twitter
    For Quick Alerts
    ALLOW NOTIFICATIONS  
    For Daily Alerts

    ಗೆದ್ದು ಬಂದ ಮೆಗಾಸ್ಟಾರ್: ಜಗನ್ ಮನಸ್ಸು ಬದಲಾಯಿಸಿದ ಚಿರಂಜೀವಿ

    |

    ಆಂಧ್ರ ಪ್ರದೇಶ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಕಳೆದ ಕೆಲ ತಿಂಗಳುಗಳಿಂದಲೂ ತೀವ್ರ ತಿಕ್ಕಾಟ ನಡೆಯುತ್ತಿದೆ. ಜಗನ್ ಸರ್ಕಾರವು ಆಂಧ್ರ ಪ್ರದೇಶದಲ್ಲಿ ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿರುವ ಕಾರಣ ತೆಲುಗು ಚಿತ್ರರಂಗ ಹಾಗೂ ಆಂಧ್ರದ ಚಿತ್ರಮಂದಿರ ಮಾಲೀಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಟಿಕೆಟ್ ದರ ಇಳಿಕೆ ವಿಷಯ ಆಂಧ್ರ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಪ್ರತಿಷ್ಠೆ ಪ್ರಶ್ನೆಯಾಗಿ ಬೆಳೆದು, ಚಿತ್ರರಂಗದವರು ಸರ್ಕಾರದ ವಿರುದ್ಧವೂ, ಸರ್ಕಾರದ ಶಾಸಕರು, ಮಂತ್ರಿಗಳು ಚಿತ್ರರಂಗದ ವಿರುದ್ಧ ಹಾಗೂ ಚಿತ್ರರಂಗದ ಪ್ರಮುಖರ ವಿರುದ್ಧ ಪ್ರತಿದಿನ ವಾಗ್ದಾಳಿ ನಡೆಸುವುದು ಕೆಲವು ತಿಂಗಳುಗಳಿಂದಲೂ ಸಾಗುತ್ತಲೇ ಬಂದಿತ್ತು.

    ಆದರೆ ಕೊನೆಗೆ ಮಧ್ಯ ಪ್ರವೇಶಿಸಿದ ತೆಲುಗು ಚಿತ್ರರಂಗದ ಹಿರಿಯ ಮೆಗಾಸ್ಟಾರ್ ಚಿರಂಜೀವಿ ಇಂದು ಜಗನ್ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿ ಭೋಜನ ಕೂಟದಲ್ಲಿ ಪಾಲ್ಗೊಂಡು ಚಿತ್ರರಂಗದ ಸಮಸ್ಯೆ, ಟಿಕೆಟ್ ದರ ತಗ್ಗಿಸುವುದರಿಂದ ಭವಿಷ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಗನ್ ಮನವೊಲಿಸಿದ್ದಾರೆ. ಚಿರಂಜೀವಿ ಮಾತುಗಳಿಗೆ ಮಣಿದಿರುವ ಜಗನ್, ಹೊಸ ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

    ಮನೊರಂಜನಾ ವಿಭಾಗ ವಿಶೇಷವಾಗಿ ಎಕ್ಸಿಬಿಟರ್ಸ್‌ ವಿಷಯದಲ್ಲಿ ಈಗ ಸರ್ಕಾರ ಹೊರಡಿಸಿರುವ ಆದೇಶ ಸಂಖ್ಯೆ 35 ಅನ್ನು ರದ್ದು ಮಾಡುವುದಾಗಿ ಹೇಳಿರುವ ಜಗನ್, ಹೊಸ ಆದೇಶದ ಕರಡನ್ನು ತಯಾರು ಮಾಡಿ ಅದನ್ನು ಜಾರಿಗೊಳಿಸುವ ಮುನ್ನ ನಿಮಗೆ ತೋರಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಟ ಚಿರಂಜೀವಿಗೆ ಮಾತು ನೀಡಿದ್ದಾರೆ. ಜಗನ್ ಭೇಟಿ ಬಳಿಕ ಈ ವಿಷಯವನ್ನು ಚಿರಂಜೀವಿ ಮಾಧ್ಯಮಗಳಿಗೆ ತಿಳಿಸಿದರು.

    ಎರಡೂ ಆಯಾಮದಿಂದ ಚರ್ಚೆ ನಡೆಸಿ ತೀರ್ಮಾನ

    ಎರಡೂ ಆಯಾಮದಿಂದ ಚರ್ಚೆ ನಡೆಸಿ ತೀರ್ಮಾನ

    ''ನಾನು ಒಂದು ಕಡೆಯಿಂದ ನಿರ್ಣಯವ ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಎರಡೂ ಕಡೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸರ್ಕಾರದ ಬಗ್ಗೆ ಸಿನಿಮಾ ರಂಗಕ್ಕೆ ಅಸಮಾಧಾನ, ಅನುಮಾನ ಬೇಡ'' ಎಂಬ ಭರವಸೆಯನ್ನು ಜಗನ್ ನೀಡಿದರು. ಅವರ ಮಾತುಗಳು, ಅವರು ಅವರ ಕುಟುಂಬ ನನ್ನನ್ನು ನಡೆಸಿಕೊಂಡ ರೀತಿ ನನಗೆ ತೃಪ್ತಿ ತಂದಿತು. ಚಿತ್ರರಂಗದ ಸಮಸ್ಯೆ ಇತ್ಯರ್ಥವಾಗುತ್ತದೆ ಎಂಬ ನಂಬಿಕೆ ನನಗೆ ಮೂಡಿತು'' ಎಂದಿದ್ದಾರೆ ಚಿರಂಜೀವಿ.

    ಸಿನಿಮಾರಂಗದ ಸಮಸ್ಯೆಗಳನ್ನು ಅರ್ಥ ಮಾಡಿಸುವ ಯತ್ನ

    ಸಿನಿಮಾರಂಗದ ಸಮಸ್ಯೆಗಳನ್ನು ಅರ್ಥ ಮಾಡಿಸುವ ಯತ್ನ

    ''ಮೇಲ್ನೋಟಕ್ಕೆ ಕಾಣಿಸುವಂತೆ ಸಿನಿಮಾ ರಂಗ ವರ್ಣಮಯ ಅಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಳೆದ ಲಾಕ್‌ಡೌನ್‌ನಲ್ಲಿ ಅದರಲ್ಲಿಯೂ ಎರಡನೇ ಅಲೆಯ ಸಂದರ್ಭದಲ್ಲಿ ಚಿತ್ರರಂಗವನ್ನು ನಂಬಿಕೊಂಡ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸಿವೆ ಎಂಬುದನ್ನು ಜಗನ್ ಅವರಿಗೆ ಮನವರಿಕೆ ಮಾಡಿಕೊಟ್ಟೆ. ಮನೋರಂಜನೆ ಎಂಬುದು ಎಲ್ಲ ವರ್ಗದವರಿಗೂ ಸುಲಭವಾಗಿ ಸಿಗುವಂತೆ ಆಗಬೇಕು ಎಂಬುವ ಸದುದ್ದೇಶದಿಂದಲೇ ತಾವು ಟಿಕೆಟ್ ದರಗಳ ಬಗ್ಗೆ ಆದೇಶ ಹೊರಡಿಸಿದ್ದಾಗಿ ಜಗನ್ ಹೇಳಿದರು. ಅವರ ಕಾಳಜಿಯನ್ನು ಸಹ ನಾವು ಅನುಮಾನಿಸುವಂತಿಲ್ಲ'' ಎಂದರು ನಟ ಚಿರಂಜೀವಿ.

    ನನ್ನ ಮೇಲೆ ನಂಬಿಕೆ ಇಟ್ಟು ಸಂಯಮದಿಂದಿರಿ: ಚಿರಂಜೀವಿ

    ನನ್ನ ಮೇಲೆ ನಂಬಿಕೆ ಇಟ್ಟು ಸಂಯಮದಿಂದಿರಿ: ಚಿರಂಜೀವಿ

    ''ಹೊಸ ಕರಡು ತಯಾರಿಸಿ ನಮ್ಮ ಅಭಿಪ್ರಾಯವನ್ನೂ ಮನ್ನಿಸಿ ಹೊಸ ಆದೇಶ ಹೊರಡಿಸುವುದಾಗಿ ಜಗನ್ ಹೇಳಿದ್ದಾರೆ. ಇದು ಬಹಳ ದೊಡ್ಡ ಶುಭ ವಾರ್ತೆ. ಸಿನಿಮಾ ರಂಗದ ಸದಸ್ಯನಾಗಿ, ಚಿತ್ರರಂಗದ ಇತರರಿಗೆ ಕೇಳಿಕೊಳ್ಳುವುದೇನೆಂದರೆ ಯಾರೂ ಸಹ ಧೈರ್ಯಗೆಡಬೇಡಿ, ಆತಂಕ ಪಡಬೇಡಿ. ಆತಂಕದಿಂದ ಯಾರ ವಿರೋಧವಾಗಿಯೂ ಹೇಳಿಕೆಗಳನ್ನು ನೀಡಬೇಡಿ. ಚಿತ್ರರಂಗಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಜಗನ್ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ಭರವಸೆ ನನಗೆ ಇದೆ. ನನ್ನ ಮೇಲೆ ನಂಬಿಕೆ ಇಟ್ಟು ನೀವು ಕೆಲ ಕಾಲ ಸಂಯಮದಿಂದ ಇರಿ'' ಎಂದು ಚಿರಂಜೀವಿ ಮನವಿ ಮಾಡಿಕೊಂಡಿದ್ದಾರೆ.

    ದಿನಕ್ಕೆ ಐದು ಶೋ ಇಡುವ ಬಗ್ಗೆಯೂ ಚರ್ಚೆ: ಚಿರಂಜೀವಿ

    ದಿನಕ್ಕೆ ಐದು ಶೋ ಇಡುವ ಬಗ್ಗೆಯೂ ಚರ್ಚೆ: ಚಿರಂಜೀವಿ

    ''ಇನ್ನು ಹತ್ತು, ಹದಿನೈದು ದಿನಗಳ ಒಳಗಾಗಿ ಚಿತ್ರರಂಗಕ್ಕೆ ಹಾಗೂ ಪ್ರೇಕ್ಷಕರಿಗೆ ಇಬ್ಬರಿಗೂ ಅನುಕೂಲವಾಗುವಂತಹಾ ಆದೇಶವನ್ನು ಸರ್ಕಾರ ಹೊರಡಿಸುತ್ತದೆ ಎಂಬ ನಿರೀಕ್ಷೆ ಇದೆ'' ಎಂದ ಚಿರಂಜೀವಿ, ''ಚಿತ್ರಮಂದಿರಗಳಲ್ಲಿ ಐದನೇ ಶೋ ಸಹ ಇರಬೇಕು ಎಂಬ ಬೇಡಿಕೆಯನ್ನು ಸಣ್ಣ ಸಿನಿಮಾಗಳ ನಿರ್ಮಾಪಕರು ಇಟ್ಟಿದ್ದು ಅದನ್ನು ಸಹ ಜಗನ್ ಮುಂದೆ ಇಟ್ಟಿದ್ದೇನೆ. ಅದಕ್ಕೂ ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನಾನು ಅವರ ಮುಂದೆ ಯಾವುದೇ ಮನವಿಯನ್ನು ಅವರು ನೇರವಾಗಿ ತೆಗೆದು ಹಾಕದೆ ಎಲ್ಲವನ್ನೂ ಸಹಾನುಭೂತಿಯಿಂದ ಕೇಳಿಸಿಕೊಂಡು, ಎಲ್ಲ ಮನವಿಗಳನ್ನು ತೆರೆದ ಹೃದಯದಿಂದ ಪರಿಶೀಲಿಸುವುದಾಗಿ ಹೇಳಿದ್ದಾರೆ'' ಎಂದು ಚಿರಂಜೀವಿ ಮಾಹಿತಿ ನೀಡಿದರು.

    ಚಿತ್ರರಂಗದೊಡನೆ ಚರ್ಚಿಸುತ್ತೇನೆ: ಚಿರಂಜೀವಿ

    ಚಿತ್ರರಂಗದೊಡನೆ ಚರ್ಚಿಸುತ್ತೇನೆ: ಚಿರಂಜೀವಿ

    ''ಜಗನ್ ಜೊತೆ ನಾನು ಮಾಡಿರುವ ಸಭೆಯ ಎಲ್ಲ ಅಂಶಗಳನ್ನು ನಾನು ನಮ್ಮ ಸಿನಿಮಾ ರಂಗದ ಪ್ರಮುಖರಿಗೆ ತಿಳಿಸುತ್ತೇನೆ. ಅಸೋಸಿಯೇಷನ್, ಗಿಲ್ಡ್ ಇತರೆ ಸಂಘಟನೆಗಳ ಪ್ರಮುಖರು, ಸಣ್ಣ, ದೊಡ್ಡ ಸಿನಿಮಾಗಳ ನಿರ್ಮಾಪಕರು ಎಲ್ಲರನ್ನೂ ಕರೆಸಿ ಸಭೆ ನಡೆಸಿ ಅವರಿಗೆ ಜಗನ್ ಹಾಗೂ ನನ್ನ ನಡುವೆ ನಡೆದ ಸಭೆಯ ಅಂಶಗಳನ್ನು ತಿಳಿಸುತ್ತೇನೆ. ಸಭೆಯಲ್ಲಿ ಏನಾದರೂ ಹೊಸ ಸಲಹೆ, ಸೂಚನೆಗಳು ದೊರೆತರೆ ಅವನ್ನು ಸಹ ಜಗನ್‌ಗೆ ತಿಳಿಸುವ ಕಾರ್ಯವನ್ನು ನಾನು ಮಾಡುತ್ತೇನೆ. ಆದಷ್ಟು ಬೇಗ ಈ ಸಮಸ್ಯೆಗೆ ಪೂರ್ಣ ವಿರಾಮ ಇಡುವ ಕಾರ್ಯವನ್ನು ಎಲ್ಲರ ಸಹಕಾರದೊಂದಿಗೆ ಮಾಡುತ್ತೇನೆ'' ಎಂದಿದ್ದಾರೆ ಚಿರಂಜೀವಿ.

    English summary
    Actor Chiranjeevi said meeting with CM Jagan Mohan Reddy is very fruitful and He also said Jagan agreed to to movie industry's request and he is ready pass new orders regarding ticket price issue.
    Thursday, January 13, 2022, 20:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X