ಮತ್ತೆ ರಶ್ಮಿಕಾ ಜಾಕ್‌ಪಾಟ್; 800 ಕೋಟಿ ರೂ. ಬಜೆಟ್ ಚಿತ್ರಕ್ಕೆ ಆಯ್ಕೆ!
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಾಲಿವುಡ್, ಟಾಲಿವುಡ್ ಎಲ್ಲಾ ಕಡೆ ಕಿರಿಕ್ ಬ್ಯೂಟಿ ಹವಾ ನಡೀತಿದೆ. 'ಪುಷ್ಪ'-2, 'ಛಾವ', 'ಕುಬೇರ' ರೀತಿಯ ಸೆನ್ಸೇಷನಲ್ ಸಿನಿಮಾಗಳಲ್ಲಿ ನಟಿಸಿ ಸಾನ್ವಿ ಕಮಾಲ್ ಮಾಡಿದ್ದಾರೆ. ಇದೀಗ ಮತ್ತೊಂದು ಭರ್ಜರಿ ಆಫರ್ ಬಂದಿದೆಯಂತೆ.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ದೊಡ್ಡ ನಿರ್ಮಾಣ ಸಂಸ್ಥೆ, ಸ್ಟಾರ್ ಡೈರೆಕ್ಟರ್ ಬೇರೆ ಬೇರೆ ಚಿತ್ರರಂಗದ ಕಲಾವಿದರ ಒಟ್ಟಿಗೆ ಸೇರಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. 5 ಭಾಷೆಗಳಲ್ಲಿ ಒಟ್ಟೊಟ್ಟಿಗೆ ಸಿನಿಮಾಗಳು ತೆರೆಗೆ ಬರ್ತಿದೆ. ಇನ್ನೊಂದು ವರ್ಷದಲ್ಲಿ ಇದು ಮತ್ತೊಂದು ಹಂತಕ್ಕೆ ಹೋಗಲಿದೆ. ನಮ್ಮ ಸಿನಿಮಾಗಳು ಏಕಕಾಲಕ್ಕೆ ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬರಲಿದೆ.

'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಮೂಲಕ ಯಶ್ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ. ಅತ್ತ ರಾಜಮೌಳಿ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಕಾಂಬಿನೇಷನ್‌ನಲ್ಲಿ ಭಾರೀ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇತ್ತ ತಮಿಳು ನಿರ್ದೇಶಕ ಅಟ್ಲಿ ಕೂಡ ಅಂಥದ್ದೇ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಅಲ್ಲು ಅರ್ಜುನ್ ಜೊತೆ ಕೈ ಜೋಡಿಸಿದ್ದಾರೆ. #AA22xA6 ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಾಲಿವುಡ್ ಮಂದಿ ಕೂಡ ದಂಗಾಗುವಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ದೀಪಿಕಾ ಪಡುಕೋಣೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಜವಾನ್' ಬಳಿಕ ಅಟ್ಲಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡ್ತಿದೆ. 'ಪುಷ್ಪ' ಸರಣಿ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಿಂಚಿದ್ದರು. ಪುಷ್ಪರಾಜ್ ಹಾಗೂ ಶ್ರೀವಲ್ಲಿ ಜೋಡಿ ತೆರೆಮೇಲೆ ಕಮಾಲ್ ಮಾಡಿತ್ತು. ಅಟ್ಲಿ ಚಿತ್ರಕ್ಕಾಗಿ ಇವರಿಬ್ಬರು ಮತ್ತೆ ಜೊತೆಯಾಗುತ್ತಾರೆ ಎಂದು ಹೇಳಲಾಗ್ತಿದೆ.

ಅಲ್ಲು ಅರ್ಜುನ್ ಜೊತೆ ಜಾನ್ವಿ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಮೃಣಾಲ್ ಠಾಕೂರ್ ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕೆಲ ದಿನಗಳಿಂದ ಗುಸುಗುಸು ಕೇಳಿಬರ್ತಿತ್ತು. ಆದರೆ ದಿಢೀರನೆ ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎಂದು ಪಿಂಕ್ ವಿಲ್ಲಾ ವೆಬ್ ಸೈಟ್ ವರದಿ ಮಾಡಿದೆ. ಈಗಾಗಲೇ ಪಾತ್ರಕ್ಕಾಗಿ ರಶ್ಮಿಕಾ ಲುಕ್ ಟೆಸ್ಟ್ ಕೂಡ ನಡೆದಿದ್ದು ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗುತ್ತದೆ ಎನ್ನಲಾಗ್ತಿದೆ.
'ಕುಬೇರ' ಬಳಿಕ ರಶ್ಮಿಕಾ ಮಂದಣ್ಣ ಕೈಯಲ್ಲಿ ಯಾವುದೇ ದೊಡ್ಡ ಸಿನಿಮಾ ಇರಲಿಲ್ಲ. 'ಥಮ', 'ಮೈಸಾ', 'ದಿ ಗರ್ಲ್ ಫ್ರೆಂಡ್' ರೀತಿಯ ಸಣ್ಣ ಚಿತ್ರಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಇದೀಗ ಅಟ್ಲಿ ಹಾಗೂ ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನುವುದು ರಶ್ಮಿಕಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಅಂದಾಜು 800 ಕೋಟಿ ರೂ. ಬಜೆಟ್‌ನಲ್ಲಿ #AA22xA6 ಸಿನಿಮಾ ನಿರ್ಮಾಣವಾಗುತ್ತಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರದಕ್ಕೆ ರಶ್ಮಿಕಾ ಆಯ್ಕೆ ಆಗಿರುವುದು ಎಷ್ಟು ನಿಜ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.


Click it and Unblock the Notifications











