Prabhas: ಹೀರೋ ಆಗಬೇಕಿದ್ದ ಚಿತ್ರದಲ್ಲೇ ಪ್ರಭಾಸ್ ಅತಿಥಿ ಪಾತ್ರ? ಶಿವಣ್ಣ, ಅಣ್ಣಾವ್ರು ಆ ಪಾತ್ರ ಮಾಡಿದ್ರು
ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಪ್ರಭಾಸ್ ಸಂಚಲನ ಸೃಷ್ಟಿಸಿದ್ದಾರೆ. ಸಾಹೋ, ರಾಧೆಶ್ಯಾಮ್, ಆದಿಪುರುಷ್ ಬಳಿಕ ಸಲಾರ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಪ್ರಾಜೆಕ್ಟ್-K, ರಾಜಾ ಡೀಲಕ್ಸ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಇಷ್ಟದ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ 'ಕನ್ನಪ್ಪ' ಎನ್ನುವ ಸಿನಿಮಾ ಟಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿದೆ. ಕಲೆಕ್ಷನ್ ಕಿಂಗ್ ಮೋಹನ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪುತ್ರ ಮಂಚು ವಿಷ್ಣು ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ಇದೇ ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

'ಕನ್ನಪ್ಪ' ಪ್ರಭಾಸ್ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೊನೆ ಪಕ್ಷ ಅತಿಥಿ ಪಾತ್ರದಲ್ಲಾದರೂ ನಟಿಸಬೇಕು ಎಂದು ಯಂಗ್ ರೆಬಲ್ ಸ್ಟಾರ್ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ 'ಕನ್ನಪ್ಪ' ತಂಡ ಸೇರಿದರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.
'ಬೇಡರ ಕಣ್ಣಪ್ಪ' ಜೀವನಾಧರಿತ ಚಿತ್ರ ಈ 'ಕನ್ನಪ್ಪ'. ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಕಣ್ಣಪ್ಪ ಬಹಳ ಪ್ರಸಿದ್. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಮಹಾನ್ ಭಕ್ತ. ಇದೇ ಕತೆಯನ್ನು ಆಧರಿಸಿ ದಶಕಗಳ ಹಿಂದೆ ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸಿದ್ದರು. ಇದು ಅಣ್ಣಾವ್ರ ಚೊಚ್ಚಲ ಸಿನಿಮಾ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್‌ಗೆ ಭದ್ರ ಬುನಾದಿಯಾಯಿತು.

ಆ ಬಳಿಕ ಹೆಚ್ಚು ಕಡಿಮೆ ಇದೇ ಕಥೆಯನ್ನು ಆಧರಿಸಿ ಶಿವರಾಜ್‌ಕುಮಾರ್ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇದೇ ಚಿತ್ರದಲ್ಲಿ ಅಣ್ಣಾವ್ರು ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇನ್ನು 'ಬೇಡರ ಕಣ್ಣಪ್ಪ' ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಬಳಿಕ ತೆಲುಗಿನಲ್ಲಿ ಕೃಷ್ಣಂರಾಜು ಈ ಚಿತ್ರವನ್ನು 'ಭಕ್ತ ಕನ್ನಪ್ಪ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಇದೇ ಚಿತ್ರದಲ್ಲಿ ಪ್ರಭಾಸ್ ನಟಿಸಬೇಕು ಎನ್ನುವುದು ಕೃಷ್ಣಂರಾಜು ಆಸೆ ಆಗಿತ್ತು. ಸಾಕಷ್ಟು ಬಾರಿ ಇಂತಾದೊಂದು ಚಿತ್ರಕ್ಕೆ ಪ್ರಯತ್ನ ನಡೀತು. ಆದರೆ ಸಾಧ್ಯವಾಗಲಿಲ್ಲ.
ಇದೀಗ 'ಕನ್ನಪ್ಪ' ಚಿತ್ರದಲ್ಲಿ ಮಂಚು ವಿಷ್ಣು ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಶಿವನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇತ್ತೀಚೆಗೆ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಶಿವನಾಗಿ 'ಕನ್ನಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿಕ್ಕಪ್ಪನ ಕನಸಿನ ಚಿತ್ರದಲ್ಲಿ ನಾಯಕನಾಗಿ ನಟಿಸದೇ ಇದ್ದರೂ ಅತಿಥಿ ಪಾತ್ರದಲ್ಲಿ ನಟಿಸೋಕೆ ಯಂಗ್ ರೆಬಲ್ ಸ್ಟಾರ್ ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಪೂಜೆ ಸಲ್ಲಿಸಿ 'ಕನ್ನಪ್ಪ' ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆ ಸಿದ್ಧಪಡಿಸಿದ್ದು ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ನೀಡುತ್ತಿದ್ದಾರೆ. ಶೆಲ್ಡನ್ ಶಾ ಅವರ ಛಾಯಾಗ್ರಹಣವಿದ್ದು ಮೋಹನ್ ಬಾಬು ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಸ್ಟಾರ್ ಪ್ಲಸ್ ವಾಹಿನಿಗಾಗಿ 'ಮಹಾಭಾರತ' ಧಾರಾವಾಹಿ ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್ 'ಕನ್ನಪ್ಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿದೇಶದಲ್ಲೇ ಬಹುತೇಕ ಚಿತ್ರೀಕರಣ ನಡೆಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಐದಾರು ವರ್ಷಗಳಿಂದ ಮೋಹನ್ ಬಾಬು ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದರು. ಕೊರೊನಾ ಹಾವಳಿಯಿಂದ ತಡವಾಗಿತ್ತು.


Click it and Unblock the Notifications











