ರಾಮ್‌ಚರಣ್, ಶಿವಣ್ಣ ನಟನೆಯ 'ಪೆದ್ದಿ' ಮತ್ತೆ ಪೋಸ್ಟ್‌ಪೋನ್; ಹೊಸ ರಿಲೀಸ್ ಡೇಟ್ ಫಿಕ್ಸ್
ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತೆರೆಗೆ ತರುವುದು ಅಷ್ಟು ಸುಲಭ ಅಲ್ಲ. ಒಂದೊಂದು ಚಿತ್ರಕ್ಕೆ ಮೂರ್ನಾಲ್ಕು ವರ್ಷ ವ್ಯಯಿಸುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ವ್ಯವಹಾರ. ಎಲ್ಲಾ ಪಕ್ಕಾ ಮಾಡಿಕೊಂಡ ಮೇಲೆ ಬಿಡುಗಡೆ ಸಾಧ್ಯ. ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಲಾಗ್ತಿದೆ.
ಮಾರ್ಚ್ 27ಕ್ಕೆ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಬಿಡುಗಡೆ ಎಂದು ವರ್ಷದ ಹಿಂದೆ ಘೋಷಿಸಿತ್ತು ಚಿತ್ರತಂಡ. ಆದರೆ 'ಟಾಕ್ಸಿಕ್' ಹಾಗೂ 'ಧುರಂಧರ್-2' ಚಿತ್ರಗಳಿಗೆ ಹೆದರಿ ಒಂದು ತಿಂಗಳು ತಡವಾಗಿ ಅಂದರೆ ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಒಂದು ತಿಂಗಳು ತಾನೇ ಎಂದು ಅಭಿಮಾನಿಗಳು ಸಮಾಧಾನಗೊಂಡಿದ್ದರು. ಆದರೆ ಈಗ ಮತ್ತೆ 3 ತಿಂಗಳು ತಡವಾಗುತ್ತದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಬೇಸರತಂದಿದೆ.

ರಾಮನವಮಿ ಸಂಭ್ರಮದಲ್ಲಿ 'ಪೆದ್ದಿ' ಚಿತ್ರದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಪೈಲ್ವಾನ್ ಅವತಾರದಲ್ಲಿ ರಾಮ್‌ಚರಣ್ ದರ್ಬಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಟೀಸರ್‌ನಲ್ಲಿ ಕೂಡ ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಈಗ ರಿಲೀಸ್ ಡೇಟ್ ಬಗ್ಗೆ ಗೊಂದಲ ಶುರುವಾಗಿದೆ. ಜೂನ್ 26ಕ್ಕೆ 'ಪೆದ್ದಿ' ಆರ್ಭಟ ಶುರುವಾಗಬಹುದು ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ.
'ಪೆದ್ದಿ' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿಲ್ಲ. ಇತ್ತೀಚೆಗೆ ಶೂಟಿಂಗ್ ವೇಳೆ ರಾಮ್‌ಚರನ್ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಐಟಂ ಸಾಂಗ್ ಜೊತೆ ಮತ್ತೊಂದು ಸಾಂಗ್ ಶೂಟ್ ಬಾಕಿಯಿದೆ. ಜೊತೆಗೆ ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವ ಕಾರಣಕ್ಕೆ ಅನಿವಾರ್ಯವಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಬೇಕಾಗಿದೆ ಎನ್ನಲಾಗ್ತಿದೆ. ತೆಲುಗು ಚಿತ್ರ ನಿರ್ಮಾಪಕ ಶ್ರೀನಿವಾಸ ಕುಮಾರ್ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಐಪಿಎಲ್ ಟೂರ್ನಿ ನಡೆಯುತ್ತಿರುವುದು ಕೂಡ 'ಪೆದ್ದಿ' ಸಿನಿಮಾ ಬಿಡುಗಡೆ ಮುಂದೂಡಲು ಕಾರಣ ಎನ್ನಲಾಗ್ತಿದೆ. ಆದರೆ ಚಿತ್ರದಲ್ಲಿ ರಾಮ್‌ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ನಟಿಸುತ್ತಿದ್ದಾರೆ. ಹಾಗಾಗಿ ಐಪಿಎಲ್ ನಡುವೆ ಸಿನಿಮಾ ಬಿಡುಗಡೆ ಮಾಡಿ ಕ್ರೇಜ್ ಹೆಚ್ಚಿಸಲು ಪ್ಲ್ಯಾನ್ ಮಾಡಲಾಗಿತ್ತು. ಐಪಿಎಲ್ ಟ್ರೆಂಡ್ ಬಳಸಿಕೊಳ್ಳುವ ಲೆಕ್ಕಾಚಾರ ನಡೆದಿತ್ತು. ಈಗ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಸಿಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ಪೆದ್ದಿ' ಸಿನಿಮಾ ಜೂನ್ 26ಕ್ಕೆ ತೆರೆಗೆ ಬರುವುದರಿಂದ 'ಡ್ರ್ಯಾಗನ್' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗಲಿದೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಜೋಡಿಯ ಈ ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಶೂಟಿಂಗ್ ತಡವಾಗಿ ರಿಲೀಸ್ ಡೇಟ್ ತಡವಾಗುತ್ತಲೇಯಿದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಎಂದು ಮೊದಲು ಘೋಷಿಸಿದ್ದರು. ಬಳಿಕ ಜೂನ್ 25ಕ್ಕೆ ಎಂದು ಹೇಳಿದ್ದರು. ಈಗ ಮತ್ತೆ ತಡವಾಗುತ್ತಿದೆ. ಒಟ್ಟಾರೆ ಒಂದು ವಾರ ಬಾಕಿ ಇರುವಾಗ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆ ಖಚಿತ ಎಂದು ಹೇಳುವಂತಾಗಿದೆ. ತಿಂಗಳುಗಳ ಮುನ್ನ ರಿಲೀಸ್ ಡೇಟ್ ಘೋಷಣೆ ಮಾಡಿದರೆ ಪ್ರಯೋಜನವಿಲ್ಲ ಎನ್ನುವಂತಾಗಿದೆ.
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಚಿತ್ರದಲ್ಲಿ ಕುಸ್ತಿ ಉಸ್ತಾದ್ ಆಗಿ ಶಿವಣ್ಣ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಎ. ಆರ್ ರಹಮಾನ್ ಸಂಗೀತದಲ್ಲಿ ಸಿನಿಮಾ ಹಾಡುಗಳು ಸದ್ದು ಮಾಡ್ತಿವೆ. ಜಗಪತಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿ. ಮೃಣಾಲ್ ಠಾಕೂರ್ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.


Click it and Unblock the Notifications











