ಮತ್ತೆ ಒಂದಾಗಲಿದೆ ಸೂಪರ್ ಹಿಟ್ 'ಬೇಬಿ' ಸಿನಿಮಾದ ಜೋಡಿ
ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಅಭಿನಯದ ಬೇಬಿ ಸಿನಿಮಾ ಈ ವರ್ಷದ ತೆಲುಗು ಹಿಟ್ ಸಿನಿಮಾಗಳ ಸಾಲಿನಲ್ಲಿ ಪ್ರಮುಖವಾದದ್ದು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 90 ಕೋಟಿ ರೂಪಾಯಿ ಗಳಿಸಿರುವ ಸಿನಿಮಾದಲ್ಲಿ ಆನಂದ್ ಮತ್ತು ವೈಷ್ಣವಿ ಅವರ ನಟನೆಗೆ ಜನ ಫುಲ್ ಮಾರ್ಕ್ಸ್ ನೀಡಿದ್ದರು.
ಬೇಬಿ ಸಿನಿಮಾ ಬಳಿಕ ನಟಿ ವೈಷ್ಣವಿ ಚೈತನ್ಯ ತನಗೆ ಹೊಸ ಸಿನಿಮಾಗಳ ಅವಕಾಶ ಸಿಗುತ್ತಿಲ್ಲ ಎಂದ ಬಹಿರಂಗವಾಗಿ ಹೇಳಿಕೊಂಡಿದ್ದರು. ಸದ್ಯಕ್ಕೆ ಬೇಬಿ ಸಿನಿಮಾದ ಈ ಸೂಪರ್ ಹಿಟ್ ಜೋಡಿ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ ಬೇಬಿ ಜೋಡಿ
ಬೇಬಿ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್ ಕಥಾವಸ್ತುವನ್ನು ಬರೆದಿರುವ ಚಿತ್ರಕ್ಕಾಗಿ ವೈಷ್ಣವಿ ಚೈತನ್ಯ ಮತ್ತು ಆನಂದ್ ದೇವರಕೊಂಡ ಮತ್ತೆ ಒಂದಾಗುತ್ತಿದ್ದಾರೆ ಎಂಬುದು ಈಗ ಘೋಷಣೆಯಾಗಿದೆ. ಸಿನಿಮಾದ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಹಿರಂಗಪಡಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಎಂಟರ್‌ಟೈನರ್ ಕೂಡ ಆಗಲಿದೆ ಎನ್ನುವುದನ್ನು ಪೋಸ್ಟರ್ ಸೂಚಿಸುತ್ತಿದೆ.
ಹೆಸರಿಡದ ಈ ಚಿತ್ರವನ್ನು ರವಿ ನಂಬೂರಿ ನಿರ್ದೇಶಿಸಲಿದ್ದಾರೆ. ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿ ರಾಜೇಶ್ ನೀಲಂ ಮತ್ತು ಎಸ್‌ಕೆಎನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಮತ್ತು 2024 ರ ಬೇಸಿಗೆಯ ಬಿಡುಗಡೆಗೆ ಸಿದ್ಧವಾಗಿದೆ.
"ಬ್ಲಾಕ್‌ಬಸ್ಟರ್ ಬೇಬಿ ಚಿತ್ರದ ನಂತರ ನಮ್ಮ ಜೋಡಿ ಸಾಯಿ ರಾಜೇಶ್ ಬರೆದ ಮತ್ತೊಂದು ಅದ್ಭುತ ಕಥೆಯಲ್ಲಿ ಮತ್ತೆ ಮರಳಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಣ ಸಂಸ್ಥೆ ಅಮೃತ ಪ್ರೋಡಕ್ಷನ್ ಜೊತೆಗೆ ಮಾಸ್ ಮೂವಿ ಮೇಕರ್ಸ್ ಸಹಕರಿಸಲಿದೆ. ನಾನು ಮತ್ತು ಸಾಯಿ ರಾಜೇಶ್ ನಮ್ಮ ಸುಂದರ ಮತ್ತು ಪ್ರತಿಭಾವಂತ ಜೋಡಿ ವೈಷ್ಣವಿ ಚೈತನ್ಯ ಮತ್ತು ಆನಂದ್ ದೇವರಕೊಂಡ ಜೊತೆಗೆ ಸಿನಿಮಾ ನಿರ್ಮಿಸುತ್ತಿದ್ದೇವೆ. ಹೊಸ ನಿರ್ದೇಶಕ ರವಿ ನಂಬೂರಿ ಮತ್ತು ನಮ್ಮ ಚಿತ್ರಕ್ಕೆ ಆಶೀರ್ವಾದ ನೀಡಿ" ಎಂದು ಎಸ್‌ಕೆಎನ್ ಪೋಸ್ಟರ್ ಟ್ವೀಟ್ ಮಾಡಿದ್ದಾರೆ.

2020 ರ ಕಲರ್ ಫೋಟೋ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಪಡೆದ ಅಮೃತಾ ಪ್ರೊಡಕ್ಷನ್ಸ್ ಇದಕ್ಕೆ ಹಣ ಹೂಡಲಿದೆ. ಕಲರ್ ಫೋಟೋ ಸಿನಿಮಾಗೆ ಸಂದೀಪ್ ರಾಜ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಸುಹಾಸ್, ಚಾಂದಿನಿ ಚೌಧರಿ, ಸುನಿಲ್, ಹರ್ಷ ಚೆಮುಡು ಮತ್ತು ಅನೇಕ ಕಲಾವಿದರಿದ್ದರು. 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೆಲುಗಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.
ಬೇಬಿ ಸಿನಿಮಾ
ಬೇಬಿ 2023 ರ ಸೂಪರ್ ಹಿಟ್ ಸಿನಿಮಾ. ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಅಭಿನಯದ ಸಿನಿಮಾಗೆ ಸಾಯಿ ರಾಜೇಶ್ ನೀಲಂ ಅವರ ನಿರ್ದೇಶನವಿತ್ತು. ಚಿತ್ರದಲ್ಲಿ ನಾಗೇಂದ್ರ ಬಾಬು, ಹರ್ಷ ಚೆಮುಡು, ಪ್ರಭಾವತಿ ವರ್ಮಾ ಸೇರಿ ದೊಡ್ಡ ತಾರಾಗಣವಿತ್ತು. ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಮೂವರು ಕಲಾವಿದರ ಅಭಿನಯಕ್ಕೆ ಫ್ಯಾನ್ಸ್ ಪುಲ್ ಮಾರ್ಕ್ಸ್ ನೀಡಿದ್ದರು.
ಇನ್ನು, ಬೇಬಿ ನಂತರ ಆನಂದ್ ದೇವರಕೊಂಡ ಅವರು ಉದಯ್ ಶೆಟ್ಟಿ ಅವರ ಚುಕ್ಕಾಣಿ ಹಿಡಿದಿರುವ ಗಮ್ ಗಮ್ ಗಣೇಶ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಷ್ಣವಿ ಡಬಲ್ ಇಸ್ಮಾರ್ಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











