ಒಂದೇ ಚಿತ್ರದಲ್ಲಿ ಚಿರು-ವೆಂಕಿ; ಮತ್ತೊಂದು ಕಾಮೆಡಿ ಎಂಟರ್‌ಟೈನರ್ ಮುಹೂರ್ತ
ಅನಿಲ್ ರಾವಿಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಸುಗ್ಗಿ ಸಂಭ್ರಮದಲ್ಲೇ ಬಂದು ಸಕ್ಸಸ್ ಕಂಡಿತ್ತು. ಅಂದಾಜು 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದರ ಬೆನ್ನಲ್ಲೇ ಚಿರಂಜೀವಿ ಜೊತೆ ಅನಿಲ್ ರಾವಿಪುಡಿ ಸಿನಿಮಾ ಸುದ್ದಿ ಬಂದಿತ್ತು.
ಯುಗಾದಿ ಸಂಭ್ರಮದಲ್ಲಿ ಚಿರು- ಅನಿಲ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಿದೆ. ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯ Mega157 ಎಂದು ಕರೆಯಲಾಗುತ್ತಿದೆ. ಅಂದಹಾಗೆ ಇದು ಚಿರಂಜೀವಿ ನಟನೆಯ 157ನೇ ಸಿನಿಮಾ. 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ ವಿಕ್ಟರಿ ವೆಂಕಟೇಶ್ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

ಬರಹಗಾರ ವಿಜಯೇಂದ್ರ ಪ್ರಸಾದ್, ನಿರ್ಮಾಪಕ ಅಲ್ಲು ಅರವಿಂದ್, ನಿರ್ದೇಶಕ ರಾಘವೇಂದ್ರ ರಾವ್ ಸೇರಿದಂತೆ ಚಿತ್ರರಂಗದ ಗಣ್ಯರು Mega157 ಸಿನಿಮಾ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಇತ್ತೀಚೆಗೆ ಚಿರಂಜೀವಿ ಅವರಿಗೆ ಕಥೆ ಹೇಳಿ ಫೈನಲ್ ಮಾಡಿರುವುದಾಗಿ ಅನಿಲ್ ರಾವಿಪುಡಿ ಟ್ವೀಟ್ ಮಾಡಿದ್ದರು.
ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಅನಿಲ್ ರಾವಿಪುಡಿ ಸಿದ್ಧಹಸ್ತರು. 'ಪಟಾಸ್', 'ರಾಜಾ ದಿ ಗ್ರೇಟ್', 'F2', 'ಸರಿಲೇರು ನೀಕೆವ್ವರು', 'F3', 'ಭಗವಂತ್ ಕೇಸರಿ' ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಯಾವುದೇ ಲಾಜಿಕ್ ಇಲ್ಲದೇ ಗಂಭೀರವಾಗಿ ಯೋಚಿಸದೇ ನಕ್ಕು ಸುಮ್ಮನಾಗುವಂತಹ ಸಿನಿಮಾಗಳನ್ನು ಅನಿಲ್ ತೆರೆಗೆ ತಂದಿದ್ದಾರೆ. ಈ ಬಾರಿ ಚಿರಂಜೀವಿ ಜೊತೆಗೂ ಅಂಥದ್ದೇ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ.
ಇತ್ತೀಚೆಗೆ ಚಿರಂಜೀವಿ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ವಾಲ್ತೇರು ವೀರಯ್ಯ ಕೊಂಚಮಟ್ಟಿಗೆ ಗಮನ ಸೆಳೆದಿತ್ತು. ಆದರೆ ಆ ಚಿತ್ರದಲ್ಲಿ ರವಿತೇಜಾ ಕೂಡ ಮಿಂಚಿದ್ದರು. ಬಳಿಕ ಬಂದ 'ಭೋಳಾ ಶಂಕರ್' ಅಟ್ಟರ್ ಫ್ಲಾಪ್ ಆಗಿತ್ತು. ಸದ್ಯ 'ವಿಶ್ವಂಭರ' ಎಂಬ ಚಿತ್ರದಲ್ಲಿ ಚಿರು ಬಣ್ಣ ಹಚ್ಚಿದ್ದಾರೆ. ಆ ಬಳಿಕ ಅನಿಲ್ ರಾವಿಪುಡಿ ಸಿನಿಮಾಗೆ ಸೈ ಎಂದಿದ್ದಾರೆ.

ಚಿರಂಜೀವಿ ಅವರ ನಿಜವಾದ ಹೆಸರು ಶಿವಶಂಕರ್ ವರಪ್ರಸಾದ್. ಅಂದಹಾಗೆ ಹೊಸ ಚಿತ್ರದಲ್ಲಿ ಅವರ ಪಾತ್ರದ ಹೆಸರು ಅದೇ ಆಗಿರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇನ್ನು ಚಿರಂಜೀವಿ ಒಳ್ಳೆ ಕಾಮಿಡಿ ಟೈಮಿಂಗ್ ಇರುವ ನಟ. ದಶಕಗಳ ಹಿಂದೆಯೇ ತಮ್ಮ ಕಾಮಿಡಿಯಿಂದ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ ಅನಿಲ್ ಜೊತೆ ಅವರು ಕೈ ಜೋಡಿಸಿರುವುದು ಕುತೂಹಲ ಹೆಚ್ಚಿಸಿದೆ.
ಅನಿಲ್ ರಾವಿಪುಡಿ ಸಂಕ್ರಾಂತಿ ಸಂಭ್ರಮದಲ್ಲೇ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಬರ್ತಿದ್ದಾರೆ. ಹಾಗಾಗಿ ಮುಂದಿನ ಸಂಕ್ರಾಂತಿಗೆ Mega157 ತೆರೆಗೆ ತರುವ ಪ್ರಯತ್ನ ನಡೀತಿದೆ. ಸಾಹು ಗರಪಾಟಿ ಹಾಗೂ ಚಿರು ಪುತ್ರಿ ಸುಶ್ಮಿತಾ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ.
ಅನಿಲ್ ನಿರ್ದೇಶನದ 8 ಸಿನಿಮಾಗಳಲ್ಲಿ ವೆಂಕಿ 3 ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನ್ ಸಖತ್ ಕ್ಲಿಕ್ ಆಗಿದೆ. Mega157 ಚಿತ್ರದಲ್ಲಿ ಕೂಡ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು 90ರ ದಶಕದಲ್ಲಿ ವೆಂಕಟೇಶ್ ನಟನೆಯ 'ಚಂಟಿ' ಚಿತ್ರಕ್ಕೆ ಚಿರು ಕ್ಲಾಪ್ ಮಾಡಿದ್ದರು. ಇದೀಗ ಚಿರು ಚಿತ್ರಕ್ಕೆ ವೆಂಕಟೇಶ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಮಾಸ್ ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಫ್ಯಾಮಿಲಿ ಎಲ್ಲಾ ಕೂತು ನೋಡುವಂತಕ ಕಾಮೆಡಿ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಕೆಲವರ ಆಸೆ ಆಗಿತ್ತು. ಇದೀಗ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಮಹೇಶ್ ಬಾಬು, ವೆಂಕಟೇಶ್ ಹಾಗೂ ಬಾಲಕೃಷ್ಣಗೆ ಹಿಟ್ ಕೊಟ್ಟಿರುವ ಅನಿಲ್ ಈ ಬಾರಿ ಚಿರಂಜೀವಿ ಜೊತೆಗೂ ಮ್ಯಾಜಿಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
'ವಿಶ್ವಂಭರ' ಚಿತ್ರಕ್ಕಿಂತ ಮುನ್ನ Mega157 ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಫ್ಯಾಂಟಸಿ ಎಂಟರ್‌ಟೈನರ್ 'ವಿಶ್ವಂಭರ' ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಹಾಗಾಗಿ ಈ ವರ್ಷವೇ ಬಿಡುಗಡೆ ಮಾಡುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











