ಬೆಂಗಳೂರು ರೇವ್ ಪಾರ್ಟಿಯಲ್ಲಿ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಜಾನಿ ಮಾಸ್ಟರ್ ಇದ್ದಿದ್ದು ನಿಜವೇ?
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಜಿಆರ್ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ಅತ್ತ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದರು. ಹಲವರನ್ನು ಬಂಧಿಸಿದ್ದರು. ಇದರಲ್ಲಿ ತೆಲುಗು ನಟ, ನಟಿಯರು ಇರುವುದಾಗಿ ವರದಿಯಾಗಿದೆ.
ತೆಲುಗು ಪೋಷಕ ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಇದ್ರಾ ಎನ್ನುವ ಬಗ್ಗೆ 2 ದಿನಗಳಿಂದ ಭಾರೀ ಚರ್ಚೆ ನಡೀತಿದೆ. ತೆಲುಗು ನಟ ಶ್ರೀಕಾಂತ್ ಕೂಡ ತಾನು ಹೈದರಾಬಾದ್‌ನಲ್ಲೇ ಇದ್ದೀನಿ. ನಾನು ಬೆಂಗಳೂರು ರೇವ್ ಪಾರ್ಟಿಯಲ್ಲಿ ಇದ್ದೆ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ನಟಿ ಹೇಮಾ ಪಾರ್ಟಿಯಲ್ಲಿ ಇದ್ದಿದ್ದು ನಿಜ ಎನ್ನಲಾಗಿತ್ತು. ಆದರೆ ಆಕೆ ಅದೆಲ್ಲಾ ಸುಳ್ಳು ಎಂದು ವಾದಿಸಿದ್ದರು.

ನಾನು ಬೇರೆ ಕಡೆ ಫಾರ್ಮ್‌ಹೌಸ್‌ನಲ್ಲಿ ಇದ್ದೀನಿ ಎಂದು ಒಂದು ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ ನಟಿ ಹೇಮಾ ಜಿಆರ್ ಫಾರಂ ಹೌಸ್‌ನಲ್ಲಿ ಇದ್ದಿದ್ದು ನಿಜ ಎಂದು ಮಾಹಿತಿ ನೀಡಿದ್ದಾರೆ. ಪಾರ್ಟಿಗೆ ಬಂದಿದ್ದ ಎಲ್ಲರ ರಕ್ತ ಪರೀಕ್ಷೆ ಮಾಡಿ ಹೊರಕಳಿಸಿದಾಗ ಹೇಗೋ ಕಣ್ತಪ್ಪಿಸಿ ಆಕೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ತೆಲುಗು ಡ್ಯಾನ್ಸ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಕೂಡ ರೇವ್ ಪಾರ್ಟಿಯಲ್ಲಿ ಇದ್ದರು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿತ್ತು. ಕೆಲವರು ಇದೇ ವಿಚಾರವನ್ನಿಟ್ಟುಕೊಂಡು ಜನಸೇನಾ ಪಾರ್ಟಿಯನ್ನು ಟ್ರೋಲ್ ಮಾಡಿದ್ದರು. ಆದರೆ ಜಾನಿ ಮಾಸ್ಟರ್ ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕನ್ನಡ ಸಿನಿಮಾಗಳಿಗೆ ಕೂಡ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸೂಪರ್ ಹಿಟ್ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಹಾಡಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಕುಣಿಸಿದ್ದಿದ್ದು ಕೂಡ ಇದೇ ಜಾನಿ ಮಾಸ್ಟರ್.
"ನನ್ನನ್ನು ತಿಳಿದಿರುವ ಯಾರಿಗಾದರೂ ತಿಳಿದಿರುವ ಮೊದಲ ವಿಷಯವೆಂದರೆ ನನಗೆ ಅಂತಹ ಯಾವುದೇ ಪಾರ್ಟಿ ಅಭ್ಯಾಸಗಳಿಲ್ಲ. ಅನಾವಶ್ಯಕವಾಗಿ ನನ್ನ ಮೇಲೆ ಹಾಗೂ ನಮ್ಮ ಜನಸೇನಾ ಮೇಲೆ ಕೆಸರು ಎರಚುವ ಪ್ರಯತ್ನ ಇದಾಗಿದ್ದು, ಈ ರೀತಿ ಸುಳ್ಳು ಪ್ರಚಾರ ಮಾಡುವ ಗುಳ್ಳೆ ನರಿಗಳ ಅಳು ಸದ್ಯದಲ್ಲೇ ಕೇಳಿಸಲಿದೆ. ಈ ವದಂತಿಗಳ ಹಿಂದಿರುವ ಸತ್ಯಾಸತ್ಯತೆ ಅರಿಯದೇ ಮಾತನಾಡುವ, ಹಂಚಿಕೊಳ್ಳುತ್ತಿರುವವರ ಮಾನಸಿಕ ಸ್ಥಿತಿ ಶೋಚನೀಯವಾಗಿದೆ" ಎಂದು ಜಾನಿ ಮಾಸ್ಟರ್ ವೀಡಿಯೋ ಮಾಡಿ ತಿಳಿಸಿದ್ದಾರೆ.
ಜಾನಿ ಮಾಸ್ಟರ್ ನಟ ಪವನ್ ಕಲ್ಯಾಣ್ ಅಭಿಮಾನಿ. ಹಾಗಾಗಿ ಜನಸೇನಾ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ತಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
"ನಾನು ಹೈದರಾಬಾದ್‌ನ ಡ್ಯಾನ್ಸ್ ಡೈರೆಕ್ಟರ್ಸ್ ಸಂಘದ ಕಚೇರಿಯಲ್ಲಿದ್ದೇನೆ. ನೂಕರಾಜು ಸ್ಥಾಪಿಸಿರುವ ಈ ಸಂಘದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವರು ರೇವ್ ಪಾರ್ಟಿಯಲ್ಲಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಚುನಾವಣೆಯ ನಂತರ ನಾನು ಹೈದರಾಬಾದ್‌ನಲ್ಲಿದ್ದೆ. ನೀವು ನನ್ನನ್ನು ಡೈರೆಕ್ಟರ್ಸ್ ಡೇ ನೇರಪ್ರಸಾರದಲ್ಲಿ ನೋಡಿರಬೇಕು. ನನ್ನ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಜೈ ಜನಸೇನಾ ಎಂದು ಹೇಳುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಕನ್ನಡದ 'ನಟಸಾರ್ವಭೌಮ' ಚಿತ್ರದಲ್ಲಿ 'ಓಪನ್ ದ ಬಾಟಲ್', ಯುವರತ್ನ ಚಿತ್ರದಲ್ಲಿ 'ಫೀಲ್ ದ ಪವರ್', 'ಊರಿಗೊಬ್ಬ ರಾಜ', 'ವಿಕ್ರಾಂತ್ ರೋಣ' ಚಿತ್ರದ 'ರಾ ರಾ ರಕ್ಕಮ್ಮ' ಹಾಡುಗಳಿಗೆ ಜಾನಿ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ.
ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೂ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಜಿಆರ್ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕ ದ್ರವ್ಯ ಬಳಸಲಾಗಿತ್ತು. ಕೊಕೇನ್ ಸೇರಿದಂತೆ ಹಲವು ರೀತಿಯ ಡ್ರಗ್ಸ್ ಪತ್ತೆಯಾಗಿತ್ತು. ಇನ್ನು ಪೊಲೀಸರ ದಾಳಿ ವೇಳೆ ಡ್ರಗ್ಸ್ ನಾಶ ಪಡಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದ 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











