Boys Hostel: ಹಾಸ್ಟೆಲ್ ಹುಡುಗ್ರು 2 ದಿನಕ್ಕೆ ತೆಲುಗಿನಲ್ಲಿ ಗಳಿಸಿದ್ದೆಷ್ಟು? ವಿತರಕರಿಂದಲೇ ಸಿಕ್ತು ಅಧಿಕೃತ ಮಾಹಿತಿ
ಕನ್ನಡದಲ್ಲಿ ಸಕ್ಸಸ್ ಕಂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಅನ್ನಪೂರ್ಣ ಸ್ಟುಡಿಯೋಸ್ ಹಾಗೂ ಚಾಯ್ ಬಿಸ್ಕತ್ ಸಂಸ್ಥೆಗಳು ಜಂಟಿಯಾಗಿ ತೆಲುಗು ವರ್ಷನ್‌ನ ವಿಶ್ವದಾದ್ಯಂತ ರಿಲೀಸ್ ಮಾಡಿದ್ದಾರೆ. ಸಿನಿಮಾ ನೋಡಿ ತೆಲುಗು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ನಾಗಚೈತನ್ಯ ಸಿನಿಮಾ ನೋಡಿ ಕೊಂಡಾಡಿದ್ದಾರೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಕಾಮೆಡಿ ಎಂಟರ್‌ಟೈನರ್ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಬ್ಯಾನರ್‌ನಲ್ಲಿ ಪ್ರಜ್ವಲ್, ವರುಣ್, ನಿತಿನ್ ಕೃಷ್ಣಮೂರ್ತಿ ಹಾಗೂ ಅರವಿಂದ್ ಕಶ್ಯಪ್ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಪರಂವಃ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ಚಿತ್ರವನ್ನು ಅರ್ಪಿಸಿದ್ದರು.

ಕನ್ನಡದಲ್ಲಿ ಸಿನಿಮಾ ಅಂದಾಜು 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಡೈಲಾಗ್‌ಗಳು ಬಹಳ ಸ್ಪೀಡ್ ಇದ್ದ ಕಾರಣ ಬೇರೆ ಭಾಷೆಗೆ ಡಬ್ ಮಾಡೋದು ಕಷ್ಟ ಎಂದುಕೊಳ್ಳಲಾಗಿತ್ತು. ಆದರೆ ಬಹಳ ಸೊಗಸಾಗಿ ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಇನ್ನು ರಮ್ಯಾ, ದಿಗಂತ್ ಬದಲಿಗೆ ಬೇರೆ ಕಲಾವಿದರನ್ನು ತೆಲುಗಿನಲ್ಲಿ ಬಳಸಿಕೊಳ್ಳಲಾಗಿದೆ. ರಮ್ಯಾ ಬದಲು ರಶ್ಮಿ ಗೌತಮ್, ದಿಗಂತ್ ಬದಲು ತರುಣ್ ಭಾಸ್ಕರ್ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕೂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡದ ಜೊತೆ ನಿಂತಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇನ್ನುಳಿದಂತೆ ಪ್ರಜ್ವಲ್, ಮಂಜುನಾಥ್ ನಾಯಕ್, ಚೇತನ್ ದುರ್ಗ ಚಿತ್ರದ ತಾರಾಗಣದಲ್ಲಿದ್ದಾರೆ. ನಿರ್ದೇಶಕ ನಿತಿನ್ ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರದ ಬದಲು ಶನಿವಾರ(ಆಗಸ್ಟ್ 26) 'ಬಾಯ್ಸ್ ಹಾಸ್ಟೆಲ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ಎರಡು ದಿನದ ಕಲೆಕ್ಷನ್ ಎಷ್ಟು ಅನ್ನುವುದನ್ನು ಅಧಿಕೃತವಾಗಿ ಸಿನಿಮಾ ವಿತರಣೆ ಮಾಡಿರುವ ಅನ್ನಪೂರ್ಣ ಸ್ಟುಡಿಯೋಸ್ ಸಂಸ್ಥೆ ಘೋಷಣೆ ಮಾಡಿದೆ. 'ಸ್ಟೂಡೆಂಟ್ ಫಿಲ್ಮ್ ಆಫ್ ದ ಇಯರ್' ಎಂದಿರುವ ಸಂಸ್ಥೆ ಮೊದಲ 2 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 1.25 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಿದೆ.
ತಮ್ಮದೇ ಬ್ಯಾನರ್‌ನಲ್ಲಿ 'ಬಾಯ್ಸ್ ಹಾಸ್ಟೆಲ್' ಸಿನಿಮಾ ರಿಲೀಸ್ ಮಾಡಿದ್ದ ನಟ ನಾಗಚೈತನ್ಯ ಕೂಡ ಸಿನಿಮಾ ನೋಡಿದ್ದರು. "ಬಾಯ್ಸ್ ಹಾಸ್ಟೆಲ್ ಸಿನಿಮಾ ನೋಡಿದೆ. ಬಹಳ ಖುಷಿಯಾಯಿತು. ಬಹಳ ದಿನಗಳ ನಂತರ ಒಂದು ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್. ಥಿಯೇಟರ್‌ನಲ್ಲಿ ಎಲ್ಲರೂ ಕಾಮಿಡಿ ಸನ್ನಿವೇಶಗಳನ್ನು ನೋಡಿ ನಗುತ್ತಿದ್ದರು. ಅದನ್ನು ನೋಡಿ ಖುಷಿಯಾಯಿತು. ಯೂತ್ಸ್‌ಗೆ ಬಹಳ ಇಷ್ಟವಾಗುತ್ತೆ. 10 ಜನ ಸ್ನೇಹಿತರು ಸಿನಿಮಾ ನೋಡಲು ಬಂದರೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಒಬ್ಬ ಪ್ರೇಕ್ಷಕನಾಗಿ, ನಟನಾಗಿ ನಾನು ಸಿನಿಮಾ ಬಹಳ ಎಂಜಾಯ್ ಮಾಡ್ದೆ" ಎಂದಿದ್ದರು.
ಹೊಸಬರ ಕನ್ನಡ ಸಿನಿಮಾವೊಂದು ತೆಲುಗಿಗೆ ಡಬ್ ಆಗಿ 2 ದಿನಕ್ಕೆ 1.25 ಕೋಟಿ ರೂ. ಗಳಿಕೆ ಮಾಡಿರುವುದನ್ನು ಮೆಚ್ಚಲೇಬೇಕು. ನಿಧಾನವಾಗಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ರಾಧಕೃಷ್ಣ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ಓವರ್‌ಸೀಸ್‌ನಲ್ಲಿ ದೊಡ್ಡಮಟ್ಟದಲ್ಲಿ 'ಬಾಯ್ಸ್ ಹಾಸ್ಟೆಲ್' ಸಿನಿಮಾವನ್ನು ರಿಲೀಸ್ ಮಾಡಿದೆ. ಇನ್ನು ಸಿನಿಮಾ ಸೀಕ್ವೆಲ್ ಅಥವಾ ಪ್ರೀಕ್ವೆಲ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಸ್ಟೆಲ್‌ನ ಜ್ಯೂನಿಯರ್ ಕ್ವಾಟ್ಲೆ ಈ ರೇಂಜಿಗಿದ್ದರೆ ಸೀನಿಯರ್ಸ್ ಕಥೆ ತೆರೆಗೆ ತಂದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದರು. ಮುಂದಿನ ದಿನಗಳಲ್ಲಿ ಸಿನಿಮಾ ಬಂದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











