ಜಟಾಯು ಎದುರು ರಾಘವ ರಾಮ ಪ್ರಭಾಸ್: 'ಆದಿಪುರುಷ್' ಕಾನ್ಸೆಪ್ಟ್ ಪೋಸ್ಟರ್ ವೈರಲ್!
'ಬಾಹುಬಲಿ' ಪ್ರಭಾಸ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್'. ಓಂ ರಾವುತ್ ನಿರ್ದೇಶನದಲ್ಲಿ ರಾಮಾಯಣ ಕಾವ್ಯ ಆಧರಿಸಿ ಈ ಸಿನಿಮಾ ಮೂಡಿ ಬರುತ್ತಿದೆ. ರಾಘವ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ ಜಾನಕಿಯಾಗಿ ಕೃತಿ ಸನೊನ್ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್ ಅಬ್ಬರಿಸಿದ್ದು, ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಸದ್ಯ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ವೈರಲ್ ಆಗಿದೆ.
'ಆದಿಪುರುಷ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈವರೆಗೆ ರಿಲೀಸ್ ಆಗಿಲ್ಲ. ಸಂಕ್ರಾಂತಿ ಹಬ್ಬ ಸಮಯದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದ್ದು, ಶೀಘ್ರದಲ್ಲೆ ಚಿತ್ರತಂಡ ಸಿನಿಮಾ ಪ್ರಮೋಷನ್ ಶುರು ಮಾಡಲಿದೆ. ಅಧಿಕೃತವಾಗಿ ಸಿನಿಮಾ ಪೋಸ್ಟರ್ ಬರದೇ ಇದ್ದರೂ ಫ್ಯಾನ್ ಮೇಡ್ ಪೋಸ್ಟರ್‌ಗಳು ರಾರಾಜಿಸುತ್ತಿದೆ. 'ಆದಿಪುರುಷ್' ಕಾನ್ಸೆಪ್ಟ್ ಆರ್ಟ್ ಹೆಸರಿನಲ್ಲಿ ಇದೀಗ ಬೊಂಬಾಟ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಸಂಚಲನ ಸೃಷ್ಟಿಸಿದ್ದಾರೆ. ಯಂಗ್ ರೆಬಲ್ ಸ್ಟಾರ್ ನಟನೆಯ 'ಆದಿಪುರುಷ್' ಸಿನಿಮಾ ಡಿಜಿಟಲ್ ರೈಟ್ಸ್ 250 ಕೋಟಿ ರೂ.ಗೆ ಮಾರಾಟವಾಗಿದೆ ಅನ್ನುವ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. 500 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರವನ್ನು ಬಹಳ ರೋಚಕವಾಗಿ ಕಟ್ಟಿಕೊಡಲಾಗಿದೆ. ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಈ ಚಿತ್ರವನ್ನ ತಿದ್ದಿ ತೀಡಲಾಗಿದೆ. ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವ ನಿರೀಕ್ಷೆಯಿದೆ.

ಜಟಾಯು ಎದುರು 'ಆದಿಪುರುಷ್' ಪ್ರಭಾಸ್
ರಾಮಾಯಣ ಕಥೆಯಲ್ಲಿ ಸೀತಾಮಾತೆಯನ್ನು ಹುಡುಕಲು ರಾಮನಿಗೆ ಮೊದಲು ಸಹಾಯ ಮಾಡಿದ್ದು ಜಟಾಯು ಪಕ್ಷಿ. ಸದ್ಯ ವೈರಲ್ ಆಗಿರುವ ಪೋಸ್ಟರ್‌ನಲ್ಲಿ ಶ್ರೀರಾಮ ಪ್ರಭಾಸ್ ಜಟಾಯು ಪಕ್ಷಿ ಎದುರು ನಿಂತಿರುವ ಚಿತ್ರಣವನ್ನು ನೋಡಬಹುದು. ಹಿಂದೆ ಲಕ್ಷ್ಮಣ ಕೂಡ ಇದ್ದಾನೆ. ಚಿತ್ರದಲ್ಲಿ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದು ಪೋಸ್ಟರ್‌ನಲ್ಲಿ ಆಂಜನೇಯನನ್ನು ನೋಡಬಹುದು.

ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ 'ಆದಿಪುರುಷ್'
ಈ ಕಾನ್ಸೆಪ್ಟ್ ಆರ್ಟ್ ಪೋಸ್ಟರ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಪೋಸ್ಟರ್‌ಗೆ ಮೆಚ್ಚುಗೆ ಸೂಚಿಸಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಾನ್ಸೆಪ್ಟ್ ಪೋಸ್ಟರ್ ಇಷ್ಟು ಕಿಕ್ ಕೊಡ್ತಿದ್ರೆ, ಅಫೀಷಿಯಲ್ ಪೋಸ್ಟರ್ ಇನ್ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿಕೊಂಡು ಥ್ರಿಲ್ಲಾಗಿದ್ದಾರೆ. ಕೆಲವೇ ಕ್ಷಣಗಳನ್ನು ಸಾವಿರಾರು ಟ್ವೀಟ್ ಮಾಡಿದ ಪರಿಣಾಮ 'ಆದಿಪುರುಷ್' ಟ್ಯಾಗ್ ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿದೆ.

ಅಧಿಕೃತ ಪೋಸ್ಟರ್ ಅಲ್ವಾ?
ಸದ್ಯ ವೈರಲ್ ಆಗಿರುವ 'ಆದಿಪುರುಷ್' ಕಾನ್ಸೆಪ್ಟ್ ಆರ್ಟ್ ಪೋಸ್ಟರ್ ಅಧಿಕೃತ ಅಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. 2 ತಿಂಗಳ ಹಿಂದೆಯೇ ಈ ಫೋಟೊಗಳು ಆರ್ಟ್ ಸ್ಟೇಷನ್‌ನಲ್ಲಿ ಇತ್ತು. ನಿಮಿಷ್ ಎಂಬುವವರು ಇದನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತ ಆಗಿರಲಿ, ಆಗದೇ ಇರಲಿ ಪೋಸ್ಟರ್ ಅಂತೂ ಅಭಿಮಾನಿಗಳ ಮನಗೆದ್ದಿದೆ. ಆದಷ್ಟು ಬೇಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ 'ಆದಿಪುರುಷ್' ಆಗಮನ
ಬಹಳ ಹಿಂದೆಯೇ ಸೆಟ್ಟೇರಿದ ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗುವುದು ತಡವಾಗುತ್ತಿದೆ. ನಿರ್ದೇಶಕ ಓಂ ರಾವುತ್ ಎರಡು ಬಾರಿ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು, ದೇಶ ವಿದೇಶದ ಹತ್ತಾರು ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಕೆಲಸ ಚಾಲ್ತಿಯಲ್ಲಿದೆ.


Click it and Unblock the Notifications











