ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಜಾನಿ ಮಾಸ್ಟರ್‌ಗೆ ಕೇಂದ್ರದಿಂದ ಬಿಗ್ ಶಾಕ್
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತೆಲುಗು ಡ್ಯಾನ್ಸ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಇತ್ತೀಚೆಗೆ ಬಂಧನವಾಗಿದ್ದರು. ಇತ್ತೀಚೆಗೆ ಜಾನಿ ಮಾಸ್ಟರ್ ಅಲಿಯಾಸ್ ಶೇಕ್ ಜಾನಿ ಬಾಷಾಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಇದೆಲ್ಲದರ ನಡುವೆ ಆತನಿಗೆ ಮತ್ತೊಂದು ಶಾಕ್ ಎದುರಾಗಿದೆ.
'ರಾ ರಾ ರಕ್ಕಮ್ಮ' ಸಾಂಗ್ ಖ್ಯಾತಿಯ ಜಾನಿ ಮಾಸ್ಟರ್ ಮೇಲೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪವಿದೆ. ತಮಿಳಿನ 'ತಿರುಚಿತ್ರಂಬಲಂ' ಚಿತ್ರದ 'ಮೇಘಂ ಕರುಕಥ' ಸಾಂಗ್ ಕೊರಿಯೋಗ್ರಫಿಗಾಗಿ ಜಾನಿ ಮಾಸ್ಟರ್‌ಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿತ್ತು. ಸದ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ರದ್ದು ಮಾಡಲಾಗಿದೆ.

ಅಕ್ಟೋಬರ್ 8ರಂದು ದೆಹಲಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನಡೆಯಲಿದೆ. ಇಂತಹ ಸಮಯದಲ್ಲೇ ಜಾನಿ ಮಾಸ್ಟರ್‌ಗೆ ಪ್ರಶಸ್ತಿ ಪ್ರದಾನ ಮಾಡದಿರಲು ನಿರ್ಧರಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿರುವುದರಿಂದ ಆತನಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಬಾರದು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಸದ್ಯ ಆತನಿಗೆ ಘೋಷಿಸಿದ್ದ ಪ್ರಶಸ್ತಿ ರದ್ದು ಮಾಡಿರುವುದಾಗಿ ಕೇಂದ್ರ ಪ್ರಶಸ್ತಿ ಪ್ರದಾನ ಕಮಿಟಿ ಹೇಳಿದೆ.
2022ನೇ ಸಾಲಿನ ಸಿನಿಮಾಗಳಿಗೆ ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿತ್ತು. 'ಕಾಂತಾರ' ಚಿತ್ರಕ್ಕಾಗಿ ಕನ್ನಡ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಹಾಗೂ 'ತಿರುಚಿತ್ರಂಬಲಂ' ಚಿತ್ರದ ನಟನೆಗಾಗಿ ನಿತ್ಯಾ ಮೆನನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ಜಾನಿ ಮಾಸ್ಟರ್‌ಗೆ ಅತ್ಯುತ್ತಮ ಕೊರಿಯೋಗ್ರಫರ್ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಹಲವು ವಿಭಾಗಳಲ್ಲಿ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.
ದೆಹಲಿಯ ವಿಜ್ಞಾನ್ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಲು ಜಾನಿ ಮಾಸ್ಟರ್‌ಗೆ ಆಹ್ವಾನ ನೀಡಲಾಗಿತ್ತು. ಆತನ ಪೋಕ್ಸೋ ರೀತಿಯ ಗಂಭೀರ ಪ್ರಕರಣ ದಾಖಲಾಗಿದೆ, ಇನ್ನು ವಿಚಾರಣೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡುವುದು ಸರಿಯಲ್ಲ ಎನ್ನುವ ಚರ್ಚೆ ಶುರುವಾಗಿತ್ತು. ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಬೇಕು ಎನ್ನುವ ಕಾರಣ ನೀಡಿ ಜಾನಿ ಮಾಸ್ಟರ್ ಮಧ್ಯಂತರ ಜಾಮೀನು ಪಡೆದಿದ್ದರು.
ಅಕ್ಟೋಬರ್ 6ರಿಂದ 9ರವರೆಗೆ ಜಾನಿ ಮಾಸ್ಟರ್‌ಗೆ ರಂಗಾರೆಡ್ಡಿ ಜಿಲ್ಲೆ ಕೋರ್ಟ್ ಜಾಮೀನು ನೀಡಿತ್ತು. ಇದೆಲ್ಲದರ ಬೆನ್ನಲ್ಲೇ ಆತನಿಗೆ ನೀಡಿದ್ದ ರಾಷ್ಟ್ರೀಯ ಪ್ರಶಸ್ತಿ ರದ್ದಾಗಿದೆ. ಈ ಸಂಬಂಧ ರಾಷ್ಟ್ರೀಯ ಪ್ರಶಸ್ತಿ ಕಮಿಟಿ ಮಾಹಿತಿ ನೀಡಿದೆ. ಕಾರ್ಯಕ್ರಮಕ್ಕೆ ನೀಡಿದ್ದ ಆಹ್ವಾನವನ್ನು ಹಿಂದಕ್ಕೆ ಪಡೆದಿರುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪ್ರತಿಭಾನ್ವಿತ ಡ್ಯಾನ್ಸ್ ಮಾಸ್ಟರ್ ಜಾನಿ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಜಾನಿ ಮಾಸ್ಟರ್‌ಗೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿತ್ತು.
21 ವರ್ಷದ ಯುವತಿ ಜಾನಿ ಮಾಸ್ಟರ್ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಆಕೆ ಕೆಲ ವರ್ಷಗಳಿಂದ ಜಾನಿ ಮಾಸ್ಟರ್ ಡ್ಯಾನ್ಸ್ ಟೀಂನಲ್ಲಿ ಗುರ್ತಿಸಿಕೊಂಡಿದ್ದರು. ಡ್ಯಾನ್ಸರ್ ಆಗಿ ಸಹಾಯಕ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ತನಗೆ 16 ವರ್ಷ ವಯಸ್ಸಿನಲ್ಲೇ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದರು. ಮುಂಬೈ ಹೋಟೆಲ್‌ನಲ್ಲಿ ನಮ್ಮ ತಂಡ ತಂಗಿದ್ದ ವೇಳೆ ನನ್ನ ಮೇಲೆ ಮಾಸ್ಟರ್ ಲೈಂಗಿಕ ಕಿರುಕುಳ ಕೊಟ್ಟಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಾಕಷ್ಟು ಬಾರಿ ನನಗೆ ಜಾನಿ ಮಾಸ್ಟರ್ ಕಿರುಕುಳ ನೀಡಿದ್ದರು. ಇದನ್ನು ಆತನ ಪತ್ನಿ ಆಯೇಷಾ ಸಹಕಾರವೂ ಇತ್ತು ಎಂದು ಆರೋಪಿಸಿದ್ದರು. ಯುವತಿ ನೀಡಿದ ದೂರಿನ ಅನ್ವಯ ಜಾನಿ ಮಾಸ್ಟರ್ ವಿರುದ್ಧ ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಜಾನಿ ಮಾಸ್ಟರ್ ತಲೆಮರೆಸಿಕೊಂಡಿದ್ದರು. 3 ದಿನಗಳ ಬಳಿಕ ಗೋವಾದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.


Click it and Unblock the Notifications











