ಸಿಸಿಎಲ್: ಭೋಜ್‌ಪುರಿ ವಿರುದ್ಧ ಸುಲಭವಾಗಿ ಗೆದ್ದು 4ನೇ ಬಾರಿಗೆ ಚಾಂಪಿಯನ್ ಆದ ತೆಲುಗು ವಾರಿಯರ್ಸ್!

ಕಳೆದ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ನಿನ್ನೆ ( ಮಾರ್ಚ್ 26 ) ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ಮೂಲಕ ಅಂತ್ಯಗೊಂಡಿದೆ.
ತೆಲುಗು ವಾರಿಯರ್ಸ್ ತಂಡ ಭೋಜ್‌ಪುರಿ ದಬಾಂಗ್ಸ್ ತಂಡದ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಸಿಸಿಎಲ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ತೆಲುಗು ವಾರಿಯರ್ಸ್ ಸಿಸಿಎಲ್ ಇತಿಹಾಸದಲ್ಲಿ ತಾನೇ ಯಶಸ್ವಿ ತಂಡ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.
ಫಸ್ಟ್ ಇನ್ನಿಂಗ್ಸ್:
ಮೊದಲಿಗೆ ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಭೋಜ್‌ಪುರಿ ದಬಾಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ದಬಾಂಗ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ರನ್ ಕಲೆಹಾಕುವಲ್ಲಿ ವಿಫಲವಾಗಿದೆ. 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 72 ರನ್ ಕಲೆಹಾಕಿತು.
ಭೋಜ್‌ಪುರಿ ದಬಾಂಗ್ಸ್ ಪರ ಮನೋಜ್ ತಿವಾರಿ 9, ಪ್ರವೇಶ್ ಲಾಲ್ ಯಾದವ್ 4, ಉದಯ್ ತಿವಾರಿ 10, ಆದಿತ್ಯಾ ಓಜಾ 26, ಅನ್ಶುಮಾನ್ ಸಿಂಗ್ 9, ವಿಕ್ರಾಂತ್ ಸಿಂಗ್ ಡಕ್ ಔಟ್, ಅಸ್ಗರ್ ಖಾನ್ ಅಜೇಯ 10 ರನ್ ಹಾಗೂ ದಿನೇಶ್ ಲಾಲ್ ಯಾದವ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ತೆಲುಗು ವಾರಿಯರ್ಸ್ ಪರ ನಂದಕಿಶೋರ್ ಎರಡು ವಿಕೆಟ್, ರಘು ಹಾಗೂ ಪ್ರಿನ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ ತೆಲುಗು ವಾರಿಯರ್ಸ್ ಬ್ಯಾಟಿಂಗ್‌ನಲ್ಲೂ ಸಹ ಅಬ್ಬರಿಸಿತು. 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್‌ಗಳನ್ನು ತೆಲುಗು ವಾರಿಯರ್ಸ್ ಕಲೆಹಾಕಿದೆ. ತಂಡದ ಪರ ನಾಯಕ ಅಖಿಲ್ ಅಕ್ಕಿನೇನಿ 32 ಎಸೆತಗಳಲ್ಲಿ 67, ಪ್ರಿನ್ಸ್ 10, ರೋಷನ್ 7, ಅಶ್ವಿನ್ ಬಾಬು 2, ರಘು ಅಜೇಯ 13 ಹಾಗೂ ಥಮನ್ ಅಜೇಯ 2 ರನ್ ಕಲೆಹಾಕಿದರು. ಭೋಜ್‌ಪುರಿ ದಬಾಂಗ್ಸ್ ಪರ ಅಸ್ಗರ್ ಖಾನ್ ಮೂರು ವಿಕೆಟ್ ಹಾಗೂ ವಿಕ್ರಾಂತ್ ಸಿಂಗ್ ಒಂದು ವಿಕೆಟ್ ಪಡೆದರು.
ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ತೆಲುಗು ವಾರಿಯರ್ಸ್ ಭೋಜ್‌ಪುರಿ ದಬಾಂಗ್ಸ್ ವಿರುದ್ದ 32 ರನ್ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್:
ಮೊದಲ ಇನ್ನಿಂಗ್ಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಭೋಜ್‌ಪುರಿ ದಬಾಂಗ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಎದುರಾಳಿ ತೆಲುಗು ವಾರಿಯರ್ಸ್ ತಂಡಕ್ಕೆ 57 ರನ್ ಗುರಿಯನ್ನು ನೀಡಿತು. ಭೋಜ್‌ಪುರಿ ಪರ ಆದಿತ್ಯಾ ಓಜಾ 31, ಸುಧೀರ್ ಸಿಂಗ್ 0, ಅನ್ಶುಮಾನ್ ಸಿಂಗ್ 0, ಪ್ರವೇಶ್ ಲಾಲ್ ಯಾದವ್ 1, ಅಸ್ಗರ್ ಖಾನ್ 6, ಉದಯ್ ತಿವಾರಿ 34, ಮನೋಜ್ ತಿವಾರಿ ಅಜೇಯ 14 ಹಾಗೂ ದಿನೇಶ್ ಲಾಲ್ ಯಾದವ್ ಅಜೇಯ 1 ರನ್ ಕಲೆಹಾಕಿದರು.
ತೆಲುಗು ವಾರಿಯರ್ಸ್ ಪರ ಸಾಮ್ರಾಟ್ ಹಾಗೂ ಥಮನ್ ತಲಾ ಎರಡು ವಿಕೆಟ್ ಪಡೆದರೆ, ಅಶ್ವಿನ್ ಬಾಬು ಹಾಗೂ ಪ್ರಿನ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಸುಲಭ ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್ ಕೇವಲ 6.2 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 58 ರನ್ ಕಲೆಹಾಕಿ 9 ವಿಕೆಟ್ ಭರ್ಜರಿ ಜಯ ಸಾಧಿಸಿತು. ತೆಲುಗು ವಾರಿಯರ್ಸ್ ಪರ ಥಮನ್ 10, ಅಶ್ವಿನ್ ಬಾಬು ಅಜೇಯ 31 ಹಾಗೂ ಸಚಿನ್ ಜೋಷಿ ಅಜೇಯ 14 ರನ್ ಬಾರಿಸಿದರು. ಭೋಜ್‌ಪುರಿ ದಬಾಂಗ್ಸ್ ಪರ ವಿಕ್ರಾಂತ್ ಸಿಂಗ್ ಒಂದು ವಿಕೆಟ್ ಪಡೆದರು.


Click it and Unblock the Notifications











