ಕೊರೊನಾ ಪರೀಕ್ಷೆಯಲ್ಲಿ ಎಡವಟ್ಟು: ನಟ ಚಿರಂಜೀವಿಗೆ ಕೊರೊನಾ ಸೋಂಕೇ ಇಲ್ಲ
ತೆಲುಗು ನಟ ಚಿರಂಜೀವಿಗೆ ಕೊರೊನಾ ನೆಗೆಟಿವ್ ಬಂದಿದೆ. ಗುರುವಾರ ಕೋವಿಡ್-19 ಪರೀಕ್ಷೆ ಮಾಡಿಸಿರುವ ಚಿರಂಜೀವಿಗೆ ಸೋಂಕು ಇಲ್ಲ ಎನ್ನುವುದು ದೃಢವಾಗಿದೆ. ವೈದ್ಯರ ತಂಡ ಮೂರು ವಿಭಿನ್ನ ರೀತಿಯ ಪರೀಕ್ಷೆ ಮಾಡಿದ್ದಾರೆ, ಬಳಿಕ ಕೊರಾನಾ ನೆಗೆಟಿವ್ ಇದೆ ಎಂದು ಹೇಳಿರುವುದಾಗಿ ನಟ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಈ ಮೊದಲು ಮೆಗಾ ಸ್ಟಾರ್ ಗೆ ಕೊರೊನಾ ಪಾಸಿಟಿವ್ ಅಂತ ವರದಿ ನೀಡಲಾಗಿತ್ತು. RT PCR ಕಿಟ್ ದೋಷದಿಂದ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಆದರೆ ಕೊರೊನಾ ಸೋಂಕು ಇಲ್ಲ, ಆರೋಗ್ಯವಾಗಿರುವುದಾಗಿ ಚಿರಂಜೀವಿ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ಚಿರಂಜೀವಿ, 'ವೈದ್ಯರತಂಡ ಮೂರು ವಿಭಿನ್ನ ಪರೀಕ್ಷೆಗಳನ್ನು ಮಾಡಿದ್ದಾರೆ. ನನಗೆ ಕೊರೊನಾ ನೆಗೆಟಿವ್ ಬಂದಿದೆ. ಈ ಮೊದಲು ಬಂದ ವರದಿಯಲ್ಲಿ ಲೋಪವಿತ್ತು. RT PCR ದೋಷದಿಂದ ವರದಿ ಪಾಸಿಟಿವ್ ತೋರಿಸಿತ್ತು. ಈ ಸಮಯದಲ್ಲಿ ನೀವೆಲ್ಲರೂ ತೋರಿಸಿದ ಕಾಳಜಿ, ಪ್ರೀತಿಗಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ.

ನವೆಂಬರ್ 9ರಂದು ಚಿರಂಜೀವಿ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದರು. ಆಚಾರ್ಯ ಸಿನಿಮಾದ ಚಿತ್ರೀಕರಣಕ್ಕೆ ಹೊರಡುವ ಮೊದಲು ನಿಯಮದಂತೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಹೋಮ್ ಕ್ವಾರಂಟೈನ್ ನಲ್ಲಿ ಇರುವುದಾಗಿ ಚಿರಂಜೀವಿ ಹೇಳಿದ್ದರು.
ಚಿರಂಜೀವಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಹುನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣವನ್ನು ಮುಂದಕ್ಕೆ ಹಾಕಲಾಗಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಇದೀಗ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನಲೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.


Click it and Unblock the Notifications











