"ಸೌಂದರ್ಯಾ ಹತ್ಯೆಗೆ ಕಾರಣ ಮೋಹನ್ ಬಾಬು, ನನಗೂ ಜೀವ ಬೆದರಿಕೆ ಇದೆ"; ಟಾಲಿವುಡ್ ಲೆಜೆಂಡ್ ವಿರುದ್ಧ ದೂರು
ತೆಲುಗು ಚಿತ್ರರಂಗ ದಿಗ್ಗಜ ಮೋಹನ್ ಬಾಬು ಕಳೆದ ಕೆಲವು ದಿನಗಳಿಂದ ವಿವಾದದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ. ಅವರ ಕೌಟುಂಬಿಕ ಜೀವನ ಬೀದಿಗೆ ಬಂದಿದೆ. ಮಕ್ಕಳಿಬ್ಬರೂ ಆಸ್ತಿಗಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್ ಅಂತ ಫ್ಯಾಮಿಲಿ ಮ್ಯಾಟರ್ ವಿವಾದದ ಗೂಡಾಗಿದೆ. ಮೋಹನ್ ಬಾಬು ಇಬ್ಬರು ಮಕ್ಕಳು ಮಂಚು ಮನೋಜ್ ಹಾಗೂ ಮಂಚು ವಿಷ್ಣು ಆಸ್ತಿಗಾಗಿ ಕಿತ್ತಾಡುತ್ತಿದ್ದು, ಹೊಡೆದಾಡಿಕೊಳ್ಳುವ ಮಟ್ಟಕ್ಕೂ ಹೋಗಿದೆ.
ಮಕ್ಕಳ ಕಿತ್ತಾಟ ತಲೆ ಬಿಸಿಯಲ್ಲಿರುವ ಟಾಲಿವುಡ್ ಲೆಜೆಂಡ್ ಮೋಹನ್ ಬಾಬುಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಖಮ್ಮಂ ಜಿಲ್ಲೆಯಲ್ಲಿ ಈ ಹಿರಿಯ ನಟನ ವಿರುದ್ಧ ದೂರು ದಾಖಲಿಸಲಾಗಿದೆ. ಮೋಹನ್ ಬಾಬು ವಿರುದ್ಧ ನಾಗರೀಕರೊಬ್ಬರು ದೂರ ದಾಖಲಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ದೂರು ಗಂಭೀರ ಎನಿಸಿದ್ದರೂ, ಜನರಿಗೆ ನಂಬುವುದಕ್ಕೆ ಅಸಾಧ್ಯವೆನಿಸಿದೆ.

ನಟಿ ಸೌಂದರ್ಯಾ ಸಾವಿಗೆ ತೆಲುಗು ಲೆಜೆಂಡರಿ ಆಕ್ಟರ್ ಮೋಹನ್ ಬಾಬು ಕಾರಣ ಅಂತ ಆರೋಪ ಮಾಡಲಾಗುತ್ತಿದೆ. ಇಷ್ಟೇ ಅಲ್ಲ ಸೌಂದರ್ಯಾ ಹೆಸರಿನಲ್ಲಿರುವ ಜಮೀನನ್ನು ಮೋಹನ್ ಬಾಬು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆಂದು ದೂರಲಾಗಿದೆ. ಅಷ್ಟಕ್ಕೂ ದೂರು ಕೊಟ್ಟವರು ಯಾರು? ಈ ದೂರಿನಲ್ಲಿ ಅಂತಹದ್ದೇನಿದೆ? ದಿಢೀರನೇ ಸೌಂದರ್ಯಾ ಸಾವು ತಳುಕು ಹಾಕಿಕೊಂಡಿದ್ದೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೋಹನ್ ಬಾಬು ಹಾಗೂ ಸೌಂದರ್ಯಾ ಒಟ್ಟಿಗೆ ಸಿನಿಮಾಗಳನ್ನು ಮಾಡಿದ್ದಾರೆ. ಸೌಂದರ್ಯಾ ಅಪಘಾತದಲ್ಲಿ ಸಾಯುವುದಕ್ಕೂ ಮುನ್ನ ಮೋಹನ್ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದರು. ಅದುವೇ 'ಶಿವ ಶಂಕರ'. ಈ ಸಿನಿಮಾದಲ್ಲಿ ಮೋಹನ್ ಬಾಬು ಹಾಗೂ ಸೌಂದರ್ಯಾ ಕಾಂಬಿನೇಷನ್‌ನಲ್ಲಿ ಶೇ.65ರಷ್ಟು ಚಿತ್ರೀಕರಣ ಮುಗಿದಿತ್ತು. ಆ ವೇಳೆ ಸೌಂದರ್ಯಾ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆಂದು ಹೋಗಿದ್ದರು. ಈ ವೇಳೆ ಹೆಲಿಕಾಪ್ಟರ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಈ ಘಟನೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ನಂಬಲಾರದ ಸುದ್ದಿಯಾಗಿತ್ತು.

ಕಾಪುಗಂಟಿ ರಾಜೇಂದ್ರ ಎಂಬು ನಿರ್ದೇಶಕರು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಇದೇ ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದರು. ಮೋಹನ್ ಬಾಬು ಮನಸ್ಸು ಮಾಡಿದ್ದರೆ, ಸೌಂದರ್ಯಾ ಸಾವನ್ನು ತಡೆಯಬಹುದಿತ್ತು. ಆದರೆ, ಅಂದು ಹಾಗಲಿಲ್ಲ ಎಂದಿದ್ದರು. ಮೋಹನ್ ಬಾಬು ಸಾಮಾನ್ಯವಾಗಿ ಒಂದು ಸಿನಿಮಾ ನಡೆಯುವಾಗ ಚಿತ್ರತಂಡದ ಸದಸ್ಯರನ್ನು ಬೇರೆ ಕೆಲಸ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಆದರೆ, ಸೌಂದರ್ಯಾ ವಿಚಾರದಲ್ಲಿ ಹಾಗೆ ನಡೆದುಕೊಳ್ಳಲಿಲ್ಲ ಎಂದಿದ್ದರು.
ಈಗ ಖಮ್ಮಂ ಜಿಲ್ಲೆಯ ನಿವಾಸಿಯೊಬ್ಬ ಮೋಹನ್ ಬಾಬು ವಿರುದ್ಧ ಜಿಲ್ಲಾಧಿಕಾರಿ ಹಾಗೂ ಎಸಿಪಿಗೆ ದೂರನ್ನು ನೀಡಿದ್ದಾನೆ. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸೌಂದರ್ಯಾ ಶಂಷಾಬಾದ್ ವ್ಯಾಪ್ತಿಯ ಜಲ್ಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ಖರೀದಿ ಮಾಡಿದ್ದರು. ಆ ಭೂಮಿಯ ಮೇಲೆ ಮೋಹನ್ ಬಾಬು ಕಣ್ಣು ಬಿದ್ದಿತ್ತು. ಸೌಂದರ್ಯಾ ಬಳಿಕ ಆ ಭೂಮಿಯನ್ನು ಮಾರಾಟ ಮಾಡುವಂತೆ ಕೇಳಿಕೊಂಡಿದ್ದರು. ಆದರೆ, ಸೌಂದರ್ಯಾ ಸಹೋದರ ಅಮರ್‌ನಾಥ್ ಭೂಮಿ ಮಾರಾಟ ಮಾಡುವುದಕ್ಕೆ ನಿರಾಕರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ದೂರಿನಲ್ಲಿ ಸೌಂದರ್ಯಾ ಹಾಗೂ ಅವರ ಕುಟುಂಬ ಭೂಮಿಯನ್ನು ಮಾರಾಟ ಮಾಡುವುದಕ್ಕೆ ನಿರಾಕರಿಸಿದ್ದರಿಂದ ಅವರ ಮೇಲೆ ಒತ್ತಡವನ್ನು ಹೇರಲಾಯಿತು. ಏಪ್ರಿಲ್ 17, 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ನಡೆದ ಬಳಿಕ ಜಲ್ಪಲ್ಲಿಯಲ್ಲಿರು ಸೌಂದರ್ಯಾಗೆ ಸೇರಿದ 6 ಎಕರೆ ಭೂಮಿಯನ್ನು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಮೋಹನ್ ಬಾಬು ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿ ಸೌಂದರ್ಯಾಗೆ ಸೇರಿದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಹಾಗೇ ವಶಕ್ಕೆ ಪಡೆದುಕೊಂಡ ಜಮೀನನ್ನು ಅನಾಥಾಶ್ರಮ, ಸೇನೆಯಲ್ಲಿ ಕೆಲಸ ಮಾಡುವ ಯೋಧರಿಗೆ, ಪೊಲೀಸರಿಗೆ ಹಾಗೂ ಮಾಧ್ಯಮ ಸ್ನೇಹಿತರಿಗೆ ಹಂಚಿಕೆ ಮಾಡಬೇಕು. ಜಲ್ಪಲ್ಲಿಯಲ್ಲಿರುವ 6 ಎಕರೆ ಜಮೀನಲ್ಲಿರುವ ಅತಿಥಿ ಗೃಹವನ್ನು ಸಹ ಸ್ವಾಧೀನಪಡಿಸಿಕೊಳ್ಳಬೇಕು ಎಂದು ದೂರಿನಲ್ಲಿ ಚಿಟ್ಟಿಮಲ್ಲಿ ಮನವಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಎಸಿಪಿ ಹಾಗೂ ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇಲ್ಲಿಗೆ ಸುಮ್ಮನಾಗಿಲ್ಲ. ಚಿಟ್ಟಿಮಲ್ಲು ಮೋಹನ್ ಬಾಬು ಕೌಟುಂಬಿಕ ಜಗಳದ ಬಗ್ಗೆನೂ ಪ್ರಸ್ತಾಪ ಮಾಡಿದ್ದಾನೆ. ಈಗಾಗಲೇ ಮೋಹನ್ ಬಾಬು ಇಬ್ಬರು ಪುತ್ರರು ಮಂಜು ವಿಷ್ಣು ಹಾಗೂ ಮಂಚು ಮನೋಜ್ ನಡುವೆ ಜಗಳ ನಡೆಯುತ್ತಿದೆ. ಇವರಲ್ಲಿ ಮಂಚು ಮನೋಜ್‌ಗೆ ನ್ಯಾಯ ಸಿಗಬೇಕು ಎಂದು ಒತ್ತಾಯ ಮಾಡಿದ್ದಾನೆ. ಇದೇ ವೇಳೆ ಮಂಚು ಮೋಹನ್ ಬಾಬುರಿಂದ ತನಗೆ ಜೀವ ಬೆದರಿಕೆಯಿದೆ ಎಂದು ದೂರಿದ್ದಾನೆ. ಈ ಕಾರಣಕ್ಕೆ ತನಗೆ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಟಾಲಿವುಡ್ ಲೆಜೆಂಡ್ ಮೋಹನ್ ಬಾಬು ವಿರುದ್ಧ ಚಿಟ್ಟಿಮಲ್ಲು ಮಾಡಿದ ಆರೋಪದಲ್ಲಿ ಎಷ್ಟು ಸತ್ಯವಿದೆ ಅನ್ನೋದು ಗೊತ್ತಿಲ್ಲ. ಕೆಲವು ಇದು ಪ್ರಚಾರಕ್ಕೆ ಮಾಡುತ್ತಿರುವ ಕೆಲಸ ಎಂದು ದೂರಿದ್ದಾರೆ. ಆದರೆ, ಸಾಮಾನ್ಯ ವ್ಯಕ್ತಿಯೊಬ್ಬ ನೀಡಿದ ದೂರನ್ನು ಪೊಲೀಸರು ಯಾವ ರೀತಿ ಪರಿಗಣಿಸುತ್ತಾರೆ? ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ? ತನಿಖೆ ಮಾಡುತ್ತಾರಾ? ಇಲ್ಲಾ ಕೈ ಬಿಡುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











