"ಶಿರಡಿ ಸಾಯಿಬಾಬ ದೇವರಲ್ಲ" ಎಂದು ನಟಿ ಮಾಧವಿ ಲತಾ ವಿವಾದಾತ್ಮಕ ಹೇಳಿಕೆ; FIR ದಾಖಲು
ಸೆಲೆಬ್ರೆಟಿಗಳು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಆಗುವುದು ಹೊಸದೇನು ಅಲ್ಲ. ಕೆಲವೊಮ್ಮೆ ಬಾಯ್ತಪ್ಪಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಇನ್ನು ಕೆಲವು ಬಾರಿ ಎಲ್ಲಾ ಗೊತ್ತಿದ್ದು ಮಾತನಾಡಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಶಿರಡಿ ಸಾಯಿಬಾಬ ದೇವರಲ್ಲ ಎಂದು ಪ್ರಚಾರ ಮಾಡಿದ್ದಕ್ಕೆ ನಟಿ ಮಾಧವಿ ಲತಾ ವಿರುದ್ಧ ದೂರು ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ನಟ ಮಾಧವಿ ಲತಾ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಯಿಬಾಬಾ ದೇವರಲ್ಲ ಎಂದು ಮಾಧವಿ ಲತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಹೈದರಾಬಾದ್‌ನ ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಶಿರಡಿ ಸಾಯಿ ಭಕ್ತ ಐಕ್ಯ ವೇದಿಕೆ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸದ್ಯ ದೂರು ಆಧರಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಡಿಜಿಟಲ್ ಮಾಹಿತಿ ಸಂಗ್ರಹಿಸಿದ್ದಾರೆ. ಮಾಧವಿ ಲತಾ ಮಾತ್ರವಲ್ಲ ಆಕೆಯ ಕಾಮೆಂಟ್‌ಗಳನ್ನು ಬೆಂಬಲಿಸಿ ಸಂದರ್ಶನಗಳನ್ನು ನಡೆಸಿ ವೈರಲ್ ಮಾಡಿದ ಕೆಲವು ಯೂಟ್ಯೂಬ್ ಚಾನೆಲ್‌ಗಳು, ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಳೆ(ಡಿಸೆಂಬರ್ 30) ಎಲ್ಲರೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿ ಸೂಚಿಸಲಾಗಿದೆ.
ನಟಿ ಮಾಧವಿ ಲತಾ ಇತ್ತೀಚೆಗೆ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಬಿಜೆಪಿಗೆ ಬೆಂಬಲ ಸೂಚಿಸುತ್ತಾ ಬರ್ತಿದ್ದಾರೆ. ಸಾಯಿಬಾಬಾ ಬಗ್ಗೆ ಮಾಧವಿ ಲತಾ ಮಾಡಿದ್ದ ವೀಡಿಯೋ ವೈರಲ್ ಆಗ್ತಿದೆ. "ಸಾಯಿಬಾಬಾನನ್ನು ಹೆಚ್ಚು ಪೂಜಿಸೋದು ಬ್ರಾಹ್ಮಣರು ಹಾಗೂ ವೈಶ್ಯರು. ಸಾಯಿಬಾಬ ಸಿನಿಮಾ ಮಾಡುವವರೆಗೂ ನನ್ನ ದಕ್ಷಿಣದ ಜನರಿಗೆ ಗೊತ್ತಿರಲಿಲ್ಲ. ಮರಾಠಿ ಜನ ಪೂಜಿಸುತ್ತಿದ್ರು ಅಷ್ಟೇ" ಎಂದು ಮಾಧವಿಲತಾ ಹೇಳಿದ್ದಾರೆ.

ಶಿರಡಿಗೆ ಹೋಗಿ ನೋಡಿದ್ರೆ, ಅಲ್ಲಿ ಪುಸ್ತಕಗಳಲ್ಲಿ ಸಾಯಿಬಾಬು ಆಫ್ಘನ್ ಮುಸ್ಲಿಂ ಎಂದು ಬರೆದಿರುತ್ತಾರೆ ಎಂದು ಮಾಧವಿ ಲತಾ ಹೇಳಿರುವುದನ್ನು ನೋಡಬಹುದು. "ಅವ್ರು ಅಲ್ಲಾ ಮಾಲಿಕ್ ಅಂತಾರೆ. ಆದರೆ ನಮ್ಮ ಜನ ಹೋಗಿ ನಾಚಿಕೆ ಇಲ್ಲದೇ ಭಜನೆ ಮಾಡುತ್ತಾರೆ. ನಾವು ಸಾಯಿಬಾಬನನ್ನು ಪೂಜಿಸಲ್ಲ, ನೀವು ಯಾಕೆ ಪೂಜಿಸ್ತೀರಾ. ನಮಗೆ ಬುದ್ಧಿಯಿದೆ. ಅದಕ್ಕೆ ಪೂಜಿಸಲ್ಲ ಎಂದು ಮುಸ್ಲಿಂ ಬಾಂಧವರು ಹೇಳುತ್ತಾರೆ.
ಸಾಯಿಬಾಬ ಕನಸಿನಲ್ಲಿ ಬರ್ತಾನೆ ಅಂತಾರೆ. ಅದೇನೋ ಗೊತ್ತಿಲ್ಲ ನಮ್ಮ ರಾಮ, ಕೃಷ್ಣ ಬರಲ್ಲ. ಯಾಕಂದ್ರೆ ಅವ್ರು ದೇವರು. ಅದಕ್ಕೆ ಬರಲ್ಲ. ಮನುಷ್ಯರು ಸೃಷ್ಟಿಸಿದ ದೆವ್ವ ಭೂತಗಳು ಮಾತ್ರ ಕನಸಲ್ಲಿ ಬರೋದು. ನನ್ನ ಮಾತು ಹೇಳಿಕೆ ಕೆಲವರಿಗೆ ಕೋಪ ಬರಬಹುದು. ನನ್ನ ಸ್ನೇಹಿತರಲ್ಲಿ ಕೆಲವರು ಹೇಳ್ತಾರೆ ಸಾಯಿಬಾಬ ಕೃಪೆಯಿಂದ ಸಾಕಷ್ಟು ಒಳ್ಳೆದಾಯ್ತು ಅಂತಾರೆ. ನಿಮಗೆ ಒಳ್ಳೆದಾಗಿದ್ದು ನಿಮ್ಮ ಟೈಂ ಚೆನ್ನಾಗಿದ್ದಿದ್ದಕ್ಕೆ ಅಷ್ಟೇ ಅಂತೀನಿ ಎಂದು ಮಾಧವಿ ಲತಾ ವೀಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು.
ಹುಬ್ಬಳ್ಳಿಯಲ್ಲಿ ತೆಲುಗು ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ಮಾಧವಿ ಲತಾ ಗುಲ್ಪರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2008ರಲ್ಲಿ 'ನಚ್ಚಾವುಲೇ' ಎಂಬ ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟಿದ್ದರು. ಮುಂದೆ 'ಸ್ನೇಹಿತಡು', 'ಅರವಿಂದ್-2', 'ಆಂಬಲಾ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.


Click it and Unblock the Notifications











