'ಜಗದೇಕ ವೀರುಡು ಅತಿಲೋಕ ಸುಂದರಿ'-2 ಕನ್ಫರ್ಮ್; ಹೀರೊ ರಾಮ್‌ಚರಣ್, ನಾಯಕಿ ಜಾನ್ವಿ ಅಲ್ವಾ?
ತೆಲುಗು ಚಿತ್ರರಂಗದ ಸೂಪರ್ ಸಿನಿಮಾ 'ಜಗದೇಕ ವೀರುಡು ಅತಿಲೋಕ ಸುಂದರಿ'. 90ರ ದಶಕದ ಈ ಬ್ಲಾಕ್‌ಬಸ್ಟರ್ ಸಿನಿಮಾ ಈ ವಾರ ತ್ರೀಡಿಯಲ್ಲಿ ರೀ-ರಿಲೀಸ್ ಆಗುತ್ತಿದೆ. ಮೆಗಾ ಫ್ಯಾನ್ಸ್ ಸಂಭ್ರಮ ಡಬಲ್ ಆಗಿದೆ. ಚಿರಂಜೀವಿ, ಶ್ರೀದೇವಿ ನಟನೆಯ ಈ ಫ್ಯಾಂಟಸಿ ಸಿನಿಮಾ ಸೀಕ್ವೆಲ್ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
ಬಹಳ ದಿನಗಳಿಂದ 'ಜಗದೇಕ ವೀರುಡು ಅತಿಲೋಕ ಸುಂದರಿ'-2 ಮಾಡಬೇಕು ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಚಿರಂಜೀವಿ ಪುತ್ರ ರಾಮ್‌ಚರಣ್ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕ, ನಾಯಕಿಯಾಗಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಶ್ರೀದೇವಿ ಜಾಗವನ್ನು ಜಾನ್ವಿ ತುಂಬಲು ಸಾಧ್ಯವೇ ಇಲ್ಲ ಎನ್ನವುದು ಬಹಳ ಜನರ ಅಭಿಪ್ರಾಯ. ಇದೇ ಕಾರಣಕ್ಕೆ ಸೀಕ್ವೆಲ್ ಮಾಡುವ ದುಸ್ಸಾಹಸ ಬೇಡ ಎಂದು ಕೆಲವರು ಹೇಳುತ್ತಿದ್ದಾರೆ.

'ಜಗದೇಕ ವೀರುಡು ಅತಿಲೋಕ ಸುಂದರಿ' ರೀ-ರಿಲೀಸ್ ಸಂದರ್ಭದಲ್ಲಿ ಸೀಕ್ವೆಲ್ ಮಾಡುವ ಬಗ್ಗೆ ಚಿರಂಜೀವಿ, ರಾಮ್‌ಚರಣ್ ಪ್ರತಿಕ್ರಿಯಿಸಿದ್ದಾರೆ. ನಾಗ್ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಶ್ವಿನಿ ದತ್ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರ ನಿರ್ಮಾಣ ಮಾಡಿದ್ದರು. ಅವರ ಮಕ್ಕಳು ಸೀಕ್ವೆಲ್ ನಿರ್ಮಿಸಬೇಕು ಎಂದು ಚಿರು ಹೇಳಿದ್ದಾರೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಕೆ. ರಾಘವೇಂದ್ರ ರಾವ್ ನಿರ್ದೇಶನದಲ್ಲಿ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾ ನಿರ್ಮಾಣವಾಗಿತ್ತು. ಅವತ್ತಿನ ಕಾಲಕ್ಕೆ ಅಂದಾಜು 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮ 15 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಚಿರು- ಶ್ರೀದೇವಿ ಜೋಡಿ ಮೋಡಿ, ಇಳಯರಾಜ ಸಂಗೀತವನ್ನು ಇವತ್ತಿಗೂ ಸಿನಿರಸಿಕರು ಮರೆತ್ತಿಲ್ಲ. ಮೆಗಾಸ್ಟಾರ್ ಸಿನಿಜೀವನದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ಇದು.
1990ರ ಮೇ 9ರಂದು ಸಿನಿಮಾ ತೆರೆಗೆ ಬಂದಿತ್ತು. ಸರಿಯಾಗಿ 35 ವರ್ಷಗಳ ಬಳಿಕ ಅದೇ ದಿನ ಮತ್ತೆ ಸಿನಿಮಾ ಹೊಸ ರೂಪದಲ್ಲಿ ರೀ-ರಿಲೀಸ್ ಆಗುತ್ತಿರುವುದು ವಿಶೇಷ. ಸಾಮಾನ್ಯವಾಗಿ ಹಳೇ ಸಿನಿಮಾಗಳನ್ನು ಡಿಜಿಟಲ್ ರೂಪದಲ್ಲಿ ತೆರೆಗೆ ತರುತ್ತಾರೆ. ಆದರೆ 2ಡಿಯಲ್ಲಿರುವ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರವನ್ನು 3ಡಿಗೆ ಬದಲಿಸಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.

ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಸ್ವರ್ಗದ ಇಂದ್ರನ ಮಗಳು ಇಂದ್ರಜಾ (ಶ್ರೀದೇವಿ) ಭೂಮಿಯ ಮೇಲಿನ ಮಾನಸ ಸರೋವರ ನೋಡಲು ಬರುತ್ತಾಳೆ. ಆದರೆ ಹಿಂತಿರುಗುವಾಗ ತನ್ನ ಕೈ ಬೆರಳಿನಲ್ಲಿದ್ದ ಉಂಗುರವನ್ನು ಕಳೆದುಕೊಳ್ಳುತ್ತಾರೆ. ಆ ಉಂಗುರ ಇಲ್ಲೇ ಆಕೆ ಸ್ವರ್ಗಕ್ಕೆ ಮರಳಿ ಹೋಗಲು ಸಾಧ್ಯವಿಲ್ಲ. ಆ ಉಂಗುರು ರಾಜುಗೆ (ಚಿರಂಜೀವಿ) ಸಿಗುತ್ತದೆ. ಅದನ್ನು ಪಡೆಯಲು ರಾಜು ಮನೆಗೆ ಬರುವ ಇಂದ್ರಜ, ಆತ ಸಾಕಿ ಸಲಹುವ ಮಕ್ಕಳ ಜೊತೆ ಸೇರಿ ಮಗುವಾಗುತ್ತಾಳೆ. ಕೊನೆಗೆ ರಾಜುನ ಪ್ರೀತಿಸಿ ಇಂದ್ರಜ ಭೂಲೋಕದಲ್ಲೇ ಉಳಿಯುವ ಕಥೆ ಚಿತ್ರದಲ್ಲಿದೆ.
ಸಿಂಪಲ್ ಕಥೆಯನ್ನು ರಾಘವೇಂದ್ರ ರಾವ್ ಅಂಡ್ ಬಹಳ ಸೊಗಸಾಗಿ ತೆರೆಗೆ ತಂದಿತ್ತು. ಇಳಯರಾಜ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿತ್ತು. ಶ್ರೀದೇವಿ ನಿಜಕ್ಕೂ ಅತಿಲೋಕ ಸುಂದರಿಯಂತೆ ತೆರೆಮೇಲೆ ಕಮಾಲ್ ಮಾಡಿದ್ದರು. ಅವತ್ತಿನ ಕಾಲಕ್ಕೆ ಚಿರಂಜೀವಿಗೆ 25 ಲಕ್ಷ ರೂ. ಹಾಗೂ ಶ್ರೀದೇವಿ 20 ಲಕ್ಷ ರೂ. ಸಂಭಾವನೆ ಸಿಕ್ಕಿತ್ತು. 6 ರೂಪಾಯಿ ಇದ್ದ ಟಿಕೆಟ್ ಅನ್ನು 200 ರೂ.ಗೆ ಬ್ಲಾಕ್‌ನಲ್ಲಿ ಖರೀದಿಸಿ ಸಿನಿಮಾ ನೋಡಿದ ಅಭಿಮಾನಿಗಳು ಇದ್ದಾರೆ.
ಸೀಕ್ವೆಲ್ ಮಾಡಿದರೆ ಚಿರಂಜೀವಿ ಜಾಗದಲ್ಲಿ ರಾಮ್‌ಚರಣ್ ನಟಿಸಬಹುದು. ಆದರೆ ಶ್ರೀದೇವಿ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಖುದ್ದು ನಿರ್ದೇಶಕ ರಾಘವೇಂದ್ರ ರಾವ್ ಹೇಳಿದ್ದಾರೆ. ಜಾನ್ವಿ ಕಪೂರ್ ಬದಲು ತಮನ್ನಾ ಅವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ನಾಗ್ ಅಶ್ವಿನ್ ಮನಸ್ಸು ಮಾಡಿದರೆ 'ಜಗದೇಕ ವೀರುಡು ಅತಿಲೋಕ ಸುಂದರಿ'-2 ಚಿತ್ರದಲ್ಲಿ ನಾನು ನಟಿಸೋಕೆ ಸಿದ್ಧ ಎಂದು ರಾಮ್‌ಚರಣ್ ಹೇಳಿದ್ದಾರೆ. ಹಾಗಾಗಿ ಮುಂದೆ ಸೀಕ್ವೆಲ್ ಬರುತ್ತಾ ಕಾದು ನೋಡಬೇಕಿದೆ.


Click it and Unblock the Notifications










