'ಪೆದ್ದಿ' ರಾಮ್‌ಚರಣ್ ಕಡೆ ನುಗ್ಗಿದ ವ್ಯಕ್ತಿಯನ್ನು ಎತ್ತಿ ಬಿಸಾಕಿದ ಬಾಡಿಗಾರ್ಡ್ ಕೆವಿನ್ ಕುಂಟಾ; ವಿಡಿಯೋ ವೈರಲ್
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೇಶದ ಮೂಲೆ ಮೂಲೆಗೆ ತೆರೆಳಿ ಚಿತ್ರತಂಡ ಪ್ರಚಾರ ಮಾಡ್ತಿದೆ. ಮೆಗಾಪವರ್ ಸ್ಟಾರ್ ಹೋದಲ್ಲಿ ಬಂದಲ್ಲಿ ಅವರ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಗಮನ ಸೆಳೆಯುತ್ತಿದ್ದಾರೆ.
ನಿನ್ನೆ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ 'ಪೆದ್ದಿ' ಸಿನಿಮಾ ಪ್ರೀ-ರಿಲೀಸ್ ಈವೆಂಟ್ ನಡೀತು. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ವೇದಿಕೆ ಮುಂಭಾಗದಲ್ಲಿ ರಾಮ್‌ಚರಣ್, ಜಾನ್ವಿ ಕಪೂರ್ ಕೂತಿದ್ದರು. ಈ ವೇಳೆ ಕೆಲ ಅಭಿಮಾನಿಗಳು ಅವರ ಬಳಿ ಹೋಗಿ ಕೈಕುಲುಕಿ, ಫೋಟೊ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಇದೇ ವೇಳೆ ರಾಮ್‌ಚರಣ್ ರೀತಿ ಹೋಲುವ ಅಭಿಮಾನಿಯೊಬ್ಬ ದಿಢೀರನೆ ನೆಚ್ಚಿನ ನಟನ ಕಡೆ ನುಗ್ಗಿದ್ದಾರೆ. ಪಕ್ಕದಲ್ಲಿ ಇದ್ದ ಜಾನ್ವಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ಅಭಿಮಾನಿಯ ಅನಿರೀಕ್ಷಿತ ನಡೆಗೆ ರಾಮ್‌ಚರಣ್ ಅಕ್ಕ ಪಕ್ಕ ಇದ್ದವರು ಒಂದು ಕ್ಷಣ ವಿಚಲಿತರಾಗಿದ್ದಾರೆ. ಕೂಡಲೇ ಆ ಅಭಿಮಾನಿಯನ್ನು ಹಿಡಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಡುವೆ ಬಂದ ಬಾಡಿಗಾರ್ಡ್ ಕೆವಿನ್ ಕುಂಟಾ ಏಕಾಏಕಿ ಆತನನ್ನು ಅನಾಯಾಸವಾಗಿ ಎತ್ತಿಕೊಂಡು ಪಕ್ಕಕ್ಕೆ ಹೋಗಿರುವುದನ್ನು ನೋಡಬಹುದು. ಬಳಿಕ ರಾಮ್‌ಚರಣ್ ಆ ಅಭಿಮಾನಿಗಳನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಆತ ಬಂದು ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾನೆ. ಸದ್ಯ ವೀಡಿಯೋ ವೈರಲ್ ಆಗ್ತಿದೆ.
ರಾಮ್‌ಚರಣ್ ಮೇಲೆ ಒಂದು ನೊಣ ಕೂರಲು ಬಾಡಿಗಾರ್ಡ್ ಕೆವಿನ್ ಕುಂಟಾ ಬಿಡ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಏನ್ ಗುರೂ ಕೆವಿನ್ ಹೈಟು, ಪರ್ಸನಾಲಿಟಿ.. ಏಕ್‌ದಮ್ ಆತನನ್ನು ಎತ್ತಿಕೊಂಡು ಹೋಗಿಬಿಟ್ನಲ್ಲ ಎಂದು ಮತ್ತೆ ಕೆಲವರು ರಿಪ್ಲೇ ಮಾಡ್ತಿದ್ದಾರೆ. ಇದೆಲ್ಲಾ ಸ್ಕ್ರಿಪ್ಟೆಡ್ ಅನ್ನಿಸ್ತಿದೆ ಎಂದು ವ್ಯಂಗ್ಯವಾಡುವವರು ಇದ್ದಾರೆ. ಆಫ್ರಿಕಾದ ಗಾಂಬಿಯಾ ಮೂಲದ ಕೆವಿನ್ ಫ್ಲಾರೆನ್ಸ್‌ನಲ್ಲಿ ನೆಲೆಸಿದ್ದಾರೆ. ಕಳೆದ 4 ವರ್ಷಗಳಿಂದ ರಾಮ್‌ಚರಣ್ ಕುಟುಂಬಕ್ಕೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
MMA ಫೈಟರ್ ಆಗಿರುವ ಕೆವಿನ್ ಸಾಕಷ್ಟು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಸೆಲೆಬ್ರೆಟಿಗಳಿಗೆ ಅಂಗರಕ್ಷಕನಾಗಿ ಕೂಡ ಗುರ್ತಿಸಿಕೊಂಡಿದ್ದಾರೆ. ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಬುಚ್ಚಿಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 90ರ ದಶಕದ ಹಳ್ಳಿಯೊಂದರ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. 'ಪೆದ್ದಿ'ಬಾಬು ಎಂಬ ಹಳ್ಳಿಹೈದನ ಕಥೆ ಚಿತ್ರದಲ್ಲಿದೆ. ಜಾನ್ವಿ ಕಪೂರ್ ನಾಯಕಿಯಾಗಿ ರಾಮ್‌ಚರಣ್‌ಗೆ ಸಾಥ್ ಕೊಟ್ಟಿದ್ದಾರೆ. ಆತನ ಗುರುವಿನ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದಾರೆ. ಜಗಪತಿ ಬಾಬು ಹಾಗೂ ದಿವ್ಯೇಂದು ಕೂಡ ತಾರಾಗಣದಲ್ಲಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ವೃದ್ಧಿ ಸಿನಿಮಾಸ್ ಸಂಸ್ಥೆ 'ಪೆದ್ದಿ' ಸಿನಿಮಾ ನಿರ್ಮಾಣ ಮಾಡಿದೆ. ಎ. ಆರ್ ರಹಮಾನ್ ಸಂಗೀತದಲ್ಲಿ ಚಿತ್ರದ ಹಾಡುಗಳು ಹಿಟ್ ಆಗಿದೆ. ಜೂನ್ 4ರಂದು ಗುರುವಾರ ಸಿನಿಮಾ ತೆರೆಗೆ ಬರಲಿದೆ. ಆದರೆ ಒಂದು ದಿನ ಮುನ್ನ ಬುಧವಾರ ಸಂಜೆಯೇ ಕೆಲವೆಡೆ ಪ್ರೀಮಿಯರ್ ಶೋಗಳು ನಿಗದಿಯಾಗಿದೆ. ಟಿಕೆಟ್ ದರ ಹೆಚ್ಚಿಸಲಾಗಿದೆ. ಆದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ.
ವಿಜಯವಾಡದಲ್ಲಿ ನಡೆದ ಈವೆಂಟ್‌ನಲ್ಲಿ ಅಭಿಮಾನಿಗಳ ಬಗ್ಗೆ ರಾಮ್‌ಚರಣ್ ಮಾತುಗಳು ವೈರಲ್ ಆಗ್ತಿದೆ. ಅಭಿಮಾನಿಗಳಿಗಾಗಿಯೇ ನಾನು ಇಷ್ಟು ಕಷ್ಟ ಪಡುತ್ತಿದ್ದೀನಿ. ನಿಮಗಾಗಿ ರಕ್ತ ಸುರಿಸೋಕು ಸಿದ್ಧ, ಸಾಯುವವರೆಗೂ ನಿಮ್ಮನ್ನು ರಂಜಿಸುತ್ತಲೇ ಇರ್ತೀನಿ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.


Click it and Unblock the Notifications