ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಟ್ರಾಫಿಕ್ ಪೋಲಿಸ್ ಜೊತೆ ನಟ ವಾಗ್ವಾದ
ಸಂಚಾರಿ ನಿಯಮಗಳು ಎಲ್ಲರಿಗೂ ಒಂದೇ. ಅದು ಸಾಮಾನ್ಯ ಜನರೇ ಆಗಿರಲಿ, ಸೆಲೆಬ್ರೆಟಿಗಳೇ ಆಗಿರಲಿ. ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಆದರೆ ಇಲ್ಲೊಬ್ಬ ನಟ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ಕಾನ್ಸ್‌ಸ್ಟೇಬಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕಾನ್ಸ್‌ಸ್ಟೇಬಲ್ ಮಾತನ್ನು ಲೆಕ್ಕಿಸದೇ ಕಾರು ಚಲಾಯಿಸಿಕೊಂಡು ಹೊರಟು ಹೋಗಿದ್ದಾರೆ.
ನಟ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸುತ್ತಾ ಬಂದಾಗ ಕಾನ್ಸ್‌ಸ್ಟೇಬಲ್ ತಡೆಯಲು ಯತ್ನಿಸಿದ್ದಾರೆ. ಆಗ ನಟ ಕಾರ್ ನಿಲ್ಲಿಸದೇ ಅವರ ಮೇಲೆಯೇ ಕಾರು ಚಲಾಯಿಸಲು ಮುಂದಾಗಿದ್ದಾರೆ. ಪ್ರಮಾದದಿಂದ ತಪ್ಪಿಸಿಕೊಂಡ ಕಾನ್ಸ್‌ಸ್ಟೇಬಲ್ ಕಾರು ಅಡ್ಡಗಟ್ಟಿ ನಟನಿಗೆ ಬುದ್ಧಿ ಹೇಳಿದ್ದಾರೆ. ಆದರೆ ಅದಕ್ಕೆ ಕ್ಯಾರೇ ಅನ್ನದೇ ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗ್ತಿದೆ. ಸಾರ್ವಜನಿಕರು ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ.
ಯುವ ನಟ ಹೀಗೆ ರಸ್ತೆಯಲ್ಲಿ ಕಿರಿಕ್ ಮಾಡಿಕೊಂಡಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ನಟನ ನಡೆಗೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ಸೆಲೆಬ್ರೆಟಿಗಳು ದೇವಲೋಕದಿಂದ ಇಳಿದು ಬಂದಿದ್ದಾರಾ? ಸಂಚಾರಿ ನಿಮಯ ಎಲ್ಲರಿಗೂ ಒಂದೇ. ತಪ್ಪು ಮಾಡಿದ ಮೇಲೆ ದಂಡ ಕಟ್ಟಿ ಹೋಗಬೇಕು. ಅದು ಬಿಟ್ಟು ಟ್ರಾಫಿಕ್ ಪೊಲೀಸ್ ಜೊತೆ ವಾಗ್ವಾದಕ್ಕೆ ಇಳಿಯುವುದು ಯಾಕೆ? ಎಂದು ಕೇಳುತ್ತಿದ್ದಾರೆ.

ಅಂದಹಾಗೆ ಈ ರೀತಿ ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದು ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್. ಒಂದಷ್ಟು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದು ಇತ್ತೀಚೆಗೆ ಬಾಲಿವುಡ್ ಪ್ರವೇಶಿಸಿ ನಿರಾಸೆ ಅನುಭವಿಸಿದ್ದರು. ತೆಲುಗಿನ ಖ್ಯಾತ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಪುತ್ರ. ಹಾಗಾಗಿ ಅನಾಯಾಸವಾಗಿ ಸಿನಿಮಾ ಅವಕಾಶಗಳು ಸಿಕ್ಕಿತ್ತು. ಆದರೆ ಗೆಲುವು ಸಿಗಲಿಲ್ಲ.
ಬೆಲ್ಲಂಕೊಂಡ ಶ್ರೀನಿವಾಸ್ ಮಂಗಳವಾರ (ಮೇ 13) ಸಂಜೆ ಜುಬಿಲಿ ಹಿಲ್ಸ್ ಜರ್ನಲಿಸ್ಟ್ ಕಾಲೋನಿಯಲ್ಲಿ ಕಾರು ಚಲಾಯಿಸುವ ವೇಳೆ ಈ ಘಟನೆ ನಡೆದಿದೆ. ಆತ ಕಾರನ್ನು ರಾಂಗ್ ರೂಟ್‌ನಲ್ಲಿ ಚಲಾಯಿಸಿದ್ದು ಮಾತ್ರವಲ್ಲದೇ, ತನ್ನನ್ನು ಪ್ರಶ್ನಿಸಿದ ಟ್ರಾಫಿಕ್ ಕಾನ್‌ಸ್ಟೇಬಲ್ ಜೊತೆಯೂ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ನಟ ವರ್ತನೆಯನ್ನು ಟ್ರಾಫಿಕ್ ಪೊಲೀಸ್ ಕಾನ್ಸ್‌ಸ್ಟೇಬಲ್ ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಹೇಳಲಾಗುತ್ತಿದೆ.
ತಾವೇ ತಪ್ಪು ಮಾಡಿ ಬಳಿಕ ಟ್ರಾಫಿಕ್ ಪೊಲೀಸರ ಮೇಲೆ ಜನ ವಾಗ್ವಾದ ನಡೆಸುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಕೆಲವರು ಕುಡಿದು ವಾಹನ ಚಾಲಾಯಿಸಿ ಇದೇ ರೀತಿ ಹೈಡ್ರಾಮಾ ಕ್ರಿಯೇಟ್ ಮಾಡುತ್ತಾರೆ. ಆದರೆ ಎಲ್ಲರಿಗೂ ಮಾದರಿ ಆಗಬೇಕಿರುವ ಸೆಲೆಬ್ರೆಟಿಗಳು ಈ ರೀತಿ ಮಾಡುವುದು ಸರಿಯಲ್ಲ. ಇದೇ ಕಾರಣಕ್ಕೆ ಬೆಲ್ಲಂಕೊಂಡ ಸುರೇಶ್ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
'ಅಲ್ಲುಡು ಶ್ರೀನು' ಚಿತ್ರದ ಮೂಲಕ ಬೆಲ್ಲಂಕೊಂಡ ಶ್ರೀನಿವಾಸ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ತಂದೆ ಮೊದಲ ಸಿನಿಮಾ ನಿರ್ಮಾಣ ಮಾಡಿದ್ದರು. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬಂದಿತ್ತು. ಬಳಿಕ 'ಸ್ಪೀಡುನ್ನೋಡು', 'ಜಯ ಜಾನಕಿ ನಾಯಕ', 'ಸಾಕ್ಷ್ಯಂ', 'ಕವಚಂ', 'ರಾಕ್ಷಸುಡು', 'ಅಲ್ಲುಡು ಅದುರ್ಸ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಶ್ರೀನಿವಾಸ್ ನಟಿಸಿದ್ದರು. ಆದರೆ ಯಾವ ಸಿನಿಮಾ ಕೂಡ ದೊಡ್ಡದಾಗಿ ಗೆಲ್ಲಲಿಲ್ಲ.
ಇತ್ತೀಚೆಗೆ ಪ್ರಭಾಸ್ ನಟನೆಯ 'ಛತ್ರಪತಿ' ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡುವ ಸಾಹಸ ಮಾಡಿದ್ದರು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಸದ್ಯ 'ಭೈರವಂ', 'ಟೈಸನ್ ನಾಯ್ಡು', 'ಹೈಂದವ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಶ್ರೀನಿವಾಸ್ ನಟಿಸುತ್ತಿದ್ದಾರೆ. ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಲಾಸ್ ಏಂಜಲೀಸ್‌ನಲ್ಲಿ ಆಕ್ಟಿಂಗ್ ಕೋರ್ಸ್ ಹಾಗೂ ವೆಯೆಟ್ನಾಂನಲ್ಲಿ ಮಾರ್ಷನ್ ಆರ್ಟ್ಸ್ ತರಬೇತಿ ಪಡೆದು ಬಂದಿದ್ದಾರೆ.


Click it and Unblock the Notifications











