ಜ್ಯೂ. ಎನ್‌ಟಿಆರ್ ಸಿನಿಮಾ ಪಕ್ಕಕ್ಕಿಟ್ಟು, ಆ ಸೀಕ್ವೆಲ್ ಕೈಗೆತ್ತಿಕೊಂಡ ಪ್ರಶಾಂತ್ ನೀಲ್!
ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 'ಉಗ್ರಂ', KGF ಸರಣಿ ಬಳಿಕ 'ಸಲಾರ್' ಮೂಲಕ ಮತ್ತೆ ಪ್ರಶಾಂತ್ ನೀಲ್ ಗೆದ್ದು ಬೀಗಿದ್ದಾರೆ. ಸೋಲಿನ ಸುಳಿಗೆ ಸಿಲುಕಿದ್ದ ಯಂಗ್ ರೆಬಲ್ ಸ್ಟಾರ್‌ಗೆ ಗೆಲುವಿನ ಟಾನಿಕ್ ಕೊಟ್ಟಿದ್ದಾರೆ.
'ಸಲಾರ್' ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಜೊತೆಗೆ ಪ್ರಶಾಂತ್ ನೀಲ್ ಒಂದು ಸಿನಿಮಾ ಘೋಷಣೆ ಮಾಡಿದ್ದರು. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ತಾರಕ್ ಸಿನಿಮಾ ಚಿತ್ರೀಕರಣ ನಡೆಯಬೇಕಿತ್ತು. ಆದರೆ ಕೋವಿಡ್ ಸಮಸ್ಯೆ, ನೀಲ್ ಹಾಗೂ ಯಂಗ್ ಟೈಗರ್ ಬೇರೆ ಬೇರೆ ಕಮೀಟ್‌ಮೆಂಟ್‌ಗಳ ಕಾರಣದಿಂದ ಆ ಸಿನಿಮಾ ತಡವಾಗುತ್ತಿದೆ.

ತಾರಕ್- ಪ್ರಶಾಂತ್ ನೀಲ್ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಅದು ಜ್ಯೂ. ಎನ್‌ಟಿಆರ್ 31 ನೇ ಸಿನಿಮಾ. ಹಾಗಾಗಿ #NTR31 ಎಂದೇ ಕರೆಯಲಾಗುತ್ತಿದೆ. ಸದ್ಯ ತಾರಕ್ ಬಾಲಿವುಡ್‌ಗೂ ಹೊರಟು ನಿಂತಿದ್ದಾರೆ. ಹೃತಿಕ್ ರೋಷನ್ ಜೊತೆಗೆ 'ವಾರ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ 'ದೇವರ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ #NTR31 ಸಿನಿಮಾ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸದ್ಯಕ್ಕೆ ಆ ಚಿತ್ರವನ್ನು ಪಕ್ಕಕ್ಕಿಟ್ಟಿದ್ದಾರೆ. ಮೊದಲು 'ಸಲಾರ್' ಸೀಕ್ವೆಲ್ ಮುಗಿಸುವ ಆಲೋಚನೆಯಲ್ಲಿದ್ದಾರೆ. ಮುಂದಿನ ತಿಂಗಳೇ ಮತ್ತೆ 'ಸಲಾರ್' ಅಖಾಡಕ್ಕೆ ನೀಲ್ ಎಂಟ್ರಿ ಕೊಡಲಿದ್ದಾರೆ.

ಕಳೆದ ವರ್ಷ ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ತೆರೆಗಪ್ಪಳಿಸಿತ್ತು. ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದರು. ಆದರೆ ಅರ್ಧ ಕಥೆಯನ್ನು ಮಾತ್ರ ಹೇಳಿ ಶೌರ್ಯಾಂಗ ಪರ್ವಕ್ಕೆ ಕುತೂಹಲವನ್ನು ದಾಟಿಸಿದ್ದರು. ಇದೇ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ.
ತಾರಕ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ 'ಸಲಾರ್-2' ಸಿನಿಮಾ ಮೊದಲು ಮಾಡಿ ಮುಗಿಸಲು ನೀಲ್ ತೀರ್ಮಾನಿಸಿದ್ದಾರೆ. ಇತ್ತೀಚೆಗೆ ಸ್ವತಃ ಪೃಥ್ವಿರಾಜ್ ಸಿನಿಮಾ ಚಿತ್ರೀಕರಣದ ಬಗ್ಗೆ ಮಾತನಾಡಿದ್ದರು. ಆದಷ್ಟು ಬೇಗ ಚಿತ್ರೀಕರಣ ಆರಂಭವಾಗುತ್ತದೆ ಎಂದಿದ್ದರು. ಮೊದಲಿಗೆ ಪೃಥ್ವಿರಾಜ್ ಹಾಗೂ ಇತರೆ ಕಲಾವಿದರ ಸನ್ನಿವೇಶಗಳನ್ನು ಚಿತ್ರೀಕರಿಸಲಿದ್ದು ಬಳಿಕ ಜೂನ್ ವೇಳೆಗೆ ಪ್ರಭಾಸ್ ತಂಡವನ್ನು ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ.
ಸದ್ಯ ಪ್ರಭಾಸ್ 'ಕಲ್ಕಿ 2898AD' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದಷ್ಟು ಬೇಗ ಆ ಸಿನಿಮಾ ಮುಗಿಸಲು ಲೆಕ್ಕಾಚಾರದಲ್ಲಿದ್ದಾರೆ. ಮೇ 9ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಮೋಷನ್, ರಿಲೀಸ್ ಎಲ್ಲಾ ಮುಗಿದ ಬಳಿಕ 'ಸಲಾರ್' ಆಗಿ ಮತ್ತೆ ಅಬ್ಬರಿಸಲಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ಮನೆಯ ಕಾರ್ಯಕ್ರಮಕ್ಕೆ ತಾರಕ್ ಪತ್ನಿ ಸಮೇತ ಹಾಜರಾಗಿದ್ದರು. ಮುಂದಿನ ಸಿನಿಮಾ ಬಗ್ಗೆ ಈ ವೇಳೆ ಚರ್ಚೆ ನಡೀತಾ? ಎನ್ನುವ ಅನುಮಾನ ಕೆಲವರನ್ನು ಕಾಡಿತ್ತು. ಆದರೆ ಸದ್ಯಕ್ಕೆ ಜ್ಯೂ. ಎನ್‌ಟಿಆರ್ ಗಮನ 'ದೇವರ' ಹಾಗೂ 'ವಾರ್-2' ಕಡೆಗಿದೆ.
'ಸಲಾರ್'-2 ಒಂದಷ್ಟ ದೃಶ್ಯಗಳ ಚಿತ್ರೀಕರಣ ಕೂಡ ನಡೆದಿದೆ. ಹಾಗಾಗಿ ಇನ್ನುಳಿದ ಸನ್ನಿವೇಶಗಳನ್ನು ಸೆರೆಹಿಡಿದು ಬೇಗ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಅದೇ ಕಾರಣಕ್ಕೆ #NTR31 ಚಿತ್ರವನ್ನು ಪ್ರಶಾಂತ್ ನೀಲ್ ಸದ್ಯಕ್ಕೆ ಪಕ್ಕಕ್ಕಿಟ್ಟಿದ್ದಾರೆ ಎನ್ನಲಾಗ್ತಿದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ NTR ಆರ್ಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಬೇಕಿದೆ. ಅಭಿಮಾನಿಗಳಂತೂ ಪ್ರಶಾಂತ್ ನೀಲ್ ಎಲಿವೇಷನ್‌ನಲ್ಲಿ ತಾರಕ್ ಪರ್ಫಾರ್ಮನ್ಸ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications










