CCL 2025: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಭೋಜ್‌ಪುರಿ ದಬಾಂಗ್ಸ್
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಸೀಸನ್ 11 ಯಶಸ್ವಿಯಾಗಿ ನಡೀತಿದೆ. ಇವತ್ತು(ಫೆಬ್ರವರಿ 14) ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಆತಿಥೇಯ ತಂಡ ನಾಯಕ ಅಖಿಲ್ ಅಕ್ಕಿನೇನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ನಿರ್ಧಾರ ಸರಿಯಿಲ್ಲ ಎನ್ನುವುದು ಕೆಲವೇ ನಿಮಿಷಗಳಲ್ಲಿ ಸಾಬೀತಾಗಿತ್ತು. ಮೊದಲ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ತಂಡದ ಪ್ರಮುಖ ಬ್ಯಾಟ್ಸ್ಮನ್‌ಗಳಾದ ಆದರ್ಶ್, ಸಚಿನ್ ಮತ್ತು ಅಶ್ವಿನ್ ಬಾಬು ಶೂನ್ಯಕ್ಕೆ ಔಟಾದರು. ಕೆಲವೇ ನಿಮಿಷಗಳಲ್ಲಿ ಭರವಸೆಯ ಆಟಗಾರ ಎಸ್. ಥಮನ್ ಸಹ ಔಟ್ ಆಗಿ ತಂಡಕ್ಕೆ ಭಾರೀ ಆಘಾತ ಎದುರಾಗಿತ್ತು.

ಬಳಿಕ ತಂಡದ ನಾಯಕ ಅಖಿಲ್ ಅಕ್ಕಿನೇನಿ ಹಾಗೂ ಸಾಂಬಾ ಕೊಂಚ ಮಟ್ಟಿಗೆ ಸಮಾಧಾನಕರ ಆಟ ಪ್ರದರ್ಶಿಸಿದರು. ಅಖಿಲ್ 41 ಹಾಗೂ ಸಾಂಬಾ 18 ರನ್ ಗಳಿಸಿ ಒಟ್ಟಾರೆ ತಂಡ 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಲು ನೆರವಾದರು. ಭೋಜ್‌ಪುರಿ ದಬಾಂಗ್ಸ್ ತಂಡದ ಮನಮೋಹನ್, ಅಜಯ್ ಹಾಗೂ ಆದಿತ್ಯಾ ಕರಾರುವಕ್ ಬೌಲಿಂಗ್‌ನಿಂದ ಆರಂಭದಲ್ಲೇ ವಾರಿಯರ್ಸ್ ಆರ್ಭಟಕ್ಕೆ ಬ್ರೇಕ್ ಹಾಕಿದರು.
ಸಾಧಾರಣ ಮೊತ್ತಕ್ಕೆ ತೆಲುಗು ವಾರಿಯರ್ಸ್ ತಂಡವನ್ನು ಕಟ್ಟಿ ಹಾಕಿದ ಭೋಜ್‌ಪುರಿ ದಬಾಂಗ್ಸ್ ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿದರು. 30 ಎಸೆತಗಳಲ್ಲಿ ಆದಿತ್ಯ ಔಟಾಗದೇ 61 ರನ್ ಗಳಿಸಿದರು. ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಪ್ರೇಕ್ಷಕರನ್ನು ರಂಜಿಸಿದರು. 18 ಎಸೆತಗಳಲ್ಲಿ ಅನ್ಷುಮಾನ್ 42 ರನ್ ಸಿಡಿಸಿದರು. ಒಟ್ಟಾರೆ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಪೇರಿಸಿದರು. ವಾರಿಯರ್ಸ್ ಪರ ಸಚಿನ್ 3 ಹಾಗೂ ಅಶ್ವಿನ್ 2 ವಿಕೆಟ್ ಕಬಳಿಸಿದರು.
46 ರನ್‌ಗಳ ಹಿನ್ನಡೆಯೊಂದಿಗೆ ತೆಲುಗು ವಾರಿಯರ್ಸ್ ತಂಡ ತನ್ನ 2ನೇ ಇನ್ನಿಂಗ್ಸ್ ಶುರು ಮಾಡಿತು. 6 ವಿಕೆಟ್ ಕಳೆದುಕೊಂಡು 132 ರನ್ ಮಾತ್ರ ಗಳಿಸಿತು. ತಂಡದ ಪರ 14 ಎಸೆತಗಳಲ್ಲಿ 36 ರನ್ ಗಳಿಸಿ ಅಶ್ವಿನ್ ಗಮನ ಸೆಳೆದರು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 86 ರನ್‌ಗಳ ಟಾರ್ಗೆಟ್ ಭೋಜ್‌ಪುರಿ ದಬಾಂಗ್ಸ್ ಮುಂದಿತ್ತು. ಈ ಸಾಧಾರಣ ಮೊತ್ತವನ್ನು ಅನಾಯಾಸವಾಗಿಯೇ ತಂಡ ಗಳಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಕೊನೆ ಓವರ್‌ನಲ್ಲಿ 17ರನ್ ಗಳಿಸಬೇಕಾದ ಅನಿವಾರ್ಯತೆಗೆ ಭೋಜ್‌ಪುರಿ ದಬಾಂಗ್ಸ್ ತಂಡ ತಲುಪಿತ್ತು. ಮೊದಲ ಎಸೆತದಲ್ಲೇ 6 ರನ್ ಬಂತು. ಇದನ್ನು ನೋಡಿ ಮತ್ತೆ ದಬಾಂಗ್ಸ್ ಗೆಲ್ಲುವ ಆಸೆ ಮೂಡಿತ್ತು. ಆದರೆ ಅದಕ್ಕೆ ತೆಲುಗು ವಾರಿಯರ್ಸ್ ತಂಡ ಆಸ್ಪದ ಕೊಡಲಿಲ್ಲ. ಉತ್ತಮ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಿಂದ ಎದುರೇಟು ಕೊಟ್ಟರು. ಅಂತಿಮವಾಗಿ ದಬಾಂಗ್ಸ್ 9.5 ಓವರ್‌ನಲ್ಲಿ 79 ರನ್‌ಗಳಿಗೆ ಆಲ್‌ಔಟ್ ಆಯಿತು.


Click it and Unblock the Notifications











