ಚಿರಂಜೀವಿ ಮೇಲೆ ಮೊಟ್ಟೆ: ಟಾಲಿವುಡ್ ಮೆಗಾಸ್ಟಾರ್‌ಗೆ ಇದೆಂಥಾ ಅವಮಾನ?
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕನ್ನಡ ಸಿನಿರಸಿಕರಿಗೂ ಚಿರ ಪರಿಚಿತ. ಕನ್ನಡದ 'ಸಿಪಾಯಿ' ಹಾಗೂ 'ಶ್ರೀಮಂಜುನಾಥ' ಸಿನಿಮಾಗಳಲ್ಲಿ ಚಿರು ಬಣ್ಣ ಹಚ್ಚಿದ್ದರು. ಪೊಲೀಸ್ ಕಾನ್ಸ್‌ಟೇಬಲ್ ಮಗನಾದ ಚಿರು ತಮ್ಮದೇ ಪರಿಶ್ರಮದಿಂದ ಬೆಳೆದು ಬಂದವರು. ಎನ್‌ಟಿಆರ್‌ರಂತಹ ಸೂಪರ್ ಸ್ಟಾರ್‌ಗಳ ಎದುರು ಗೆದ್ದು ನಿಂತವರು.

ಟಾಲಿವುಡ್‌ನಲ್ಲಿ ಮೆಗಾಸ್ಟಾರ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿರು ಹಾದಿಯಲ್ಲೇ ಫ್ಯಾಮಿಲಿಯಿಂದ ಏಳೆಂಟು ಜನ ಸಿನಿಮಾ ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಮೆಗಾ ಫ್ಯಾಮಿಲಿ ಈ ತೆಲುಗು ಚಿತ್ರರಂಗದ ಆಧಾರ ಸ್ತಂಭ ಎನ್ನುವಂತಾಗಿದೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಚಿರು ಕಮಾಲ್ ಮಾಡಿದ್ದಾರೆ. ತಮ್ಮದೇ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಡ್ಯಾನ್ಸ್‌ನಿಂದ ಚಿರು ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ. ತಮ್ಮ ಸೇವಾ ಕಾರ್ಯಕ್ರಮಗಳಿಂದಲೂ ಮೆಗಾಸ್ಟಾರ್ ಎಲ್ಲರಿಗೂ ಹತ್ತಿರವಾಗಿದ್ದಾರೆ. ಈ ಏಳುಬೀಳಿನ ಹಾದಿಯಲ್ಲಿ ಚಿರಂಜೀವಿ ಕೂಡ ಸಾಕಷ್ಟು ಅವಮಾನ, ಅಪಮಾನ ಎದುರಿಸಿದ್ದಾರೆ.

ಗಾಯಕಿ ಸ್ಮಿತಾ ನಡೆಸಿಕೊಡುವ 'ನಿಜಂ ವಿಥ್ ಸ್ಮಿತಾ' ಟಾಕ್ ಶೋನಲ್ಲಿ ನಟ ಚಿರಂಜೀವಿ ಭಾಗಿ ಆಗಿದ್ದಾರೆ. ಆ ಶೋನ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಶೋನಲ್ಲಿ ತಮ್ಮ ಸಿನಿಮಾ ಜೀವನ ಹಾಗೂ ನಿಜ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಚಿರು ಹಂಚಿಕೊಂಡಿದ್ದಾರೆ. ನೀವು ಚಿತ್ರರಂಗದಲ್ಲಿ ಬೆಳೆದು ಬರುವ ಹಾದಿಯಲ್ಲಿ ಏನಾದರೂ ಅವಮಾನಗಳನ್ನು ಎದುರಿಸಿದ್ದೀರಾ ಎನ್ನುವ ಪ್ರಶ್ನೆಗೆ "ಇಂಡಸ್ಟ್ರಿಯಲ್ಲಿ ಬೆಳೆಯುತ್ತಿದ್ದ ಒಮ್ಮೆ ಜಗಿತ್ಯಾಲ ಜಿಲ್ಲೆಗೆ ಹೋಗಿದ್ದೆ. ಅಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದರು. ಮೇಲಿನಿಂದ ಹೂವಿನ ಮಳೆ ಸುರಿಸಿದರು. ಆದರೆ ಕೊಂಚ ಮುಂದೆ ಹೋಗುತ್ತಿದ್ದಂತೆ ಕೆಲವರು ಮೊಟ್ಟೆಗಳನ್ನು ಎಸೆದರು" ಎಂದಿದ್ದಾರೆ.

ಸದ್ಯ 'ನಿಜಂ ವಿಥ್ ಸ್ಮಿತಾ' ಶೋ ಪ್ರೋಮೊ ವೈರಲ್ ಆಗಿದೆ. ಇನ್ನು ಶೋನಲ್ಲಿ ಚಿರಂಜೀವಿ ಮೊದಲ ಕ್ರಶ್, ಸ್ಟಾರ್‌ಡಮ್ ಬಗ್ಗೆ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ಧಾರೆ. ಇನ್ನು 'ವಾಲ್ತೇರು ವೀರಯ್ಯ' ಸಕ್ಸಸ್ ಅಲೆಯಲ್ಲಿ ಚಿರು ತೇಲುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 'ಆಚಾರ್ಯ' ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ಚಿರು 'ವಾಲ್ತೇರು ವೀರಯ್ಯ' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಫೆಬ್ರವರಿ 27ಕ್ಕೆ ಓಟಿಟಿಗೆ ಬರಲಿದೆ.


Click it and Unblock the Notifications











