ಅರೇ 'ಸಲಾರ್' ಕನ್ನಡ ಟ್ರೈಲರ್ ಬರಲ್ವಾ? ಹೊಂಬಾಳೆ ಫಿಲ್ಮ್ಸ್ ಈ ನಿರ್ಧಾರಕ್ಕೆ ಕಾರಣ ಏನು?
ಪ್ರಭಾಸ್ ನಟನೆಯ 'ಸಲಾರ್' ಚಿತ್ರದ ಒಂದೊಂದೇ ಅಪ್‌ಡೇಟ್ ಹೊರ ಬೀಳ್ತಿದೆ. ಶೀಘ್ರದಲ್ಲೇ ಸಿನಿಮಾ ಟ್ರೈಲರ್ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಸಿನಿಮಾ ಬಿಡುಗಡೆಗೆ 42 ದಿನಗಳು ಮಾತ್ರ ಬಾಕಿಯಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಪ್ರಭಾಸ್ ಇತ್ತೀಚೆಗೆ ಮೊಣಕಾಲು ಚಿಕಿತ್ಸೆಗಾಗಿ ಇಟಲಿಗೆ ಹೋಗಿ ಬಂದಿದ್ದರು. ಅಲ್ಲಿಂದ ಬಂದ ಕೂಡಲೇ ಚಿತ್ರದ ಐಟಂ ಸಾಂಗ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಬಾಲಿವುಡ್ ನಟಿ ಸಿಮ್ರನ್ ಕೌರ್ ಚಿತ್ರದಲ್ಲಿ ಪ್ರಭಾಸ್ ಪಕ್ಕ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇನ್ನು ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗುತ್ತಿದೆ. ಮಲಯಾಳಂ ವರ್ಷನ್ ಪೃಥ್ವಿರಾಜ್ ಸುಕುಮಾರ್‌ಗೆ ನೀಡಿರುವುದಾಗಿ ಈ ಹಿಂದೆ ಚಿತ್ರತಂಡ ಘೋಷಿಸಿತ್ತು. 'KGF' ಸರಣಿ, 'ಕಾಂತಾರ', 'ಧೂಮಂ' ಚಿತ್ರಗಳನ್ನು ಪೃಥ್ವಿರಾಜ್ ಕೇರಳದಲ್ಲಿ ರಿಲೀಸ್ ಮಾಡಿದ್ದರು. 'ಸಲಾರ್' ಚಿತ್ರದಲ್ಲಿ ಪೃಥ್ವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಅಲ್ಲಿ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗಪ್ಪಳಿಸಲಿದೆ.
ಇದೀಗ 'ಸಲಾರ್' ತಮಿಳು ವರ್ಷನ್ ವಿತರಣೆ ಹಕ್ಕು ರೆಡ್ ಜೈಂಟ್ ಸಂಸ್ಥೆ ಕೊಂಡುಕೊಂಡಿದೆ. ಈ ಸಂಸ್ಥೆ ಈಗ ದೊಡ್ಡ ದೊಡ್ಡ ತಮಿಳು ಸಿನಿಮಾಗಳನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಿ ಸುದ್ದಿಯಲ್ಲಿದೆ. ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗ್ತಿದೆ. ಇದೆಲ್ಲದರ ನಡುವೆ 'ಸಲಾರ್' ಟ್ರೈಲರ್ ಬಗ್ಗೆ ಇಂಟ್ರೆಸ್ಟಿಂಗ್ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

'ಸಲಾರ್' ಇಂಡಿಯನ್ ಸಿನಿಮಾ ಎಂದು ಮುಹೂರ್ತದ ದಿನವೇ ಹೊಂಬಾಳೆ ಸಂಸ್ಥೆ ಘೋಷಿಸಿತ್ತು. ತೆಲುಗು ಮಾತ್ರವಲ್ಲದೇ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಆದರೆ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳ ಟೀಸರ್, ಟ್ರೈಲರ್, ಸಾಂಗ್‌ಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಮಾಡುತ್ತಾರೆ. ಆದರೆ ಹೊಂಬಾಳೆ ಸಂಸ್ಥೆ ಇದನ್ನು ಬ್ರೇಕ್ ಮಾಡ್ತಾ ಬರ್ತಿದೆ.
ಪ್ರಕಾಶ್ ರಾಜ್ ಇಂಗ್ಲೀಷ್ ಡೈಲಾಗ್ಸ್ ಸೇರಿಸಿ 'KGF'-2 ಚಿತ್ರದ ಒಂದೇ ಒಂದು ಟೀಸರ್ ರಿಲೀಸ್ ಮಾಡಿತ್ತು. ಇದೇ ಟ್ರೆಂಡ್ ಅನ್ನು ಹಲವರು ಆರಂಭಿಸಿದರು. ಆದರೆ 5 ಭಾಷೆಗಳಲ್ಲಿ 'KGF'-2 ಟ್ರೈಲರ್ ಬಂದಿತ್ತು. ಇದೀಗ 'ಸಲಾರ್' ಚಿತ್ರದ ಒಂದೇ ಟ್ರೈಲರ್ ಬರುತ್ತೆ ಎನ್ನುವ ಊಹಾಪೋಹ ಶುರುವಾಗಿದೆ. 'ಸಲಾರ್' ಟೀಸರ್ ರೀತಿಯಲ್ಲೇ ಒಂದೇ ಟ್ರೈಲರ್ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದೆಯಂತೆ ಚಿತ್ರತಂಡ.
ಟಿನ್ನು ಆನಂದ್ ಇಂಗ್ಲೀಷ್ ಡೈಲಾಗ್ ಜೊತೆಗೆ 'ಸಲಾರ್' ಚಿತ್ರದ ಒಂದೇ ಟೀಸರ್ ಬಂದಿತ್ತು. 5 ಭಾಷೆಯ ಸಾಹಿತ್ಯ ಸೇರಿಸಿ 'KGF- 2' ಚಿತ್ರದ 'ಮಾನ್‌ಸ್ಟರ್' ಸಾಂಗ್ ರಿಲೀಸ್ ಮಾಡಿದ್ದರು. ಅದೇ ರೀತಿ ಇಂಗ್ಲೀಷ್ ಡೈಲಾಗ್ ಅಥವಾ 5 ಭಾಷೆಯ ಡೈಲಾಗ್ಸ್ ಮಿಕ್ಸ್ ಮಾಡಿ ಒಂದೇ ಟ್ರೈಲರ್ ಕಟ್ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ನಿಜವಾದರೆ ಇದೊಂದು ವಿಭಿನ್ನ ಪ್ರಯತ್ನ ಆಗುವುದರಲ್ಲಿ ಸಂದೇಹವಿಲ್ಲ.
'ಸಲಾರ್' ಚಿತ್ರದ ಇಂಗ್ಲೀಷ್‌ಗೂ ಡಬ್ ಆಗಿ ರಿಲೀಸ್ ಆಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ. ಒಂದು ವೇಳೆ ಇಂಗ್ಲೀಷ್‌ನಲ್ಲಿ ಸಿನಿಮಾ ಬರೋದೆ ಆದರೆ ಇಂಗ್ಲೀಷ್ ಡೈಲಾಗ್ ಇರುವ ಒಂದೇ ಟ್ರೈಲರ್ ರಿಲೀಸ್ ಆಗುವ ಸಾಧ್ಯತೆಯಿದೆ. ಒಟ್ನಲ್ಲಿ ಟ್ರೈಲರ್ ವಿಚಾರದಲ್ಲೇ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿರುವುದು ಸುಳ್ಳಲ್ಲ. ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











