ಬಾಲಿವುಡ್‌ಗೆ ನನ್ನನ್ನು ನಿಭಾಯಿಸುವ ಅರ್ಹತೆ ಇಲ್ಲ: ಮತ್ತೆ ಟಾಂಗ್ ಕೊಟ್ಟ ಮಹೇಶ್ ಬಾಬು
ನಟ ಮಹೇಶ್ ಬಾಬುಗೆ ಬಾಲಿವುಡ್ ಮೇಲೆ ಅದೇನು ಸಿಟ್ಟೊ, ಒಂದರ ಹಿಂದೊಂದರಂತೆ ಮಾತಿನ ಈಟಿ ಚುಚ್ಚುತ್ತಲೇ ಇದ್ದಾರೆ. ಸಾಮಾನ್ಯವಾಗಿ ಮೌನವಾಗಿರುವ, ಯಾವುದೇ ವಿವಾದಕ್ಕೂ ಆಸ್ಪದ ನೀಡದ, ಆವೇಶ ಭರಿತವಾಗಿ ಮಾತನಾಡದ ಮಹೇಶ್ ಬಾಬು, ಬಾಲಿವುಡ್ ವಿಷಯದಲ್ಲಿ ಮಾತ್ರ ಖಡಕ್ ಪಂಚ್‌ಗಳನ್ನೇ ನೀಡುತ್ತಿದ್ದಾರೆ.
''ನನಗೆ ಹಿಂದಿ ಸಿನಿಮಾಗಳನ್ನು ಮಾಡುವ ಅವಶ್ಯಕತೆ ಇಲ್ಲ. ನಾನು ತೆಲುಗು ಸಿನಿಮಾ ಮಾಡುತ್ತೇನೆ. ಅದನ್ನೇ ವಿಶ್ವದ ಸಿನಿಮಾ ಪ್ರೇಕ್ಷಕರು ನೋಡುತ್ತಾರೆ'' ಎಂದು ನೇರವಾಗಿ ಬಾಲಿವುಡ್ ಅನ್ನು ತಿರಸ್ಕರಿಸಿದ್ದ ಮಹೇಶ್ ಬಾಬು ಈಗ ಮತ್ತೊಮ್ಮೆ ಬಾಲಿವುಡ್ ಅನ್ನು ತಮ್ಮದೇ ರೀತಿಯಲ್ಲಿ ವ್ಯಂಗ್ಯ ಮಾಡಿದ್ದಾರೆ.
ಹಿಂದಿ ಸಿನಿಮಾಗಳಲ್ಲಿ ಏಕೆ ನಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಹೇಶ್ ಬಾಬು, ''ನನಗೆ ಸಾಕಷ್ಟು ಹಿಂದಿ ಸಿನಿಮಾಗಳ ಆಫರ್‌ಗಳು ಬರುತ್ತವೆ, ಬಂದಿವೆ, ಆದರೆ ನನಗೆ ಬಾಲಿವುಡ್‌ನಲ್ಲಿ ನಟಿಸಲು ಇಷ್ಟವಿಲ್ಲ. ಬಾಲಿವುಡ್‌ಗೆ ನನ್ನನ್ನು ನಿಭಾಯಿಸುವಷ್ಟು ಅರ್ಹತೆ ಇಲ್ಲ. ಹಾಗಾಗಿ ಅಲ್ಲಿ ಹೋಗಿ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ನನಗೆ ತೆಲುಗು ಸಿನಿಮಾಗಳೇ ಇಷ್ಟ, ನನಗೆ ಅರ್ಥವಾಗುವುದು ತೆಲುಗು ಭಾವನೆಗಳು, ನನ್ನ ಭಾವನೆಗಳು ತೆಲುಗು ಜನರಿಗೆ ಚೆನ್ನಾಗಿ ಅರ್ಥವಾಗುತ್ತವೆ. ನನಗೆ ಇಲ್ಲಿರಲು ಇಷ್ಟ'' ಎಂದಿದ್ದಾರೆ.

ನನಗೆ ಸ್ಟಾರ್‌ಗಿರಿ, ಪ್ರೀತಿ ಕೊಟ್ಟಿರುವುದು ತೆಲುಗು ಜನ: ಮಹೇಶ್
''ನನಗೆ ಸ್ಟಾರ್‌ಗಿರಿ, ಪ್ರೀತಿ ಕೊಟ್ಟಿರುವುದು ತೆಲುಗು ಜನ ಹಾಗಾಗಿ ನನಗೆ ತೆಲುಗು ಸಿನಿಮಾಗಳಲ್ಲಿಯೇ ನಟಿಸುವುದು ಇಷ್ಟ. ಬೇರೆ ಚಿತ್ರರಂಗಕ್ಕೆ ಹೋಗಬೇಕು ಎಂದು ನನಗೆ ಎಂದೂ ಅನ್ನಿಸಿಲ್ಲ. ತೆಲುಗು ಚಿತ್ರರಂಗದಲ್ಲಿ ಮಾಡಿದ ಸಿನಿಮಾಗಳು ವಿಶ್ವಮಟ್ಟದಲ್ಲಿ ಮಿನುಗಬೇಕು ಎಂದು ಸದಾ ಅಂದುಕೊಳ್ಳುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿದೆ. ನನಗೆ ಬಹಳ ಖುಷಿಯಾಗಿದೆ'' ಎಂದಿದ್ದಾರೆ ಮಹೇಶ್ ಬಾಬು.

ಬಾಲಿವುಡ್, ತೆಲುಗು ಚಿತ್ರರಂಗಕ್ಕಿಂತ ದೊಡ್ಡದಲ್ಲ ಎಂದಿದ್ದ ಮಹೇಶ್
''ನನ್ನ ಸೇವೆ, ಪರಿಶ್ರಮ ಏನೇ ಇದ್ದರು ಅದು ಕೇವಲ ತೆಲುಗು ಸಿನಿಮಾಗಳಿಗೆ ಮಾತ್ರವೇ ಆಗಿರುತ್ತದೆ'' ಎಂದು ಕೆಲ ವರ್ಷಗಳ ಹಿಂದೆ ಮಹೇಶ್ ಬಾಬು ಹೇಳಿದ್ದರು. ಬಾಲಿವುಡ್ ಎಂಬುದು ತೆಲುಗು ಚಿತ್ರರಂಗಕ್ಕಿಂತಲೂ ದೊಡ್ಡದೇನಲ್ಲ, ಬಾಲಿವುಡ್‌ಗೆ ಹೋಗಿ ಸಿನಿಮಾ ಮಾಡುವುದು ಸಾಧನೆಯೂ ಅಲ್ಲ ಎಂಬ ಉದ್ದೇಶದಿಂದ ಮಹೇಶ್ ಬಾಬು, ತಾವು ಹಿಂದಿ ಸಿನಿಮಾ ಮಾಡುವುದಿಲ್ಲ, ಬದಲಿಗೆ ತೆಲುಗು ಸಿನಿಮಾಗಳನ್ನಷ್ಟೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಮಹೇಶ್ ಬಾಬು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಹ ತಮ್ಮ ಪರಿಚಯವನ್ನು 'ಭಾರತೀಯ ತೆಲುಗು ಸಿನಿಮಾ ನಟ' ಎಂದು ಬರೆದುಕೊಂಡಿದ್ದಾರೆ.

ಮಹೇಶ್ ಬಗ್ಗೆ ಋಣಾತ್ಮಕವಾಗಿ ವರದಿ ಮಾಡಿದ್ದ ಹಿಂದಿ ಮಾಧ್ಯಮ
ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮಹೇಶ್ ಬಾಬುವನ್ನು ಮುತ್ತಿಕೊಂಡಿದ್ದ ಮಾಧ್ಯಮಗಳು, ಸಲ್ಮಾನ್ ಖಾನ್‌ರು ತೆಲುಗಿನ ಯಾವ ಸಿನಿಮಾ ರೀಮೇಕ್ ಮಾಡಬೇಕು ಎಂಬುದು ನಿಮ್ಮ ಆಸೆ ಎಂದು ಪ್ರಶ್ನಿಸಿದ್ದರು, ಅದಕ್ಕೆ ನಗುತ್ತಾ ಉತ್ತರಿಸಿದ್ದ ಮಹೇಶ್, ಅವರು ಈಗಾಗಲೇ ಹಲವು ತೆಲುಗು ಸಿನಿಮಾಗಳ ರೀಮೇಕ್‌ನಲ್ಲಿ ನಟಿಸಿದ್ದಾರೆ. ನನ್ನ 'ಪೋಕಿರಿ' ಸಿನಿಮಾವನ್ನೂ ರೀಮೇಕ್ ಮಾಡಿದ್ದಾರೆ ಎಂದಿದ್ದರು. ಹಾಗಿದ್ದರೆ ನೀವು ಸಲ್ಮಾನ್‌ರ ಯಾವ ಸಿನಿಮಾ ರೀಮೇಕ್ ಮಾಡುತ್ತೀರಿ? ಎಂಬ ಪ್ರಶ್ನೆಗೆ, ನಾನು ರೀಮೇಕ್ ಸಿನಿಮಾದಲ್ಲಿ ಇಲ್ಲಿಯವರೆಗೆ ನಟಿಸಿಲ್ಲ, ಮುಂದೆ ನಟಿಸುವುದೂ ಇಲ್ಲ'' ಎಂದು ಖಡಕ್ ಆಗಿ ಉತ್ತರಿಸಿದ್ದರು. ಆಗ ಹಲವು ಬಾಲಿವುಡ್ ಮಾಧ್ಯಮಗಳು ಮಹೇಶ್‌ಗೆ ಅಹಂಕಾರ ಎಂಬರ್ಥ ಬರುವ ರೀತಿಯ ಸುದ್ದಿಗಳನ್ನು ಪ್ರಕಟಿಸಿದ್ದವು.

'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆ
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾದ ಟ್ರೇಲರ್ ಈಗಾಗಲೇ ವೈರಲ್ ಆಗಿದೆ. 'ಸರ್ಕಾರು ವಾರಿ ಪಾಟ' ಸಿನಿಮಾದ ಬಳಿಕ ತ್ರಿವಿಕ್ರಮ್ ಜೊತೆಗೆ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಅದರ ಬಳಿಕ ನಿರ್ದೇಶಕ ರಾಜಮೌಳಿ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ.


Click it and Unblock the Notifications











