ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು.
ಇನ್ನೂ ಬಾಹುಬಲಿ ನಂತರ ಪ್ರಭಾಸ್ ಕೇವಲ ಸೌಥ್ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಸ್ಟಾರ್‌ಗಳಂತೆಯೇ ಸಿನಿಮಾ ಮಾಡಿದರೆ ಅದು ಕೇವಲ ಪ್ಯಾನ್ ಇಂಡಿಯಾಗೆ ಮಾತ್ರ ಎಂದುಕೊಂಡು ಚಿತ್ರಗಳನ್ನು ಒಪ್ಪಿಕೊಳ್ತಿದ್ದಾರೆ.

ಹೀಗೆ ಒಪ್ಪಿಕೊಂಡ ಎರಡು ಚಿತ್ರಗಳಾದ ''ರಾಜಾ ಸಾಬ್'' ಮತ್ತು ''ಫೌಜಿ''ಯ ಮೇಲೆ ಇವರ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ನಿರೀಕ್ಷೆಗಳಿವೆ. ಈ ಎರಡು ಚಿತ್ರಗಳು ಪ್ರಭಾಸ್ ಅವರ ಸ್ಟಾರ್‌ಡಂನ ಮೆರಗನ್ನು ಹೆಚ್ಚಿಸಲಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಿರುವಾಗ ಇದೀಗ ''ಫೌಜಿ'' ಚಿತ್ರದ ಬಿಡುಗಡೆಯ ಕುರಿತು ಚರ್ಚೆ ಶುರುವಾಗಿದೆ. ''ಫೌಜಿ'' ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಅಭಿಮಾನಿಗಳ ಸಂಭ್ರಮವನ್ನು ಕೂಡ ಹೆಚ್ಚಿಸಿದೆ.
ಹೌದು, ತೆಲುಗು ವೆಬ್ ಸೈಟ್ ''telugu360'' ವರದಿ ಮಾಡಿರುವಂತೆ ''ಫೌಜಿ'' 2026ರ ''ಏಪ್ರಿಲ್ 3'' ಅಂದರೆ ''ಗುಡ್ ಫ್ರೈಡೇ'' ದಿನ ತೆರೆಗೆ ಬರಲಿದೆ. ''ಸೀತಾರಾಮಂ'' ಚಿತ್ರದ ನಿರ್ದೇಶಕ ''ಹನು ರಾಘವಪುಡಿ'' ನಿರ್ದೇಶನದ ಈ ಚಿತ್ರದಲ್ಲಿ ''ಇಮಾನ್ ಎಸ್ಮಾಯಿಲ್'' ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ರೀಲ್ಸ್ ಮಾಡುತ್ತಾ, ಬಾಲಿವುಡ್ ಸೇರಿ ಬೇರೆ ಬೇರೆ ಭಾಷೆಯ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರತಿಸಿಕೊಂಡಿದ್ದ ಇಮಾನ್ವಿ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ.
ಇನ್ನು ಪ್ರಭಾಸ್ ಅಭಿನಯದ ಮತ್ತೊಂದು ಚಿತ್ರ '' ದಿ ರಾಜಾ ಸಾಬ್'' ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಗಳಲ್ಲಿ ಕೂಡ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಆದರೆ ಈ ಚಿತ್ರದ ಬಿಡುಗಡೆಗೆ ಬಾಲಿವುಡ್ ಅಡ್ಡಗಾಲು ಹಾಕಿದ್ದು ಅವತ್ತೇ ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಅಭಿನಯದ ''ಧುರಂಧರ್'' ಚಿತ್ರ ಕೂಡ ಬಿಡುಗಡೆಯಾಗಲಿದೆ.
ಕೇವಲ ಇಷ್ಟೇ ಅಲ್ಲ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಅದೇ ದಿನ ಶಾಹಿದ್ ಕಪೂರ್ ಮತ್ತು ವಿಶಾಲ್ ಭಾರದ್ವಾಜ್ ಜೋಡಿಯ ರೋಮಿಯೋ ಚಿತ್ರ ಕೂಡ ತೆರೆಗೆ ಬರಲಿದೆ. ಈ ಕಾರಣದಿಂದ ''ದಿ ರಾಜಾ ಸಾಬ್'' ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಜನವರಿಯಲ್ಲಿ ''ಸಂಕ್ರಾಂತಿ'' ಹಬ್ಬದ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಮಾತು ಇದೆ.
ಹಾಗೊಂದು ವೇಳೆ ''ಸಂಕ್ರಾಂತಿ''ಯಂದು ''ದಿ ರಾಜಾ ಸಾಬ್'' ಮತ್ತು ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ''ಗುಡ್ ಫ್ರೈಡೇ''ಯಂದು ''ಫೌಜಿ'' ಬಿಡುಗಡೆಯಾದರೆ ಕೇವಲ ನಾಲ್ಕೇ ತಿಂಗಳಿನಲ್ಲಿ ಪ್ರಭಾಸ್ ಅವರನ್ನು ಎರಡು ಬಾರಿ ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಸೌಭಾಗ್ಯ ಅಭಿಮಾನಿಗಳದ್ದಾಗಲಿದೆ.
ಇನ್ನುಳಿದಂತೆ ''ದಿ ರಾಜಾ ಸಾಬ್'' ಹಾಗೂ ''ಫೌಜಿ'' ಹೊರತು ಪಡಿಸಿದರೆ ''ಸಲಾರ್ 2'' ಮತ್ತು ''ಕಲ್ಕಿ 2'' ಸರತಿ ಸಾಲಿನಲ್ಲಿವೆ. ಇನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ, ಪ್ರಭಾಸ್ ಅವರ ಜೊತೆ ಮೂರು ಚಿತ್ರಗಳ ಒಪ್ಪಂದ ಕೂಡ ಮಾಡಿಕೊಂಡಿದೆ. ಈ ಎಲ್ಲಾ ಚಿತ್ರಗಳು ಯಾವ ಕಾಲಕ್ಕೆ ತೆರೆಗೆ ಬರುತ್ತವೆ ಎನ್ನುವುದು ಖುದ್ದು ಪ್ರಭಾಸ್‌ಗೆ ಕೂಡ ಗೊತ್ತಿರಲಿಕ್ಕಿಲ್ಲ.


Click it and Unblock the Notifications











