ಸೋಪಿಗೆ ಲಕ್ಷ್ಮಿ ಪೂಜೆ ಮಾಡಿ ತೆಲುಗು ಹಾಸ್ಯನಟ ಅಲಿ ವಿವಾದ; ಕೊನೆಗೂ ಕ್ಷಮೆಯಾಚನೆ
ಸಿನಿಮಾ ತಾರೆಯರು ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಅವರ ಪ್ರತಿ ನಡೆಯನ್ನು ಜನ ಗಮನಿಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದ ಜಮಾನದಲ್ಲಿ ಬಹಳ ಬೇಗ ಸಿಕ್ಕಿ ಬೀಳುತ್ತಾರೆ. ಸದ್ಯ ತೆಲುಗು ನಟಿ ಅಲಿ ಸೋಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಘರ್ ಸೋಪ್ ಜಾಹೀರಾತಿನಲ್ಲಿ ಅಲಿ ನಟಿಸಿದ್ದರು. ಸೋಪಿಗೆ ಅವರು ಪೂಜೆ ಮಾಡುವಂತೆ ಜಾಹೀರಾತು ಚಿತ್ರೀಕರಿಸಲಾಗಿತ್ತು. ಸೋಪಿಗೆ ಪುಷ್ಪಾರ್ಚನೆ ಮಾಡುವುದು, ಹಿನ್ನೆಲೆಯಲ್ಲಿ ಲಕ್ಷ್ಮಿ ಮಂತ್ರದ ಆಡಿಯೋ ಕೇಳಿಸುತ್ತದೆ. ಸೋಪಿಗೆ ಲಕ್ಷ್ಮಿ ಪೂಜೆ ಯಾಕೆ? ಲಕ್ಷ್ಮಿ ಸ್ತ್ರೋತ್ರವನ್ನು ಜಾಹೀರಾತಿಗೆ ಬಳಸಿಕೊಂಡಿದ್ದು ಸರಿಯಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಜಾಹೀರಾತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರರಂಗದಿಂದ ಅಲಿ ಅವರನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದರು. ಕೂಡಲೇ ತಪ್ಪಿನ ಅರಿವಾಗಿ ನಟ ಅಲಿ ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ.. ಘರ್ ಸೋಪಿನ ಜಾಹೀರಾತು ಅದು.. 'ದೇವುಡು ಚೇಸಿನ ಮನುಷುಲು' ಚಿತ್ರದಲ್ಲಿ ನಾನೇ ಆ ಸಣ್ಣ ದೃಶ್ಯದಲ್ಲಿ ನಟಿಸಿದ್ದೆ. ಅದನ್ನು ಜಾಹಿರಾತಿಗೆ ಬಳಸಿಕೊಂಡಿದ್ದೆವು. ಬಾಂಬೆ ಕಂಪನಿ ಸೋಪ್ ಜಾಹಿರಾತಿಗೆ ಆ ರೀತಿ ಮಾಡಲು ಹೇಳಿದ್ರು. ಕೆಲವರು ಅದು ಸರಿಯಲ್ಲ ಎಂದರು. ಹಾಗಾಗಿ ಕೂಡಲೇ ಅದನ್ನು ಡಿಲೀಟ್ ಮಾಡಲಾಗಿದೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ನಟಿ ಆಲಿ ವೀಡಿಯೋದಲ್ಲಿ ತಿಳಿಸಿದ್ದಾರೆ.
ಅಲಿ ಮಾತ್ರವಲ್ಲ ಸೋಪ್ ಕಂಪನಿ ಕೂಡ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕ್ರಿಯೇಟಿವಿಟಿ ಹೆಸರಿನಲ್ಲಿ ಜನರ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ. ಪವಿತ್ರವಾದ ಲಕ್ಷ್ಮಿ ಸ್ತೋತ್ರವನ್ನು ಹೀಗೆ ತಮ್ಮ ಉತ್ಪನ್ನದ ಜಾಹೀರಾತಿಗೆ ಬಳಸಿಕೊಳ್ಳುವುದು ತಪ್ಪು ಎಂದಿದ್ದಾರೆ. ಅಲಿ ಕೂಡಲೇ ತಪ್ಪು ತಿದ್ದಿಕೊಂಡು ಬಚಾವ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನೂರಾರು ಸಿನಿಮಾಗಳಲ್ಲಿ ಅಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ರಾಜಮಂಡ್ರಿ ಮೂಲದ ಮೊಹಮ್ಮದ್ ಆಲಿ ಬಾಲ್ಯದಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 'ಸೀತಾಕೊಕ ಚಿಲಕ' ಚಿತ್ರದಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದರು. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳಲ್ಲಿ ಆಲಿ ಒಳ್ಳೆ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೆಲ ಸಿನಿಮಾಗಳಲ್ಲಿ ಹೀರೊ ಆಗಿ ಕೂಡ ಅಲಿ ಕಾಣಿಸಿಕೊಂಡಿದ್ದರು. ತಮಿಳು, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ಆಲಿ ಬಣ್ಣ ಹಚ್ಚಿದ್ದಾರೆ. ಉಪೇಂದ್ರ ನಿರ್ದೇಶಿಸಿ ನಟಿಸಿದ 'ಸೂಪರ್', ಕೋಮಲ್ ನಟನೆಯ 'ನಮೋ ಭೂತಾತ್ಮ' ಹಾಗೂ 'ಕೆಂಪೇಗೌಡ-2' ಸಿನಿಮಾಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದರು. ಇತ್ತೀಚೆಗೆ ಅಲಿ ಕ್ರೇಜ್ ಕಮ್ಮಿ ಆಗಿದೆ. ಅಷ್ಟೇನು ಅವಕಾಶಗಳು ಸಿಗುತ್ತಿಲ್ಲ.
ಕಿರುತೆರೆ ನಿರೂಪಕರಾಗಿ ಕೂಡ ಅಲಿ ಗುರ್ತಿಸಿಕೊಂಡಿದ್ದಾರೆ. 'ಆಲಿ 420', 'ಆಲಿತೋ ಜಾಲಿಗಾ', 'ಆಲಿತೋ ಸರದಾಗ' ಹಾಗೂ 'ಯಮಲೀಲಾ ಆ ತರುವಾತ' ಎಂಬ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಗಮನ ಸೆಳೆದಿದ್ದರು. ಡಬ್ಬಿಂಗ್ ಕಲಾವಿದನಾಗಿ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ನೇಪಾಳಿ ಚಿತ್ರದಲ್ಲೂ ಅವರು ಬಣ್ಣ ಹಚ್ಚಿದ್ದರು.


Click it and Unblock the Notifications