ಅಖಂಡ ಸೈಡ್ ಎಫೆಕ್ಟ್; ಆಚಾರ್ಯ ರೀಶೂಟ್ ಗೆ ಚಿರಂಜೀವಿ ಸೂಚನೆ!?
ರಾಮ್ ಚರಣ್ ನಿರ್ಮಾಣದಲ್ಲಿ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆಚಾರ್ಯ' ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಿಗೆ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಫೆಬ್ರವರಿ 4 ರಂದು ಬಿಡುಗಡೆಯಾಗಲಿದೆ ಅಂತ ಈಗಾಗಲೇ ಘೋಷಿಸಲಾಗಿದೆ. ಆದರೆ ಪ್ರಸ್ತುತ ಬರುತ್ತಿರುವ ಸುದ್ದಿಗಳ ಪ್ರಕಾರ 'ಆಚಾರ್ಯ' ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಲಿದೆ ಅಂತ ಹೇಳಲಾಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಟೈಟಲ್ ರೋಲ್‌ನಲ್ಲಿ ನಟಿಸಿರುವ 'ಆಚಾರ್ಯ' ಯಾವಾಗ ಬಿಡುಗಡೆಯಾಗಲಿದೆ? ಅಂತ ಹೇಳಿ ಅವರ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಫೆಬ್ರವರಿ 4 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಣೆ ಕೂಡ ಮಾಡಿದ್ದರು.
ಚಿತ್ರದಲ್ಲಿ ತಂದೆ ಮೆಗಾಸ್ಟಾರ್ ಜೊತೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಸಿನಿ ವಲಯದಲ್ಲಿ ಹರಿದಾಡುತ್ತಿರುವ ಇತ್ತೀಚಿನ ವದಂತಿಗಳ ಪ್ರಕಾರ, ಮೆಗಾಸ್ಟಾರ್ 'ಆಚಾರ್ಯ' ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. 'ಏನದು? ಚಿತ್ರೀಕರಣ ಮುಗಿದಿದೆ,ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಸಂಪೂರ್ಣವಾಗಿದೆ. ಇಂತಹ ಸಮಯದಲ್ಲಿ ಮತ್ತೆ ಯಾಕೆ ಯಾಕೆ ಚಿತ್ರವನ್ನು ಮುಂದೂಡುತ್ತಿದ್ದಾರೆ'? ಅಂತ ಮೆಗಾಸ್ಟಾರ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ಬಾಲಕೃಷ್ಣ ಅಭಿನಯದ "ಅಖಂಡ' ಚಿತ್ರ!

ಆಚಾರ್ಯ ಚಿತ್ರದ ಮೇಲೆ ಅಖಂಡ ಎಫೆಕ್ಟ್!
ಚಿರಂಜೀವಿ ತಮ್ಮ ಸಿನಿಮಾವನ್ನು ಏಕೆ ಮುಂದೂಡಿದರು? ಅದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ತೆರೆಕಂಡ ನಂದಮೂರಿ ಬಾಲಕೃಷ್ಣ 'ಅಖಂಡ' ಸಿನಿಮಾ ಎನ್ನುತ್ತಿವೆ ಮೆಗಾಸ್ಟಾರ್ ಫ್ಯಾಮಿಲಿಯ ಹತ್ತಿರದ ಮೂಲಗಳು.'ಅಖಂಡ' ಸಿನಿಮಾದಲ್ಲಿ ಹೀರೋ ಎಲಿವೇಶನ್ ಸೀನ್‌ಗಳು ಬಹಳ ಎತ್ತರಕ್ಕೆ ಚಿತ್ರವನ್ನು ತೆಗೆದುಕೊಂಡು ಹೋಗಿದೆ. 'ಅಖಂಡ' ಚಿತ್ರದ ಕಥೆ ರೋಟಿನ್ ಆಗಿದ್ದರು, ನಿರ್ದೇಶಕ ಬೋಯಪಾಟಿ ಸೀನು ಅವರು ಬಾಲಕೃಷ್ಣ ಅವರನ್ನು 'ಅಖಂಡ' ರೂಪದಲ್ಲಿ ತೋರಿಸಿದ ರೀತಿ ಮತ್ತು ಅದರ ಪ್ರೆಸೆಂಟೇಷನ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿ ಕಂಡಿದೆ. ಇಂಥ ಎಮೋಷನಲ್ ದೃಶ್ಯಗಳ ವಿಚಾರದಲ್ಲಿ 'ಆಚಾರ್ಯ'ತೀರಾ ಸಪ್ಪೆ ಎನಿಸುತ್ತದೆ ಅಂತ ಭಾವಿಸಿರುವ ಖುದ್ದು ಚಿರಂಜೀವಿ ಅವರೇ 'ಅಖಂಡ' ಮಾದರಿಯ ಎಮೋಷನ್ಸ್ ಕ್ಯಾರಿ ಮಾಡುವ ಒಂದಷ್ಟು ದೃಶ್ಯಗಳನ್ನು ಶೂಟ್ ಮಾಡಿ ಅಂತ ನಿರ್ದೇಶಕ ಕೊರಟಾಲ ಶಿವ ಅವರಿಗೆ ಸೂಚಿಸಿದ್ದಾರಂತೆ. ದೃಶ್ಯಗಳ ಮರು ಚಿತ್ರೀಕರಣದ ನಂತರ ಬಿಡುಗಡೆಯ ದಿನಾಂಕವನ್ನು ನಿಗದಿ ಪಡಿಸುವಂತೆ ಸೂಚಿಸಿದ್ದಾರಂತೆ. ಇದಕ್ಕೆ ನಿರ್ದೇಶಕ ಕೊರಟಾಲ ಶಿವ ಕೂಡ ಓಕೆ ಅಂದಿದ್ದಾರೆ ಅಂತ ಹೇಳುತ್ತಿದೆ ಟಾಲಿವುಡ್ ಮೂಲಗಳು.

ಬರೋಬ್ಬರಿ 25 ದಿನಗಳ ರಿ ಶೂಟ್?
ಮೆಗಾಸ್ಟಾರ್ ಅಭಿನಯದ 'ಆಚಾರ್ಯ' ಚಿತ್ರದಲ್ಲಿ ರಾಮ್ ಚರಣ್ ತೇಜ-ಪೂಜಾ ಹೆಗ್ಡೆ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಈ ಚಿತ್ರದ ಮರು ಚಿತ್ರೀಕರಣ ಒಂದಲ್ಲಾ, ಎರಡಲ್ಲಾ ಏಕಕಾಲಕ್ಕೆ 25 ದಿನಗಳ ಕಾಲ ರೀ ಶೂಟ್ ಮಾಡಲು ಹೊರಟಿದ್ದಾರೆ ಎಂಬುದು ಸಿನಿ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿ. ಚಿತ್ರವನ್ನು ರೀ ಶೂಟ್ ಮಾಡಿ ಫೆಬ್ರವರಿ 4 ರಂದು ತರುವುದು ಕಷ್ಟ ಎಂದು ಚಿರಂಜೀವಿ ಮತ್ತು ನಿರ್ಮಾಪಕರು ಭಾವಿಸಿದ್ದಾರೆ, ಆದ್ದರಿಂದ 'ಆಚಾರ್ಯ' ಬಿಡುಗಡೆ ದಿನಾಂಕವನ್ನು ಸ್ವಲ್ಪ ಮುಂದಕ್ಕೆ ತಳ್ಳಿ ಬಿಡುಗಡೆ ಮಾಡಬೇಕಾಗಿದೆ ಎಂಬುದು ಈಗ ಕೇಳಿಬರುತ್ತಿರುವ ಸುದ್ದಿ .

ಮಾರ್ಚ್ 25ಕ್ಕೆ ಬಿಡುಗಡೆ?
ಮೊದಲೇ ನಿಗದಿಯಾದಂತೆ ''ಆಚಾರ್ಯ' ಫೆಬ್ರವರಿ 4 ರಂದು ಇನ್ನೂ ಬಿಡುಗಡೆಯಾಗಲ್ಲ. ಚಿತ್ರೋದ್ಯಮದಲ್ಲಿ ಕೇಳಿಬರುತ್ತಿರುವ ಆಚಾರ್ಯ ಚಿತ್ರದ ಬಿಡುಗಡೆಯ ಹೊಸ ದಿನಾಂಕ ಮಾರ್ಚ್ 25. ಕೊರಟಾಲ ಶಿವ ಪ್ರಸ್ತುತ ಮಾಸ್ ಮತ್ತು ಕಮರ್ಷಿಯಲ್ ಅಂಶಗಳನ್ನು ಮತ್ತಷ್ಟು ಹೆಚ್ಚಿಸುವ ಮೂಲಕ 'ಆಚಾರ್ಯ'ರನ್ನು ರೂಪಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮಾರ್ಚ್ 25ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಅಂತ ಬಲ್ಲ ಮೂಲಗಳು ಹೇಳುತ್ತಿವೆ.

ಚಿರಂಜೀವಿಗೆ ಬೇಕಿದೆ ಮೆಗಾಹಿಟ್
2019 ರಲ್ಲಿ ಚಿರಂಜೀವಿಯಾಗಿ ನಟಿಸಿದ್ದ 'ಸೈರಾ ನರಸಿಂಹ ರೆಡ್ಡಿ' ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇದರೊಂದಿಗೆ ಮೆಗಾಸ್ಟಾರ್ 'ಆಚಾರ್ಯ' ಹೇಗಾದರೂ ಭರ್ಜರಿ ಬ್ಲಾಕ್ ಬಸ್ಟರ್ ಹೊಡೆಯುವ ತವಕದಲ್ಲಿದ್ದು, 'ಆಚಾರ್ಯ' ವಿಷಯದಲ್ಲಿ ಯಾವುದೇ ತರದ ಕಾಂಪ್ರಮೈಸ್ ಆಗಬಾರದು ಅಂತ ಚಿರಂಜೀವಿ ಎಂದುಕೊಂಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಜೊತೆ ಕಾಜಲ್ ಅಗರ್ವಾಲ್ ಮತ್ತು ರಾಮ್ ಚರಣ್ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಮತ್ತು ಕೆಲವೊಂದು ದೃಶ್ಯಗಳ ರೀಶೂಟ್ ನಡೆಯುತ್ತಿದೆ ಅಂತ ಹೇಳಲಾಗುತ್ತಿದೆ. ಕೊನಿಡೇಲ ಪ್ರೊಡಕ್ಷನ್ ಕಂಪನಿ, ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಶ್ರೀಮತಿ ಸುರೇಖಾ ಕೊನಿಡೇಲ ಉಪಸ್ಥಿತಿಯಲ್ಲಿ ನಿರಂಜನ್ ರೆಡ್ಡಿ ಮತ್ತು ಅನ್ವೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಅಪ್ಪ-ಮಗ
ತಂದೆ ಮೆಗಾಸ್ಟಾರ್ ಚಿರಂಜೀವಿ ಮಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಈಗ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಆಚಾರ್ಯ ಚಿತ್ರದ ನಂತರ 'ಗಾಡ್ ಫಾದರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಜೊತೆಗೆ 'ಬೋಳೆಶಂಕರ', 'mega 154' ಚಿತ್ರಗಳಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಇನ್ನು ರಾಮ್ ಚರಣ್ ತೇಜ ಜನವರಿ ಏಳರಂದು ಬಿಡುಗಡೆ ಆಗುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಮಹತ್ವಾಕಾಂಕ್ಷಿ 'ಆರ್ ಆರ್ ಆರ್' ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ದಿಲ್ ರಾಜು ನಿರ್ಮಾಣದಲ್ಲಿ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'RC15' ಚಿತ್ರದಲ್ಲೂ ನಟಿಸಿದ್ದು, ಅದರ ನಂತರ ಗೌತಮ್ ತಿರುಮೇನಿ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನು ಈ ಎರಡು ಚಿತ್ರಗಳ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಅಭಿನಯಿಸುತ್ತಾರೆ ಅಂತ ಹೇಳಲಾಗುತ್ತಿದೆ ಆದರೆ ಇದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟವಾದ ಮಾಹಿತಿ ಇಬ್ಬರು ಕಡೆಯಿಂದ ಬರುತ್ತಿಲ್ಲ.


Click it and Unblock the Notifications











