ಬಿಗ್‌ಬಾಸ್ ಮನೆ ಎಂಟ್ರಿ ಅವಕಾಶ ಪಡೆದ ರಶ್ಮಿಕಾ ಮಂದಣ್ಣ ಕ್ಲೋಸ್ ಫ್ರೆಂಡ್
ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸುದೀಪ್ ಶೋ ನಿರೂಪಣೆ ಮಾಡ್ತಾರೋ ಇಲ್ವೋ ಎನ್ನುವ ಗೊಂದಲ ಕೂಡ ಇದೆ. ಇತ್ತೀಚೆಗೆ ಈ ಬಗ್ಗೆ ಎದುರಾದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸುದೀಪ್ ಮಾತನಾಡಿದ್ದರು. ಇದು ಬಿಗ್‌ಬಾಸ್ ಕನ್ನಡ ಶೋ ಕಥೆಯಾದರೆ ಅತ್ತ ತೆಲುಗಿನಲ್ಲಿ ಹೊಸ ಸೀಸನ್ ಶುರುವಾಗಿದೆ.
ಮತ್ತೊಮ್ಮೆ ನಟ ನಾಗಾರ್ಜುನ ನೇತೃತ್ವದಲ್ಲಿ ಶೋ ಮೂಡಿ ಬರುತ್ತಿದೆ. ಭಾನುವಾರ(ಸೆಪ್ಟೆಂಬರ್ 1) ಗ್ರ್ಯಾಂಡ್ ಓಪನಿಂಗ್ ನಡೆದಿದ್ದು 14 ಜನ ಸ್ಪರ್ಧಿಗಳು ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಕನ್ನಡದ ಇಬ್ಬರು ನಟಿಯರು ಇರುವುದು ವಿಶೇಷ. ತೆಲುಗು ಕಿರುತೆರೆಯಲ್ಲಿ ಸದ್ಯ ಕನ್ನಡಿಗರ ಕಾರುಬಾರು ಜೋರಾಗಿದೆ. ಹಲವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳಾಗಿ ಭಾಗಿ ಆಗುತ್ತಿದ್ದಾರೆ.

ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ನಟಿ ಪ್ರೇರಣಾ ಕಂಬಂ ಮನೆ ಒಳಗೆ ಹೋಗಿದ್ದಾರೆ. ಮತ್ತೊಬ್ಬ ಕನ್ನಡ ನಟಿ ಯಶ್ಮಿ ಗೌಡ ಕೂಡ 14 ಜನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಕನ್ನಡದ 'ರಂಗನಾಯಕಿ' ಧಾರಾವಾಹಿಯಲ್ಲಿ ಪ್ರೇರಣಾ ನಟಿಸಿದ್ದರು. ಅಭಯ್, ಆದಿತ್ಯ, ಮಧೂ, ನಬೀಲ್, ಸೀತಾ, ಶೇಖರ್, ವಿಷ್ಣು, ನಾಗ ಹೀಗೆ ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಬಿಗ್‌ಬಾಸ್ ವೇದಿಕೆಯಲ್ಲಿ ನಟ ನಾಗಾರ್ಜುನ ಜೊತೆ ಪ್ರೇರಣಾ ಮಾತನಾಡಿದ್ದಾರೆ. ತಾನು ಒಳ್ಳೆ ಸ್ಪೋರ್ಟ್ಸ್ ಪರ್ಸನ್ ಕೂಡ ಎಂದು ಹೇಳಿದ್ದಾರೆ. ನನಗೆ ಸ್ಪೋರ್ಟ್ಸ್ ಅಂದ್ರೆ ಬಳಹ ಇಷ್ಟ. ಎಲ್ಲಾ ತರಹದ ಸ್ಪೋರ್ಟ್ಸ್ ಆಡ್ತೀನಿ. ತನ್ನೊಟ್ಟಿಗೆ ಸ್ಪರ್ಧಿಸುವ ಕಂಟೆಸ್ಟೆಂಟ್ಸ್ ಪರಿಸ್ಥಿತಿ ಏನಾಗುತ್ತೋ ಎಂದು ಭಯವಾಗುತ್ತಿದೆ ಎಂದಿದ್ದಾರೆ.
ನಾನು- ರಶ್ಮಿಕಾ ಮಂದಣ್ಣ ಕ್ಲೋಸ್ ಫ್ರೆಂಡ್ಸ್. ಇಬ್ಬರೂ ಒಟ್ಟಿಗೆ ಒಂದೇ ರೂಮಿನಲ್ಲಿ ಇರ್ತಿದ್ವಿ. ಅಡಿಷನ್ಸ್‌ಗಾಗಿ ದೊಡ್ಡ ಲಗೇಜ್ ಹಿಡಿದು ಅರ್ಧ ರಾತ್ರಿ ಸ್ಕೂಟಿಯಲ್ಲಿ ಸುತ್ತಾಡಿದ ದಿನಗಳು ಇವೆ ಎಂದು ಪ್ರೇರಣಾ ಸ್ನೇಹಿತೆ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದಾರೆ.
ಇನ್ನು ಪ್ರೇರಣಾ ಕಂಬಂ ಅವರಿಗೆ 8 ತಿಂಗಳ ಹಿಂದೆ ಮದುವೆ ಆಗಿತ್ತು. ಶ್ರೀಪಾದ್ ದೇಶಪಾಂಡೆ ಎಂಬುವವರ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಪ್ರೇರಣಾ ಹಾಗೂ ಯಶ್ಮಿ ಗೌಡ ತೆಲುಗಿನ 'ಕೃಷ್ಣ ಮುಕುಂದ ಮುರಾರಿ' ಎನ್ನುವ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಆಗ ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದರು. ಇದೀಗ ಸ್ನೇಹಿತೆಯರ ನಡುವೆಯೇ ಬಿಗ್‌ಬಾಸ್ ಟೈಟಲ್‌ಗಾಗಿ ಸ್ಪರ್ಧೆ ಏರ್ಪಡಲಿದೆ.
ನಾಗಾರ್ಜುನ ವೇದಿಕೆಯಲ್ಲಿ ಮಾತನಾಡುತ್ತಾ ನಿಮ್ಮ ಬಗ್ಗೆ ಯಾರಿಗೂ ಸೀಕ್ರೆಟ್ ಹೇಳಿ ಎಂದು ಪ್ರೇರಣಾ ಬಳಿ ಕೇಳಿದ್ದಾರೆ. ಚಿಕ್ಕವಳಿದ್ದಾಗ ಕೆಲ ವಸ್ತುಗಳನ್ನು ಯಾರಿಗೂ ಹೇಳದೇ ಕದ್ದುಬಿಡುತ್ತಿದ್ದೆ ಎಂದಿದ್ದಾರೆ. ಕೂಡಲೇ ಮತ್ತೊಬ್ಬ ಸ್ಪರ್ಧಿ ಕಳ್ಳತನ ಮಾಡುತ್ತಿದ್ದ ಎಂದು ಆಕೆ ಹೇಳುತ್ತಿದ್ದಾಳೆ ಸರ್ ಎಂದಿದ್ದಾರೆ. ಕೂಡಲೇ ಈಗ ಆ ರೀತಿ ಮಾಡಲ್ಲ, ಇದನ್ನು ಕ್ಲೆಪ್ಟೋಮೇನಿಯಾ(Kleptomania) ಡಿಸಾರ್ಡರ್ ಅಂತಾರೆ ಎಂದು ಪ್ರೇರಣಾ ವಿವರಿಸಿದ್ದಾರೆ.
ಯಶ್ಮಿ ಗೌಡ ಕನ್ನಡದ 'ವಿದ್ಯಾ ವಿನಾಯಕ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಬೆಂಗಳೂರು ಮೂಲದ ನಟ ನಿಖಿಲ್ ಮಳಿಯಕ್ಕಲ್ ಕೂಡ ತೆಲುಗು ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದಾರೆ. ಈತ ಕಲರ್ಸ್ ಸೂಪರ್‌ನಲ್ಲಿ ಬರ್ತಿದ್ದ 'ಮನೆಯೇ ಮಂತ್ರಾಲಯ' ಧಾರವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಪ್ರೇರಣಾ, ಯಶ್ಮಿ ಗೌಡ ಹಾಗೂ ನಿಖಿಲ್‌ಗೆ ಕನ್ನಡಿಗರು ಶುಭ ಹಾರೈಸಿದ್ದಾರೆ. ಬೆಂಬಲ ಸೂಚಿಸುತ್ತಿದ್ದಾರೆ.


Click it and Unblock the Notifications











