Boys Hostel Twitter Review: 'ಬಾಯ್ಸ್ ಹಾಸ್ಟೆಲ್' ಸಖತ್ ಮಜಾ ಕೊಡುತ್ತೆ.. ಆದರೆ
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಿಂಗಳ ಹಿಂದೆ ಕರ್ನಾಟಕದಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ತೆಲುಗಿಗೆ ಡಬ್ ಆಗಿ ಈ ವೀಕೆಂಡ್ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ತೆರಗಪ್ಪಳಿಸಿದೆ. ಕನ್ನಡ ಸಿನಿರಸಿಕರನ್ನು ರಂಜಿಸಿದಂತೆಯೇ ತೆಲುಗು ಪ್ರೇಕ್ಷಕರಿಗೂ ಸಿನಿಮಾ ಸಖತ್ ಮನರಂಜನೆ ಕೊಡುತ್ತಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಾಡುತ್ತಿದ್ದಾರೆ.
ಬಹುತೇಕ ಹೊಸ ಕಲಾವಿದರು ನಟಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರ ಬೆಂಬಲ ಸಿಕ್ಕಿತ್ತು. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಕ್ಸಸ್ ಕಂಡಿದ್ದಾರೆ. ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹೊಸಬರ ಸಿನಿಮಾ ಕನ್ನಡದಲ್ಲಿ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರಮ್ಯಾ, ರಿಷಬ್ ಶೆಟ್ಟಿ, ದಿಗಂತ್, ಪವನ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.

ರಕ್ಷಿತ್ ಶೆಟ್ಟಿ ಸಿನಿಮಾ ಮೆಚ್ಚಿ ಅರ್ಪಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಹೈಲೆಟ್ ಎನಿಸಿಕೊಂಡಿತ್ತು. ಡಬ್ ಮಾಡೋದೇ ಕಷ್ಟ ಎಂದುಕೊಂಡಿದ್ದ ಚಿತ್ರವನ್ನು 2 ವಾರದಲ್ಲಿ ತೆಲುಗಿಗೆ ಡಬ್ ಮಾಡಲಾಗಿದೆ. 'ಬಾಯ್ಸ್ ಹಾಸ್ಟೆಲ್' ಟೈಟಲ್‌ನಲ್ಲಿ ಚಾಯ್ ಬಿಸ್ಕಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ರಿಲೀಸ್ ಮಾಡಿದೆ. ಆಗಸ್ಟ್ 26ರಂದು ಹಾಸ್ಟೆಲ್ ಹುಡುಗರ ಹಾವಳಿ ಶುರುವಾಗಿದ್ದು ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದಷ್ಟು ಬೇಗ ನೋಡಿ
"ಮೊದಲಾರ್ಧ ಒಳ್ಳೆ ಮನರಂಜನೆ ಮತ್ತು ದ್ವಿತಿಯಾರ್ಧ ಪರವಾಗಿಲ್ಲ. ದ್ವಿತಿಯಾರ್ಧದ ನಡುವೆ ಕೊಂಚ ಲ್ಯಾಗ್, ಪುನರಾವರ್ತನೆ ಸನ್ನಿವೇಶಗಳು. ಆದರೂ ಒಳ್ಳೆ ಮೊಮೆಂಟ್ಸ್ ಚಿತ್ರದಲ್ಲಿದೆ. ಟ್ರೈಲರ್ ಸಹ ನೋಡದೇ ಸಿನಿಮಾ ನೋಡಲು ಹೋಗಿದ್ದೆ. ಸಖತ್ ಕ್ವಾಟ್ಲೆ ಮತ್ತು ಕ್ರೇಜಿಯಾಗಿದೆ. ಆದಷ್ಟು ಬೇಗ ಸಿನಿಮಾ ನೋಡಿ. ಸಾಧ್ಯವಾದರೆ ನನ್ನ ರೀತಿ ಸಿನಿಮಾ ಬಗ್ಗೆ ಏನು ತಿಳಿದುಕೊಳ್ಳದೇ ಹೋಗಿ ಸಿನಿಮಾ ನೋಡಿ" ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ದ್ವಿತಿಯಾರ್ಧ ಕೊಂಚ ಲ್ಯಾಗ್
'ಬಾಯ್ಸ್ ಹಾಸ್ಟೆಲ್' ದ್ವಿತಿಯಾರ್ಧ ಕೊಂಚ ಲ್ಯಾಗ್ ಅನ್ನೋದು ಬಿಟ್ಟರೆ ಹಿಲೇರಿಯಸ್ ರೋಲರ್ ಕೋಸ್ಟರ್ ರೈಡ್. ಮಾಮೂಲಿ ಸಿನಿಮಾ ಅನ್ನಿಸಲ್ಲ, ಬಟ್ ಸಖತ್ ಮಜವಾಗಿದೆ. ತುಂಬಾ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ಇಡೀ ಕಲಾವಿದರ ತಂಡ ಅದ್ಭುತ. ನ್ಯೂ ಏಜ್ ಮೂವಿ ಮೇಕಿಂಗ್ ಸ್ಟೈಲ್" ಎಂದು ವರುಣ್ ಎಂಬುವವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕನ್ನಡದಲ್ಲಿ ನೋಡಬೇಕಿತ್ತು
'ಬಾಯ್ಸ್ ಹಾಸ್ಟೆಲ್' ಬಹಳ ಒಳ್ಳೆಯ ಸಿನಿಮಾ. ಆದರೆ ಕೆಲವೊಮ್ಮೆ ನಿಮ್ಮ ತಾಳ್ಮೆ ಪರೀಕ್ಷೆ ಮಾಡುತ್ತದೆ. ಕನ್ನಡದಲ್ಲಿ ನೋಡಿದ್ದರೆ ಇನ್ನು ಚೆನ್ನಾಗಿತ್ತು ಎನಿಸುತ್ತದೆ. ನಿತಿನ್ ಕೃಷ್ಣಮೂರ್ತಿ ಮತ್ತವರ ತಂಡ ಅದ್ಭುತ" ಎಂದ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಯೂತ್ಸ್‌ಗೆ ಇಷ್ಟವಾಗುತ್ತೆ
ಕಲ್ಯಾಣ್ ಕೃಷ್ಣ ಎಂಬುವವರು ಟ್ವೀಟ್ ಮಾಡಿ "ಹಾಸ್ಟೆಲ್ ಬಾಯ್ಸ್, ಸೂಪರ್ ಫನ್ ಸಿನಿಮಾ. ಮೊದಲಾರ್ಧ ಚೆನ್ನಾಗಿದೆ. ದ್ವಿತಿಯಾರ್ಧ ಪರವಾಗಿಲ್ಲ. ಟೆಕ್ನಿಕಲಿ ಸಿನಿಮಾ ಬಹಳ ಇಷ್ಟವಾಯಿತು. ಕ್ಯಾಮರಾ ಟೆಕ್ನಿಕ್, ಎಡಿಟಿಂಗ್, ಸಂಗೀತ ಮತ್ತು ಓಪನಿಂಗ್ ಟೈಟಲ್ಸ್ ನನಗೆ ಬಹಳ ಚೆಂದ ಎನಿಸಿತು. ಯೂತ್ಸ್‌ಗೆ ಇಷ್ಟವಾಗುತ್ತೆ. ಪರ್ಫೆಕ್ಟ್ ಟೈಮ್‌ಪಾಸ್" ಎಂದು ಬರೆದುಕೊಂಡಿದ್ದಾರೆ.
ಎಡಿಟಿಂಗ್ ಅದ್ಭುತ
"ಆರಂಭದಿಂದ ಕೊನೆವರೆಗೂ ಬಾಯ್ಸ್ ಹಾಸ್ಟೆಲ್ ಸಖತ್ ನಗಿಸುತ್ತದೆ. ಎಡಿಟಿಂಗ್ ಮಾಡಿರುವ ರೀತಿ ಅದ್ಭುತವಾಗಿದೆ. ಸ್ಕ್ರೀನ್‌ಪ್ಲೇ, ಕಲಾವಿದರ ಅಭಿನಯವೂ ಚೆನ್ನಾಗಿದೆ. ವಾರ್ಡನ್ ಪಾತ್ರ ಮಾಡಿರುವ ನಟ ಅಂತೂ ಅದ್ಭುತ. ಪಾರ್ವತೀಶಂ ಡಬ್ಬಿಂಗ್ ಸಖತ್ ಮಜವಾಗಿದೆ. ಚಾಯ್ ಬಿಸ್ಕಟ್, ಅನ್ನಪೂರ್ಣ ಸ್ಟುಡಿಯೋಗೆ ಧನ್ಯವಾದ. ಎಲ್ಲರೂ ಸಿನಿಮಾ ನೋಡಿ" ಎಂದು ಸನ್ನಿ ಎಂಬುವವರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











