ಜನಸೇನಾನಿ ಪವನ್ ಕಲ್ಯಾಣ್ ಗೆಲುವಿಗೆ ಚಿರು, ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಪೀಠಾಪುರಂ ಕ್ಷೇತ್ರದಿಂದ ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪವರ್ ಸ್ಟಾರ್ ಕೊರಳಿಗೆ ವಿಜಯಮಾಲೆ ಬಿದ್ದಿದೆ. ವೈಎಸ್‌ಆರ್‌ಪಿ ಕಾಂಗ್ರೆಸ್ ಪಕ್ಷದ ವಂಗಾ ಗೀತಾ ಎದುರು ಪವರ್ ಗೆಲುವಿನ ನಗೆ ಬೀರಿದ್ದಾರೆ.
ಪವನ್ ಕಲ್ಯಾಣ್ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುತ್ತಿದ್ದಾರೆ. ಇನ್ನು ಜನಸೇನಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಹೋದರ ಚಿರಂಜೀವಿ, ಸೋದರ ಸಂಬಂಧಿ ಅಲ್ಲು ಅರ್ಜುನ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪವನ್ ಗೆಲುವನ್ನು ಕೊಂಡಾಡಿದ್ದಾರೆ.

ಸಹೋದರ ಚಿರಂಜೀವಿ ಟ್ವೀಟ್ ಮಾಡಿ "ಆತ್ಮೀಯ ಕಲ್ಯಾಣ್ ಬಾಬು.. ಎಲ್ಲಿ ಎದ್ದು ನಿಲ್ಲಬೇಕು, ಎಲ್ಲಿ ತಗ್ಗಿ ನಡೆಯಬೇಕು ಎಂದು ನಿನಗೆ ಗೊತ್ತು.ನೀನು ತಗ್ಗಿದೆ ಎಂದು ಯಾರೇ ಅಂದುಕೊಂಡರೂ ಅದು ಜನರ ಉನ್ನತಿಗಾಗಿ ಎಂದು ಸಾಧಿಸಿ ತೋರಿಸಿರುವ ನಿನ್ನನ್ನು ನೋಡಿದಾಗ ಸಹೋದರನಾಗಿ ಹೆಮ್ಮೆ ಎನಿಸುತ್ತದೆ. ನಿನ್ನ ಶ್ರಮ, ನಿನ್ನ ತ್ಯಾಗ, ನಿನ್ನ ಧ್ಯೇಯ ಮತ್ತು ನಿನ್ನ ಸತ್ಯವು ಜನರಿಗಾಗಿ ಎಂದು ಎಲ್ಲರೂ ನಿಮ್ಮನ್ನು ಹೊಗಳಿದಾಗ ನನ್ನ ಹೃದಯವು ಹಿಗ್ಗುತ್ತದೆ."
"ಈ ಅತ್ಯುತ್ತಮ ಸಾರ್ವಜನಿಕ ತೀರ್ಪು ರಾಜ್ಯದ ಭವಿಷ್ಯಕ್ಕಾಗಿ, ಜನರ ಕಲ್ಯಾಣಕ್ಕಾಗಿ ನಿಮ್ಮ ಕನಸುಗಳು ಮತ್ತು ಗುರಿಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ನಿಮಗೆ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇನೆ, ಆಶೀರ್ವದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ನೀವು ಪ್ರಾರಂಭಿಸಲಿರುವ ಈ ಹೊಸ ಅಧ್ಯಾಯದಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ. ನಾನು ಯಶಸ್ಸನ್ನು ಪ್ರಾಮಾಣಿಕವಾಗಿ ಆಶಿಸುತ್ತೇನೆ" ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
ಜನಸೇನಾ ಪಕ್ಷದ ಎದುರು ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಪರ ಅಲ್ಲು ಅರ್ಜುನ ಪ್ರಚಾರ ನಡೆಸಿದ್ದರು. ಇದು ಪವನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ನಾಗಬಾಬು ಸಹ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಪವನ್ ಗೆಲುವಿಗೆ ಅಲ್ಲು ಅರ್ಜುನ್ ಅಭಿನಂದಿಸಿದ್ದಾರೆ. "ಈ ಪ್ರಚಂಡ ವಿಜಯಕ್ಕೆ ಪವನ್ ಕಲ್ಯಾಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ವರ್ಷಗಳಿಂದ ಜನರ ಸೇವೆ ಮಾಡುವ ಬದ್ಧತೆ ಯಾವಾಗಲೂ ಹೃದಯ ಸ್ಪರ್ಶಿಯಾಗಿದೆ. ಜನರ ಸೇವೆಗಾಗಿ ನಿಮ್ಮ ಹೊಸ ಪಯಣಕ್ಕೆ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪವನ್ ಕಲ್ಯಾಣ್ ಸಹೋದರಿ ಪುತ್ರ ನಟ ಸಾಯಿ ಧರಂ ತೇಜ್ ಟ್ವೀಟ್ ಮಾಡಿ ಖಡಕ್ ಪೋಸ್ಟ್ ಮಾಡಿದ್ದಾರೆ. "ಹೇಳಿದ್ದ, ಮಾಡಿದ್ದಾನೆ. ನಮ್ಮನ್ನು ಯಾರೋ ತಡೆಯೋದು" ಎಂದು ಬರೆದುಕೊಂಡಿದ್ದಾರೆ.
ಪವನ್ ಕಲ್ಯಾಣ್ ಮತ್ತೊಬ್ಬ ಸಹೋದರ ನಾಗಬಾಬು ಕೂಡ ಜನಸೇನಾ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ. "ಈ ಗೆಲುವು ಹೊಸ ರಾಜಕೀಯ ತಿರುವು ಆಗಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಗೆಲುವು ಜನತೆಯ ಗೆಲುವು, ಜನಸೇನೆಯ ಗೆಲುವು, ದಾರ್ಶನಿಕ ಚಂದ್ರಬಾಬು ಅವರ ಗೆಲುವು, ಮಹಾನ್ ನಾಯಕ ನರೇಂದ್ರ ಮೋದಿಯವರ ಗೆಲುವು,ನಾಯಕನ ಕರೆಯೊಂದಿಗೆ ಬದಲಾವಣೆಗಾಗಿ ಸೇರುವ ಪ್ರತಿಯೊಬ್ಬ ನಾಗರಿಕನ ವಿಜಯ. ಮೈತ್ರಿ ಕೂಟದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬ ಕಾರ್ಯಕರ್ತರಿಗೆ, ಪ್ರತಿಯೊಬ್ಬ ಜನಸೈನಿಕರಿಗೆ ನನ್ನ ಧನ್ಯವಾದಗಳು ಮತ್ತು ಶುಭಾಶಯಗಳು" ಎಂದು ಪೋಸ್ಟ್ ಮಾಡಿದ್ದಾರೆ.
"ಆಂಧ್ರ ರಾಜಕೀಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಮ್ಮ ಜನಸೇನಾನಿ(ಪವನ್ ಕಲ್ಯಾಣ್)ಗೆ ಅಭಿನಂದನೆಗಳು. ನಿಮ್ಮ ಸ್ಥಿತಿಸ್ಥಾಪಕತ್ವ, ಕಠಿಣ ಪರಿಶ್ರಮ ಮತ್ತು ನಂಬಿಕೆ ಎಲ್ಲಕ್ಕಿಂತ ಹೆಚ್ಚಾಗಿ ನಿಂತಿದೆ.
ಮತ್ತು ಈ ರಾಜಕೀಯ ಪಯಣದಲ್ಲಿ ನಿಮ್ಮೊಂದಿಗೆ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ. ಆಂಧ್ರಪ್ರದೇಶಕ್ಕೆ ನೀವು ತರುವ ಪ್ರಗತಿ ಮತ್ತು ಸಮೃದ್ಧಿಯನ್ನು ಎದುರು ನೋಡುತ್ತಿದ್ದೇನೆ" ಎಂದು ನಾಗಬಾಬು ಪುತ್ರ ವರುಣ್ ತೇಜ್ ಚಿಕ್ಕಪ್ಪನನ್ನು ಅಭಿನಂದಿಸಿದ್ದಾರೆ.


Click it and Unblock the Notifications










