Acharya Trailer : 'ಆಚಾರ್ಯ' ಟ್ರೇಲರ್ ಬಿಡುಗಡೆ, ಅಪ್ಪ ಮಗನ ಸಖತ್ ಆಕ್ಷನ್
ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ತೇಜ ಒಟ್ಟಾಗಿ ನಟಿಸಿರುವ 'ಆಚಾರ್ಯ' ಸಿನಿಮಾದ ಟ್ರೇಲರ್ ಬಿಡುಗಡೆ ಅಗಿದ್ದು, ಭರಪೂರ ಆಕ್ಷನ್ ಭರಿತ ಮನೊರಂಜನಾತ್ಮಕ ಸಿನಿಮಾ ಇದಾಗಿರುವ ಭರವಸೆಯನ್ನು ಟ್ರೇಲರ್ ಮೂಡಿಸುತ್ತಿದೆ.
ಈ ಹಿಂದೆ ರಾಮ್ ಚರಣ್ ತೇಜ ನಟಿಸಿರುವ ಕೆಲವು ಸಿನಿಮಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದರಾದರೂ, ಕೇವಲ ಒಂದು ಹಾಡು, ಒಂದು ಫೈಟ್ ದೃಶ್ಯದಲ್ಲಿ ಅತಿಥಿ ಪಾತ್ರವಾಗಿ ಮಾತ್ರವೇ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅಪ್ಪ-ಮಗ ಇಬ್ಬರೂ ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಆಚಾರ್ಯ' ಸಿನಿಮಾದ ಟ್ರೇಲರ್‌ನಿಂದ ತಿಳಿದು ಬರುತ್ತಿರುವುದೇನೆಂದರೆ ರಾಮ್ ಚರಣ್ ಹಾಗೂ ಸಂಗಡಿಗರು ಐತಿಹಾಸಿಕ, ಶಕ್ತಿಯುತ ದೇವಾಲಯವುಳ್ಳ ಹಳ್ಳಿಯಲ್ಲಿ ವಾಸವಿರುವ ಸಾಮಾನ್ಯ ಜನರಾಗಿದ್ದು, ದೇವಾಲಯದ ಆಸ್ತಿ ಮೇಲೆ ಕಣ್ಣು ಬೀಳುವ ವಿಲನ್‌ಗಳು ಹಳ್ಳಿಗರ ಮೇಲೆ ದೌರ್ಜನ್ಯ ಮಾಡುತ್ತಾರೆ. ಆಗ ಆ ಹಳ್ಳಿಗರನ್ನು ತಡೆಯಲು ನಟ ಚಿರಂಜಿವಿ ಆಗಮನವಾಗುತ್ತದೆ. ದುಷ್ಟರ ವಿರುದ್ಧ ಹೋರಾಡುವ ರಾಮ್ ಚರಣ್ ಬಲಿಯಾದ ಬಳಿಕ ರಾಮ್ ಚರಣ್ ಸ್ಥಾನ ತುಂಬಲು ಚಿರಂಜೀವಿ ಬರುತ್ತಾರೆಯೇ ಎಂಬ ಅನುಮಾನವೂ ಟ್ರೇಲರ್ ನೋಡಿದರೆ ಬರುತ್ತಿದೆ.

ರಾಮ್ ಚರಣ್ ಸಿದ್ದ ಪಾತ್ರದಲ್ಲಿ ನಟಿಸಿದ್ದು, ಚಿರಂಜೀವಿ ಹಾಗೂ ರಾಮ್ ಚರಣ್ ನಕ್ಸಲೈಟ್ ಗುಂಪಿಗೆ ಸೇರಿದವರಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಫೈಟ್ ಮಾಡುತ್ತಿರುವ ದೃಶ್ಯಗಳು, ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸಿನಿಮಾದಲ್ಲಿ ಇರಲಿದ್ದು, ಅವುಗಳ ಸಣ್ಣ ಝಲಕ್ ಟ್ರೇಲರ್‌ನಲ್ಲಿ ಸಹ ಇದೆ. ಒಟ್ಟಾರೆ ಈ ಸಿನಿಮಾ ಮೆಗಾಸ್ಟಾರ್ ಕುಟುಂಬದ ಅಭಿಮಾನಿಗಳಿಗೆ ಹಬ್ಬವಾಗಿರುವುದಂತೂ ಪಕ್ಕಾ.
ಟ್ರೇಲರ್‌ನಲ್ಲಿ ರಾಮ್ ಚರಣ್, ಪೂಜಾ ಹೆಗ್ಡೆ, ಚಿರಂಜೀವಿ, ವಿಲನ್ ಪಾತ್ರದಲ್ಲಿ ನಟಿಸಿರುವ ಸೋನು ಸೂದ್ ಎಲ್ಲರೂ ಇದ್ದಾರೆ. ಆದರೆ ಸಿನಿಮಾದ ನಾಯಕಿ ಕಾಜಲ್ ಅಗರ್ವಾಲ್ ಎಲ್ಲೂ ಕಾಣುವುದಿಲ್ಲ.
ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಸ್ವತಃ ರಾಮ್ ಚರಣ್ ತೇಜ. 'ಆಚಾರ್ಯ' ಸಿನಿಮಾವು ಏಪ್ರಿಲ್ 29 ರಂದು ತೆರೆಗೆ ಬರಲಿದೆ.


Click it and Unblock the Notifications











