ಚಿರಂಜೀವಿ ಸಮಾಜ ಸೇವೆಗೆ ಸಾಟಿಯಿಲ್ಲ, ಜನತಾ ಆಸ್ಪತ್ರೆ ನಿರ್ಮಾಣಕ್ಕೆ ಮುನ್ನುಡಿ
ಮೆಗಾಸ್ಟಾರ್ ಚಿರಂಜೀವಿ ಅತ್ಯುತ್ತಮ ನಟರಷ್ಟೆ ಅಲ್ಲ, ಮಾನವೀಯತೆಯುಳ್ಳ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ.
ಬ್ಲಡ್ ಬ್ಯಾಂಕ್, ಐ ಬ್ಯಾಂಕ್‌ಗಳ ಮೂಲಕ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಕ್ರಾಂತಿಯನ್ನೇ ಮಾಡಿದವರು ಚಿರಂಜೀವಿ. ಇತ್ತೀಚೆಗೆ ಕೊರೊನಾ ಸಮಯದಲ್ಲಿ ಸಹ ದೊಡ್ಡ ಮಟ್ಟದ ಸೇವೆಯನ್ನು ಚಿರಂಜೀವಿ ಮಾಡಿದರು. ಇವುಗಳು ಮಾತ್ರವೇ ಅಲ್ಲದೆ ಯಾರೇ ಸಹಾಯ ಕೇಳಿ ಬಂದರೆ ಅವರನ್ನು ಬರಿಗೈಲಿ ಕಳಿಸಿದ್ದಿಲ್ಲ ಚಿರು. ಅದರಲ್ಲಿಯೂ ಸಿನಿಮಾ ಮಂದಿಯ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಾರೆ.
ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾ ಪ್ರಚಾರ ಸಂಬಂಧ ಆಯೋಜಿಸಿದ್ದ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಚಿರಂಜೀವಿ ತಮ್ಮ ಸಮಾಜ ಸೇವಾ ಕಾರ್ಯಗಳ ಬಗ್ಗೆ ಮಾತನಾಡುತ್ತಾ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ 10 ಬೆಡ್‌ಗಳ ಒಂದು ಆಸ್ಪತ್ರೆಯನ್ನು ನಿರ್ಮಿಸಿ ಜನ ಸೇವೆಗೆ ನೀಡಿರುವ ಚಿರಂಜೀವಿ ಜನತಾ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮಹದಾಸೆಯನ್ನು ಹೊಂದಿದ್ದಾರಂತೆ.
ಈಗ ನಿರ್ಮಾಣ ಮಾಡಿರುವ ಆಸ್ಪತ್ರೆಯಲ್ಲಿ ಸಿನಿಮಾ ಕಾರ್ಮಿಕರಿಗೆ, ಜೂನಿಯರ್ ಆರ್ಟಿಸ್ಟ್‌ಗಳಿಗೆ ಬಹುತೇಕ ಉಚಿತ ಚಿಕಿತ್ಸೆ ನಡೆಯುತ್ತಿದೆ. ಜನತಾ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕೆಂಬುದು ಚಿರಂಜೀವಿ ಆಸೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಚಿರಂಜೀವಿ.
ಕೊರೊನಾ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಚಿರಂಜೀವಿ ವಿತರಣೆ ಮಾಡಿದ್ದರು. ಜೊತೆಗೆ ಸಿನಿಮಾ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಿದ್ದರು. ಎರಡು ತೆಲುಗು ರಾಜ್ಯಗಳ ಸಿಎಂಗಳ ಬಳಿ ಚರ್ಚಿಸಿ ಸಿನಿಮಾ ಕಾರ್ಮಿಕರಿಗೆ ಅಗತ್ಯ ನೆರವು ದೊರಕುವಂತೆ ಕಾಳಜಿವಹಿಸಿದ್ದರು.
ಚಿರಂಜೀವಿ ಸಕ್ರಿಯ ರಾಜಕೀಯದಲ್ಲಿಯೂ ಇದ್ದರು. ತಮ್ಮದೇ ಪಕ್ಷ ಕಟ್ಟಿ ಚುನಾವಣೆ ಸ್ಪರ್ಧಿಸಿದ್ದರು, ಸಂಸದರು ಸಹ ಆದರು ಆದರೆ ರಾಜಕೀಯದಲ್ಲಿ ಹೆಚ್ಚು ಯಶಸ್ವಿ ಆಗಿಲಿಲ್ಲ. ಹಾಗಾಗಿ ಪ್ರಸ್ತುತ ರಾಜಕೀಯದಿಂದ ದೂರ ಉಳಿದಿದ್ದಾರೆ ಚಿರು. ಇನ್ನು ಮುಂದೆಯೂ ರಾಜಕೀಯದಿಂದ ದೂರವೇ ಇರುವುದಾಗಿ ಚಿರಂಜೀವಿ ಹೇಳಿದ್ದಾರೆ.
ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಏಪ್ರಿಲ್ 29 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಚಿರು ಜೊತೆಗೆ ಪುತ್ರ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ರಾಮ್ ಚರಣ್ ತೇಜ. ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.


Click it and Unblock the Notifications











