದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದ್ದು, ಪ್ರೇಕ್ಷಕರು ಕೂಡ ಈ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಚಿತ್ರಗಳನ್ನು ಈಗಾಗಲೇ ರೀ-ರಿಲೀಸ್ ಮಾಡಲಾಗಿದ್ದು, ನಂದಮೂರಿ ಬಾಲ ಕೃಷ್ಣ ಅಭಿನಯದ ಚೆನ್ನಕೇಶವ ರೆಡ್ಡಿ ಸಿನಿಮಾ ಕೂಡ ಸದ್ಯ ಈ ಪಟ್ಟಿಗೆ ಸೇರಿದೆ.
ಟಾಲಿವುಡ್‌ನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ವಿವಿ ವಿನಾಯಕ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಚೆನ್ನಕೇಶವ ರೆಡ್ಡಿ ಚಿತ್ರ ಶನಿವಾರ( ಸಪ್ಟೆಂಬರ್ 24)ರಂದು ಯುಎಸ್‌ಎ ಹಾಗೂ ಆಂಧ್ರಪ್ರದೇಶದಲ್ಲಿ ಮರು ಬಿಡುಗಡೆಯಾಗಿದೆ. ಚೆನ್ನಕೇಶವ ರೆಡ್ಡಿ ಮರು ಬಿಡುಗಡೆ ಬಗ್ಗೆ ಭರ್ಜರಿ ಪ್ರಚಾರ ನಡೆದಿದ್ದು, ಯುಎಸ್‌ಎನ ಅನೇಕ ಸಿಸಿಪ್ರಿಯರು ಟಕೆಟ್ ಮುಂಗಡವಾಗಿ ಕಾಯ್ದಿರಿಸಿದ್ದರು. ಮರು ಬಿಡುಗಡೆಯಾದ ದಿನವೇ ಚಿತ್ರ ಅದ್ಭುತ ಪ್ರದರ್ಶನ ಕಂಡಿದ್ದು, ಉತ್ತಮ ಗಳಿಕೆ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಎರಡು ದಶಕಗಳ ನಂತರ ಚೆನ್ನಕೇಶವ ರೆಡ್ಡಿ ಚಿತ್ರವನ್ನು ಯುಎಸ್‌ಎ ಹಾಗೂ ಆಂಧ್ರಪ್ರೇಶದ 300 ಸ್ಕ್ರೀನ್‌ನಲ್ಲಿ ಮರು ಬಿಡುಗಡೆ ಮಾಡಲಾಗಿತ್ತು. ಯುಎಸ್‌ಎನಲ್ಲಿ ವಿಶೇಷ ಪ್ರದರ್ಶನ ಕಂಡಿರುವ ಚೆನ್ನಕೇಶವ ರೆಡ್ಡಿ ಚಿತ್ರ $45,000 ಅಂದರೆ 36 ಲಕ್ಷಕ್ಕೂ ಅಧಿಕ ಹಣ ಗಳಿಸಿದೆ. ಈ ಮೂಲಕ ಪವನ್ ಕಲ್ಯಾಣ್ ನಟನೆಯ ಜಲ್ಸಾ ಚಿತ್ರ ಹಾಗೂ ಪುರಿ ಜಗನ್ನಾಥ್ ನಿರ್ದೇಶನದ ಪೊಕರಿ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಚೆನ್ನಕೇಶವ ರೆಡ್ಡಿ ಚಿತ್ರದ ರೀ-ರಿಲೀಸ್‌ನಲ್ಲಿ ಸಂಗ್ರಹವಾದ ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಲು ಚಿತ್ರತಂಡ ನಿರ್ಧರಿಸಿದ್ದು, ಚಿತ್ರ ಮರು ಬಿಡುಗಡೆಯಿಂದ ಗಳಿಸುವ ಹಣವನ್ನು ಬಸವತಾರಕಂ ಟ್ರಸ್ಟ್‌ಗೆ ನೀಡಲಾಗುತ್ತಿದೆ.

ನಂದಮೂರಿ ಬಾಲಕೃಷ್ಣ (ಬಾಲಯ್ಯ) ಅವರ ವೃತ್ತಿ ಜೀವನಕ್ಕೆ ಬಹುದೊಡ್ಡ ಯಶಸ್ಸು ತಂದುಕೊಟ್ಟ ಚೆನ್ನಕೇಶವ ರೆಡ್ಡಿ ಚಿತ್ರ ಬಿಡುಗಡೆಗೊಂಡು 20 ವರ್ಷಗಳೇ ಕಳೆದಿವೆ. ಆದರೆ ಆ ಚಿತ್ರದ ಕಥೆ ಹಾಗೂ ಚಿತ್ರದಲ್ಲಿ ಬರುವ ಪಾತ್ರಗಳನ್ನು ಪ್ರೇಕ್ಷಕರು ಇಂದಿಗೂ ಮರೆತಿಲ್ಲ. ಚೆನ್ನಕೇಶವ ರೆಡ್ಡಿ ಎನ್ನುವ ವ್ಯಕ್ತಿಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ. 2002 ಸಪ್ಟೆಂಬರ್ 25ರಂದು ತೆರೆಕಂಡ ಚೆನ್ನಕೇಶವ ರೆಡ್ಡಿ ಚಿತ್ರ ಅಂದಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಮಾಡುವ ಮೂಲಕ ಚಿತ್ರತಂಡ ಯಶಸ್ಸು ಕಂಡಿತ್ತು.
ಟಾಲಿವುಡ್‌ನ ಖ್ಯಾತ ನಿರ್ದೇಶಕ ವಿವಿ ವಿನಾಯಕ್ ಅವರು ತಾವೇ ಬರೆದು ನಿರ್ದೇಶಿಸಿರುವ ಚೆನ್ನಕೇಶವ ರೆಡ್ಡಿ ಚಿತ್ರ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿತ್ತು. ಬಾಲಯ್ಯ ಅಭಿಮಾನಿಗಳು ಈ ಚಿತ್ರವನ್ನು ಸಂಭ್ರಮಿಸಿದ್ದು, ಈ ಚಿತ್ರದ ಮೂಲಕ ನಂದಮೂರಿ ಬಾಲಕೃಷ್ಣ ಅವರ ಖ್ಯಾತಿ ಕೂಡ ಹೆಚ್ಚಾಗಿತ್ತು. ಇನ್ನು ಚಿತ್ರದಲ್ಲಿ ಬಾಲಯ್ಯ ಜೊತೆಗೆ ಖ್ಯಾತ ನಟಿ ಟಬು ತೆರೆ ಹಂಚಿಕೊಂಡಿದ್ದರು. ಶ್ರೀ ಸಾಯಿ ಗಣೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬೆಲ್ಲಕೊಂಡ ಸುರೇಶ್ ಚೆನ್ನಕೇಶವ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಬಾಲಯ್ಯ ಹಾಗೂ ಟಬು ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಚೆನ್ನಕೇಶವ ರೆಡ್ಡಿ ಚಿತ್ರ ಹಾಡುಗಳು ಸಹ ಕೇಳುಗರ ಮೆಚ್ಚುಗೆ ಪಡೆದುಕೊಂಡಿದ್ದು, ಮಣಿ ಶರ್ಮಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.
ಚೆನ್ನಕೇಶವ ರೆಡ್ಡಿ ಚಿತ್ರ ತೆರೆ ಕಂಡು ನಿನ್ಗೆನೆ (ಸಪ್ಟೆಂಬರ್ 25) ಇಪ್ಪತ್ತು ವರ್ಷಗಳು ಸಂಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಬಾಲಯ್ಯ ಅಭಿನಯದ ಚಿತ್ರವನ್ನು ಮರು ಬಿಡುಗಡೆ ಮಾಡಲಾಗಿತ್ತು. ಸದ್ಯ ರೀ-ರಿಲೀಸ್ ಆಗಿರುವ ಚೆನ್ನಕೇಶವ ರೆಡ್ಡಿ ಆಂಧ್ರಪ್ರದೇಶ ಹಾಗೂ ಯುಎಸ್‌ಎನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.


Click it and Unblock the Notifications











