ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಯೋಧನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಬಿಗ್ ಬಾಸ್ ಸ್ಫರ್ಧಿ.!
ಸಾಮಾನ್ಯವಾಗಿ ಬೇರೆಯವರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಕೇವಲ ತಮ್ಮ ಚಿತ್ರಗಳ ಬಿಡುಗಡೆಯ ಹೊತ್ತಿನಲ್ಲಿ ಮಾತ್ರ ಇವರಿಗೆ ಜನಸಾಮಾನ್ಯರು ನೆನಪಾಗುತ್ತಾರೆ ಎನ್ನುವುದು ಅನೇಕರ ಅನಿಸಿಕೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲವರು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ದೇಶಕ್ಕಾಗಿ ಪ್ರಾಣವನ್ನೇ ನೀಡಿದ ವೀರಯೋಧರ ಕುಟುಂಬಕ್ಕೆ ನೆರವಾಗುತ್ತಾರೆ.
ತೆಲುಗಿನ ನಟಿ ಮಿತ್ರ ಶರ್ಮಾ ಇದಕ್ಕೆ ಸದ್ಯದ ಉದಾಹರಣೆ. ಹೌದು, ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಗಡಿಯಲ್ಲಿ ನಡೆದ ದಾಳಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಯೋಧ ಮುರಳಿ ನಾಯಕ್ ಹುತಾತ್ಮರಾಗಿದ್ದರು.

2022ರ ಅಕ್ಟೋಬರ್‌ನಲ್ಲಿ ಅಗ್ನಿ ವೀರ್‌ಗೆ ಆಯ್ಕೆಯಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರಳಿ ನಾಯಕ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಕಾಶ್ಮೀರಕ್ಕೆ ಬಂದಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೇ ಸಮಯದಲ್ಲಿ 5 ನುಸುಳುಕೋರರನ್ನು ಹೊಡೆದುರುಳಿಸಿದ್ದ ಮುರಳಿ ನಾಯಕ್ ಇದೇ ಗುಂಡಿನ ಚಕಮಕಿಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಮುರಳಿ ನಾಯಕ್ ಅಗಲಿಕೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದರು.
ಅನೇಕ ಗಣ್ಯರು ಮುರಳಿ ನಾಯಕ್ ಮನೆಗೆ ತೆರಳಿ ಮುರಳಿ ನಾಯಕ್ ಅವರ ತಂದೆ ಶ್ರೀರಾಮಲು ನಾಯಕ್ ಮತ್ತು ತಾಯಿ ಜ್ಯೋತಿ ಬಾಯಿಯವರಿಗೆ ಧೈರ್ಯವನ್ನು ತುಂಬಿದ್ದರು. ಸಾಂತ್ವಾನ ಹೇಳಿದ್ದರು.
ಇದೀಗ ಮುರಳಿ ನಾಯಕ್ ಅವರ ಮನೆಗೆ ನಟಿ ಮಿತ್ರ ಶರ್ಮಾ ಭೇಟಿ ನೀಡಿದ್ದು ಮುರಳಿ ನಾಯಕ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಅವರ ಪೋಷಕರಿಗೆ ಧೈರ್ಯವನ್ನು ತುಂಬಿದ್ಧಾರೆ.
ಇಷ್ಟೇ ಅಲ್ಲದೇ ತಮ್ಮ ಕೈಲಾದಷ್ಟು ಮುರಳಿ ನಾಯಕ್ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಕೂಡ ಮಿತ್ರ ಶರ್ಮಾ ಮಾಡಿದ್ದಾರೆ. ತಮ್ಮ ಈ ಭೇಟಿಯ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಿತ್ರ ಶರ್ಮಾ ಮಹಾನ್ ಸೈನಿಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಮಿತ್ರ ಶರ್ಮಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಂದ್ಹಾಗೇ ಭಾಗ್ಯ ವಿಧಾತಾ ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯನ್ನು ಪ್ರವೇಶಿಸಿದ್ದ ಮಿತ್ರ ಶರ್ಮಾ ಆ ನಂತರ ಅವಕಾಶಗಳನ್ನು ಹುಡುಕುತ್ತಾ ಹೈದರಾಬಾದ್‌ಗೆ ಬಂದರು. 2022ರಲ್ಲಿ 'ಬಾಯ್ಸ್' ಚಿತ್ರದ ಮೂಲಕ ನಾಯಕಿಯಾದರು.
ಮಿತ್ರ ಅಭಿನಯದ 'ವರ್ಜಿನ್ ಬಾಯ್ಸ್' ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇನ್ನು. ತೆಲುಗು ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ಮಿತ್ರ ಕಾರ್ಯಕ್ರಮದ ಕೊನೆಯವರೆಗೆ ಮನರಯಲ್ಲಿ ಉಳಿದುಕೊಂಡಿದ್ದರು. 18 ಸ್ಫರ್ಧಿಗಳ ನಡುವೆ ತಮ್ಮ ಆಟದಿಂದ ಅನೇಕರ ಗಮನ ಸೆಳೆದು ನಾಲ್ಕನೇ ರನ್ನರ್ ಅಪ್ ಆಗಿ ಕೂಡ ಮಿತ್ರ ಹೊರ ಹೊಮ್ಮಿದ್ದರು.
ಇನ್ನುಳಿದಂತೆ 23 ವರ್ಷದ ಅಗ್ನಿವೀರ್ ಯೋಧ ಹುತಾತ್ಮ ಮುರಳಿ ನಾಯಕ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಮತ್ತು 5 ಎಕರೆ ಜಮೀನು ನೀಡಲು ಆಂಧ್ರಪ್ರದೇಶದ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಸಂಪುಟ ಸಭೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಮಾಡಲಾಗಿದೆ ಎಂದು ಹಿಂದೆ ಮುರಳಿ ನಾಯಕ್ ಮನೆಗೆ ಭೇಟಿ ನೀಡಿದಾಗ ಹೇಳಿದ್ದ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ವೈಯಕ್ತಿಕವಾಗಿ ನಾನು 25 ಲಕ್ಷ ರೂಪಾಯಿ ನೀಡುತ್ತಿದ್ದೇನೆ ಎಂದು ಹೇಳಿದ್ದರು.


Click it and Unblock the Notifications











