ಲುಲು ಮಾಲ್‌ನಲ್ಲಿ ಸಿನಿಮಾ ಶೋ ಕ್ಯಾನ್ಸಲ್; ₹10,000 ರೂ. ಪರಿಹಾರ ನೀಡಲು ಬುಕ್‌ಮೈಶೋಗೆ ಆದೇಶ
ಪ್ರೇಕ್ಷಕನಿಗೆ ಮಾಹಿತಿ ನೀಡದೇ ಸಿನಿಮಾ ಶೋ ಕ್ಯಾನ್ಸಲ್ ಮಾಡಿದ್ದಕ್ಕೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋಗೆ ಭಾರೀ ದಂಡ ಬಿದ್ದಿದೆ. ಹೈದರಾಬಾದ್ ಕುಕ್ಕಟ್‌ಪಲ್ಲಿ ನಿವಾಸಿ ನಾರಾಯಣನ್ ಕುಟ್ಟಿಗೋಪಾಲಕೃಷ್ಣನ್ ಎಂಬುವವರು ಬುಕ್‌ಮೈ ಶೋ ವಿರುದ್ಧ ದೂರು ದಾಖಲಿಸಿದ್ದರು. ಅವರಿಗೆ 10 ಸಾವಿರ ಪರಿಹಾರ ನೀಡುವಂತೆ ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗ-I ಆದೇಶಿಸಿದೆ. ಜೊತೆಗೆ ಮೊಕದ್ದಮೆ ವೆಚ್ಚವಾಗಿ 2 ಸಾವಿರ ಪಾವತಿಸಲು ಸೂಚಿಸಲಾಗಿದೆ.
ಜನವರಿ 1, 2025 ರಂದು ಹೈದರಾಬಾದ್‌ನಲ್ಲಿರುವ ಲುಲು ಮಾಲ್ ಸಿನೆಪೊಲಿಸ್ ಮಲ್ಟಿಪ್ಲೆಕ್ಸ್‌ನಲ್ಲಿ ಮಲಯಾಳಂ ಸಿನಿಮಾ 'ಬರೋಜ್' ಪ್ರದರ್ಶನವಾಗಿತ್ತು. ನಾರಾಯಣನ್ ಬುಕ್‌ಮೈಶೋನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಬೆಳಗ್ಗೆ 10.50ರ ಶೋಗೆ ಅವರು ತೆರೆಳಿಸಿದ್ದರು. ಆದರೆ ಅಷ್ಟೊತ್ತಿಗೆ 'ಬರೋಜ್' ಸಿನಿಮಾ ಶೋ ರದ್ದು ಮಾಡಿ ಬೇರೆ ಸಿನಿಮಾ ಪ್ರದರ್ಶನ ಮಾಡಿದ್ದರು. ತಮಗೆ ಯಾವುದೇ ಮಾಹಿತಿ ನೀಡದೇ ಶೋ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ನನ್ನ ಸಮಯ ವ್ಯರ್ಥವಾಯಿತು. ಹೊಸ ವರ್ಷದ ದಿನ ಬೇರೆ ಪ್ಲ್ಯಾನ್ ಮಾಡಿದ್ದೆ. ಅದೆಲ್ಲವೂ ಇದರಿಂದ ಹಾಳಾಗಿತ್ತು ಎಂದು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ವೇಳೆ ಬುಕ್‌ಮೈಶೋ ಸಂಸ್ಥೆ ಬೇರೆಯದ್ದೇ ವಾದವನ್ನು ಮುಂದಿಟ್ಟಿತ್ತು. ಗ್ರಾಹಕರು ಮತ್ತು ಥಿಯೇಟರ್ ನಿರ್ವಾಹಕರ ನಡುವೆ ಬುಕ್‌ಮೈಶೋ ಕೇವಲ ಮಧ್ಯವರ್ತಿಯಾಗಿ ಮಾತ್ರ ಕೆಲಸ ನಿರ್ವಹಿಸುತ್ತದೆ. ಸಿನಿಮಾ ಶೋ, ಶೋ ಸಮಯ, ಶೋ ಕ್ಯಾನ್ಸಲ್ ಹಾಗೂ ಟೈಂ ಟೇಬಲ್ ಬದಲಾವಣೆಗಳಿಗೆ ಸಂಬಂಧಿಸಿದ ನಿರ್ಧಾರಗಳು ಸಂಪೂರ್ಣವಾಗಿ ಥಿಯೇಟರ್ ನಿರ್ವಾಹಕರ ವ್ಯಾಪ್ತಿಗೆ ಬರುತ್ತದೆ. ಅಷ್ಟೆ ಅಲ್ಲದೇ ಶೋ ಕ್ಯಾನ್ಸರ್ ಆಗಿದ್ದ ಮರುದಿನವೇ ದೂರುದಾರರ ಟಿಕೆಟ್ ಹಣವನ್ನು ಮರುಪಾವತಿ ಕೂಡ ಮಾಡಿದ್ದೇವೆ, ಇದರಲ್ಲಿ ನಮ್ಮ ತಪ್ಪೇನು ಇಲ್ಲ ಎಂದು ವಾದಿಸಿದ್ದರು.
ಬುಕ್‌ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ ಅಂದಮೇಲೆ ಶೋ ಕ್ಯಾನ್ಸಲ್ ಆದಾಗ ಮಾಹಿತಿ ನೀಡುವುದು ಅವರ ಜವಾಬ್ದಾರಿ. ಹೀಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದು ಆಯೋಗ ಮನಗಂಡಿದೆ. ಆನ್‌ಲೈನ್‌ನಲ್ಲಿ ಈಗ ಮಾಹಿತಿ ನೀಡುವುದು ಬಹಳ ಸುಲಭ. ಜನ ಕೂಡ ಅದನ್ನು ಗಮನಿಸುತ್ತಿರುತ್ತಾರೆ. ಒಟ್ಟಾರೆ ಗ್ರಾಹಕರ ಸಮಯ ವ್ಯರ್ಥ ಮಾಡಿದ್ದಾರೆ. ಇದರಿಂದ ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹಾಗಾಗಿ ಟಿಕೆಟ್ ಹಣ ಮರುಪಾವತಿ ಮಾಡಿದ್ರೆ ಸಾಕಾಗಲ್ಲ. ತಪ್ಪಿಗೆ ಪರಿಹಾರವಾಗಿ ಬುಕ್‌ಮೈಶೋ 10 ಸಾವಿರ ಪರಿಹಾರ ನೀಡಬೇಕು ಎಂದು ಆಯೋಗ ಆದೇಶಿಸಿದೆ.
ಬುಕ್‌ಮೈಶೋ ವಿರುದ್ಧ ಸಾಮಾನ್ಯ ವ್ಯಕ್ತಿಗೆ ಸಿಕ್ಕಿದ ದೊಡ್ಡ ಗೆಲುವು ಇದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದ್ಲೆ ಟಿಕೆಟ್ ದರ ಹೆಚ್ಚು, ಪಾಪ್‌ಕಾರ್ನ್ ಸೇರಿದಂತೆ, ಇನ್ನಿತರೆ ಸ್ನ್ಯಾಕ್ಸ್ ದರ ಕೂಡ ಜಾಸ್ತಿಯಿದೆ. ಇದೆಲ್ಲದರ ನಡುವೆ ಬುಕ್‌ಮೈಶೋನಲ್ಲಿ ಟಿಕೆಟ್ ಬುಕ್ ಮಾಡಲು ಕೂಡ 30-40 ರೂ. ಹೆಚ್ಚು ಹಣ ನೀಡಬೇಕು. ಆದರೂ ಹೀಗೆ ಶೋ ಕ್ಯಾನ್ಸಲ್ ಎಂದು ಥಿಯೇಟರ್‌ಗೆ ಹೋದ ಬಳಿಕ ಹೇಳುವುದು ಎಷ್ಟು ಸರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹೀಗೆ ಸಮಸ್ಯೆಯಾದಾಗ ಸಾಕಷ್ಟು ಜನ ಪ್ರತಿಕ್ರಿಯಿಸದೇ ಸುಮ್ಮನಾಗುತ್ತಾರೆ. ಬಡವನ ಕೋಪ ದವಡೆಗೆ ಮೂಲ ಎಂದುಕೊಳ್ಳುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಹೋರಾಟ ಮಾಡಿದ್ರೆ, ನ್ಯಾಯ ನಮ್ಮ ಕಡೆ ಇದ್ದರೆ ಗೆಲುವು ಕಟ್ಟಿಟ್ಟಬುತ್ತಿ ಎನ್ನುವುದು ಸಾಬೀತಾಗಿದೆ. ಇನ್ನು ಮುಂದೆ ಥಿಯೇಟರ್ ನಿರ್ವಾಹಕರು ಅಥವಾ ಬುಕ್‌ಮೈ ಶೋ ಕಡೆಯಿಂದ ಇಂತಹ ತಪ್ಪು ಮರುಕಳಿಸಬಾರದು ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications