ಮೆಗಾ ಟ್ವಿಸ್ಟ್; ಅಲ್ಲು ಅರ್ಜುನ್‌ಗೆ ರಾಮ್‌ಚರಣ್ ತೇಜಾ ಸವಾಲ್?
ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ಇತ್ತೀಚೆಗೆ ಜನಸೇನಾ ಎದುರಾಳಿ ಪಕ್ಷದ ಅಭ್ಯರ್ಥಿ ಪರ ಅಲ್ಲು ಅರ್ಜುನ್ ಪ್ರಚಾರಕ್ಕೆ ಹೋಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೆಗಾ ಫ್ಯಾನ್ಸ್ ವರ್ಸಸ್ ಅಲ್ಲು ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ತಾರಕಕ್ಕೇರಿದೆ.
ಪವನ್ ಸೋದರಳಿಯ ಸಾಯಿ ಧರಮ್ ತೇಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಹಾಗೂ ಆತನ ಪತ್ನಿ ಸ್ನೇಹಾ ರೆಡ್ಡಿಯನ್ನು ಅನ್‌ಫಾಲೋ ಮಾಡಿದ್ದರು. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. 'ಪುಷ್ಪ'-2 ಚಿತ್ರಕ್ಕೆ ಟಕ್ಕರ್ ಕೊಡುತ್ತೇವೆ ಎಂದು ಮೆಗಾ ಫ್ಯಾನ್ಸ್, ಅದೇನು ಮಾಡ್ತಿರೋ ಮಾಡಿ ನಾವು ನೋಡ್ತಿವಿ ಎಂದು ಅಲ್ಲು ಅರ್ಜುನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಎಟು, ಎದಿರೇಟು ಮುಂದುವರೆಸಿದ್ದಾರೆ.

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಬೇಕಿದೆ. ಆದರೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಸೀಕ್ವೆಲ್ ಕುತೂಹಲ ಮೂಡಿಸಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ 2 ಹಾಡುಗಳು ಬಿಡುಗಡೆ ಆಗಿ ಹಿಟ್ ಆಗಿದೆ. ಸದ್ಯ ಸಿನಿಮಾ ರಿಲೀಸ್ ಬಗ್ಗೆ ಅಲ್ಲು ಅರ್ಜುನ್ ಆಪ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಶರತ್ ಚಂದ್ರ ನಾಯ್ಡು ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಆತ್ಮೀಯ ಒಡನಾಟ ಹೊಂದಿದ್ದಾರೆ. 'ಪುಷ್ಪ'-2 ರಿಲೀಸ್ ಪೋಸ್ಟ್‌ಪೋನ್ ಬಗ್ಗೆ ನೆಟ್ಟಿರೊಬ್ಬರ ಪ್ರಶ್ನೆಗೆ ಶರತ್ ರಿಪ್ಲೇ ಮಾಡಿದ್ದಾರೆ. ಅದನ್ನು ನೋಡಿ ಆಗಸ್ಟ್ 15ಕ್ಕೆ ಸಿನಿಮಾ ಬರಲ್ಲ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ.

ಮತ್ತೊಂದು ಕಡೆ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ತಮಿಳು ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಕೈರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದು ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ. ಇದೀಗ 'ಪುಷ್ಪ'-2 ರಿಲೀಸ್ ಪೋಸ್ಟ್‌ಪೋನ್ ಆಗುತ್ತಿದ್ದು ಬಾಕ್ಸಾಫೀಸ್‌ನಲ್ಲಿ 'ಗೇಮ್‌ಚೇಂಜರ್' ಎದುರು ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ.
ಡಿಸೆಂಬರ್‌ನಲ್ಲಿ 'ಗೇಮ್‌ಚೇಂಜರ್' ಹಾಗೂ 'ಪುಷ್ಪ'-2 ತೆರೆಗೆ ಬಂದರೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರೆಂಟಿ ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ಬಿಡುಗಡೆ ಮಾಡಲು ನಿರ್ಮಾಪಕರು ಒಪ್ಪಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಇಂತಹ ಸಾಹಸಕ್ಕೆ ಕೈ ಹಾಕುತ್ತಾರೆ. ಹಬ್ಬ, ಲಾಂಗ್ ವೀಕೆಂಡ್ ಇದ್ದಾಗ ಇಂತಹ ಆಲೋಚನೆ ಮಾಡುತ್ತಾರೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ 'ಗೇಮ್‌ಚೇಂಜರ್' ಹಾಗೂ 'ಪುಷ್ಪ'-2 ಒಟ್ಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ.
ಸದ್ಯ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವಂತಹ ಮಾತುಗಳು ಕೇಳಿಬರ್ತಿದೆ. ಹಲವು ವರ್ಷಗಳಿಂದ ಅಲ್ಲು ಫ್ಯಾಮಿಲಿಯನ್ನು ಕಂಡರೆ ಪವನ್ ಕಲ್ಯಾಣ್‌ಗೆ ಇಷ್ಟವಿಲ್ಲ ಎನ್ನಲಾಗ್ತಿದೆ. ಇದೆಲ್ಲದರ ನಡುವೆ 'ಗೇಮ್‌ಚೇಂಜರ್', 'ಪುಷ್ಪ'-2 ಬಾಕ್ಸಾಫೀಸ್ ಫೈಟ್ ನಡೆಯುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










