ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ, ಕೈಕುಲುಕುವಂತಿಲ್ಲ, ಅಲ್ಲು ಅರ್ಜುನ್ ಭೇಟಿಗೆ 42 ಷರತ್ತುಗಳು ನಿಜವೇ?
ಸ್ಟಾರ್ ನಟರು ಅಂದಾಕ್ಷಣ ಅಭಿಮಾನಿಗಳು ಮುತ್ತಿಕೊಳ್ಳುವುದು ಸಹಜ. ಇತ್ತೀಚೆಗೆ ಇದೇ ಕಾರಣಕ್ಕೆ ಸಾಕಷ್ಟು ನಟ, ನಟಿಯರು ಸಂಕಷ್ಟ ಎದುರಿಸಿರುವುದು ಇದೆ. ಇನ್ನು ಸೆಲೆಬ್ರೆಟಿಗಳು ಭದ್ರತೆಗಾಗಿ ಬೌನ್ಸರ್‌ಗಳನ್ನು ನೇಮಿಸಿಕೊಂಡಿರುತ್ತಾರೆ. ಅವರು ಹೋದಲ್ಲಿ ಬಂದಲ್ಲಿ ಕೆಲವೊಮ್ಮೆ ಪೊಲೀಸ್ ಭದ್ರತೆ ಕೂಡ ಇರುತ್ತದೆ. ಇದೇ ಕಾರಣಕ್ಕೆ ಅಷ್ಟು ಸುಲಭವಾಗಿ ಸ್ಟಾರ್ ನಟ, ನಟಿಯರನ್ನು ಎಲ್ಲರೂ ಭೇಟಿ ಮಾಡಲು ಸಾಧ್ಯವಿಲ್ಲ.
ತೆಲುಗು ನಟ ಅಲ್ಲು ಅರ್ಜುನ್ ಭೇಟಿ ಮಾಡಲು 42 ನಿಯಮಗಳಿವೆ, ಅವೆಲ್ಲವನ್ನೂ ಪಾಲಿಸಿದರೆ ಮಾತ್ರ ನಿಮಗೆ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂದು ಬಾಲಿವುಡ್‌ನ ಖ್ಯಾತ ಬ್ರ್ಯಾಂಡ್ ಸ್ಟ್ರ್ಯಾಟಜರ್ ಕಾವೇರಿ ಬರುವಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಭೇಟಿ ಮಾಡುವವರು ಅಲ್ಲು ಅರ್ಜುನ್ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ, ಕೈಕುಲುವಂತಿಲ್ಲ ಎಂದು ಹೇಳಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾವೇರಿ ಬರುವಾ ನಾನು ಸಾಕಷ್ಟು ಜನರೊಟ್ಟಿಗೆ ಕೆಲಸ ಮಾಡಿದ್ದೀನಿ. ಅದರಲ್ಲೂ ದಕ್ಷಿಣದ ಸೆಲೆಬ್ರೆಟಿಗಳ ಖದರ್ ಬೇರೆ ರೀತಿ ಇರುತ್ತದೆ. ದೊಡ್ಡ ತಂಡವೇ ಅವರೊಟ್ಟಿಗೆ ಬರುತ್ತದೆ. ಅಲ್ಲು ಅರ್ಜುನ್ ಭೇಟಿಗೆ ಹೋದಾಗ 42 ಷರತ್ತುಗಳ ಪಟ್ಟಿ ಕೊಟ್ಟರು. ಮ್ಯಾನೇಜರ್‌ಗೆ ಮ್ಯಾನೇಜರ್, ಆ ಮ್ಯಾನೇಜರ್‌ಗೆ ಮತ್ತೊಬ್ಬ ಹೀಗೆ ವ್ಯವಸ್ಥೆ ಇರುತ್ತೆ" ಎಂದಿದ್ದಾರೆ. "ಯಾಕೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ?" ಎಂದು ನಿರೂಪಕಿ ಕೇಳುತ್ತಿದ್ದಂತೆ "ದಟ್ಸ್ ದಿ ರೂಲ್" ಎಂದು ತಿಳಿಸಿದ್ದಾರೆ. ಫೋಟೊಶೂಟ್ ವೇಳೆ ಕೂಡ ಸಾಕಷ್ಟು ಕಠಿಣ ನಿಯಮಗಳಿರುತ್ತವೆ ಎಂದಿದ್ದಾರೆ. ಆದರೆ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗ್ತಿದೆ.
ಇದೆಲ್ಲಾ ಯಾಕೋ ಅತಿಯಾಯಿತು. ಸ್ಟಾರ್ ನಟ ಆಗಿಬಿಟ್ಟರೆ ಏನು ದೇವಲೋಕದಿಂದ ಇಳಿದುಬಂದುಬಿಟ್ಟಿದ್ದಾರಾ? ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದಾ? ಅಂತೆಲ್ಲಾ ಕೆಲವರು ಕಾಲೆಳೆಯಲು ಆರಂಭಿಸಿದ್ದರು. ಇದು ಅಲ್ಲು ಅರ್ಜುನ್ ಇಮೇಜ್‌ಗೆ ಡ್ಯಾಮೇಜ್ ಎಂದು ಗೊತ್ತಾಗುತ್ತಿದ್ದಂತೆ ಸ್ಪಷ್ಟನೆ ಸಿಕ್ಕಿದೆ. ಅಲ್ಲು ಅರ್ಜುನ್ ತಂಡದಿಂದ ಪ್ರೆಸ್‌ನೋಟ್ ರಿಲೀಸ್ ಮಾಡಿದ್ದಾರೆ.
"ಅಲ್ಲು ಅರ್ಜುನ್ ವಿರುದ್ಧದ ಹೇಳಿಕೆಗಳೆಲ್ಲಾ ನಿರಾಧಾರ ಹಾಗೂ ಸುಳ್ಳು. ಅವರು ಎಲ್ಲರನ್ನೂ ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಾರೆ. ನಾವು ಈ ಸುಳ್ಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಕಾನೂನು ತಂಡವು ಇದಕ್ಕೆ ಕಾರಣರಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಾಗಿದೆ. ದಯವಿಟ್ಟು ಸತ್ಯಾಂಶ ಗೊತ್ತಿಲ್ಲದೇ ಯಾವುದೇ ಮಾಹಿತಿಯನ್ನು ಹರಡಬೇಡಿ" ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಚಿರಂಜೀವಿ ಸೋದರಳಿಯ ಆಗಿದ್ದರೂ ಅಲ್ಲು ಅರ್ಜುನ್ ತಮ್ಮದೇ ಪ್ರತಿಭೆಯಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡುತ್ತಿದ್ದಾರೆ. 'ಪುಷ್ಪ' ಸರಣಿ ಸಿನಿಮಾಗಳನ್ನು ಮಾಡಿ ಸೂಪರ್ ಸಕ್ಸಸ್ ಕಂಡಿದ್ದಾರೆ. ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಸ್ಟಾರ್ ನಟನಾಗಿದ್ದರೂ ಬಂದ ದಾರಿ ಮರೆತ್ತಿಲ್ಲ. ಅಭಿಮಾನಿಗಳ ಜೊತೆಗೂ ಬಹಳ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ಅಭಿಮಾನಿಗಳು ಎಲ್ಲೇ ಸಿಕ್ಕರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇತ್ತೀಚೆಗೆ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಇಂತಹ ನಟನ ವಿರುದ್ಧ ಈ ಆರೋಪಗಳೆಲ್ಲಾ ಸುಳ್ಳು ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗ್ತಿದೆ.
'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸುತ್ತಿದ್ದಾರೆ. ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ಮುಂದೆ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾಗಳ ಕಡೆ ಅಲ್ಲು ಅರ್ಜುನ್ ಗಮನ ಹರಿಸಿದ್ದಾರೆ. ಖ್ಯಾತ ಫಿಲ್ಮ್ ಮೇಕರ್ಸ್ ಅವರೊಟ್ಟಿಗೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ.


Click it and Unblock the Notifications











